ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ 6ನೇ ಅಧ್ಯಾಯದ ಮೂರನೇ ಭಾಗ ಇಲ್ಲಿದೆ…
ಅಧ್ಯಾಯ 6.3
ಈ ಬಗೆಯ ಸುಧಾರಣೆಗಳು ಸುಲಭವಲ್ಲ. ಅಸಾಧ್ಯವೆನಿಸುವ ಸವಾಲುಗಳನ್ನು ಎದುರಿಸಿ ಗೆಲ್ಲಬೇಕು. ಕೆಲವಂತೂ ಗುರುಗಳೇ ಸ್ವಯಂ ಪ್ರೇರಣೆಯಿಂದ ತಮ್ಮ ಮೇಲೆ ಎಳೆದುಕೊಂಡವು. ಮತ್ತೊಂದಷ್ಟು ಕ್ರಿಯೆಗಳು ಇತರರಿಗೆ ಮಾದರಿಯಾದುದನ್ನು ನಿರೂಪಿಸಲೋಸುಗ ಒಂದು ಪ್ರತಿಭಟನೆಯಂತೆ ಹುಟ್ಟಿಕೊಂಡವು. ಎಷ್ಟೋ ಸಂದರ್ಭಗಳಲ್ಲಿ ತಮ್ಮನ್ನು ಆಹ್ವಾನಿಸಿದ್ದವರ ಮನೆಯ ಅಂಗಳದಲ್ಲಿ ಸಾಕಿದ ಕೋಳಿಯೇನಾದರೂ ಕಂಡರೆ ಗುರುಗಳು ಹಿಂದಿರುಗಿ ನಡೆದದ್ದಿದೆ. ತಮ್ಮದೇ ಮಕ್ಕಳಂತೆ ಅವುಗಳನ್ನು ಸಾಕಿ ಚೆನ್ನಾಗಿ ಬೆಳೆದನಂತರ ನಾಲಗೆಯ ಚಪಲಕ್ಕಾಗಿ ಕೊಲ್ಲುವುದು ಗುರುಗಳಿಗೆ ಒಪ್ಪಿಗೆ ಇಲ್ಲದ ಸಂಗತಿಯಾಗಿತ್ತು. ತಮ್ಮನ್ನು ಕರೆದೊಯ್ಯಲು ಬಂದದ್ದು ಎತ್ತಿನಗಾಡಿ ಎಂಬ ಕಾರಣಕ್ಕಾಗಿಯೇ ಗುರುಗಳು ಇಪ್ಪತ್ತು ಮೈಲಿಗಳ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ ಉದಾಹರಣೆಯೂ ಇದೆ. ಜೊತೆಗಿರುವವರು ಹೊಟ್ಟೆ ಬಿರಿಯುವಂತೆ ಉಂಡು ರಾತ್ರಿ ಗೊರಕೆ ಹೊಡೆಯುತ್ತಿದದನ್ನು ಕಂಡು ಅಸಹ್ಯ ಪಟ್ಟು ರಾತ್ರಿಯಿಡೀ ನಡೆದು ಗಮ್ಯ ಸೇರಿದ ಸಂದರ್ಭಗಳು ಹಲವು. ಒಮ್ಮೆಯಂತೂ ಆಢ್ಯ ಜಮೀನ್ದಾರರೊಬ್ಬರು ತಮ್ಮ ಮನೆಯಲ್ಲಿ ಗುರುಗಳ ವಾಸಕ್ಕೆ ವ್ಯವಸ್ಥೆ ಮಾಡಿದ್ದರು. ಆದರೆ ಆದರೆ ಕಿಟಕಿಯ ಬಳಿಯೇ ಯಾರೋ ಉಗುಳುವುದನ್ನು ಕಂಡ ಗುರುಗಳು ನದಿಯ ದಂಡೆಯಲ್ಲೇ ರಾತ್ರಿ ಕಳೆದರು. ಹೈನುಗಾರ ಕರುವಿಗೆ ಸಾಕಷ್ಟು ಹಾಲನ್ನು ಬಿಡುತ್ತಿಲ್ಲ ಎಂಬ ಕಾರಣಕ್ಕೆ ಹಾಲನ್ನೂ ನಿರಾಕರಿಸಿ ರಾತ್ರಿಯೂಟವೇ ಇಲ್ಲದೆ ಕಳೆದದ್ದಿದೆ. ಈ ಬಗೆಯ ಘಟನೆಗಳು ಗುರುಗಳ ಬದುಕಿನಲ್ಲಿ ಬಹಳ ಸಾಮಾನ್ಯವಾಗಿದ್ದವು. ಈ ಬಗೆಯ ನಿರ್ಧಾರಗಳೆಲ್ಲವೂ ಹೇಗೆ ಬದುಕಬೇಕು ಎಂಬ ಮಾದರಿಯನ್ನು ಸೃಷ್ಟಿಸುವ ಉದಾಹರಣೆಗಳಾಗಿದ್ದವು.
ಹದಿನೈದು ವರ್ಷಗಳ ಕಾಲ ನಾಡಿನ ಬಡವರ ಭೌತಿಕ ಬದುಕಿಗೆ ಶುಚಿತ್ವವನ್ನೂ ಬೌದ್ಧಿಕ ಬದುಕಿಗೆ ಅರಿವಿನ ಬೆಳಕನ್ನೂ ತರುವುದಕ್ಕಾಗಿ ಗುರುಗಳು ನಿರಂತರ ಪ್ರಯತ್ನ ನಡೆಸಿದರು. ವಾಸಿಸುವ ಮನೆಯನ್ನೂ ಬೀದಿಯನ್ನು ಶುಚಿಯಾಗಿಡುವುದಕ್ಕಾಗಿ ಗುರುಗಳೇ ನೇರ ಕಾರ್ಯಾಚರಣೆಗೆ ಇಳಿದುಬಿಡುತ್ತಿದ್ದರು. ಶುಚಿಯಾಗಿ ಬದುಕುವುದಕ್ಕೆ, ಆರೋಗ್ಯಕರವಾಗಿ ಉಣ್ಣುವುದಕ್ಕೆ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಅನುಸರಿಸುವುದಕ್ಕೆ ತಮ್ಮ ಬದುಕನ್ನೇ ಮಾದರಿಯಾಗಿಸಿದ್ದರು. ಸುಧಾರಣೆ ಮತ್ತು ಸಮೃದ್ಧಿಯ ಹಾದಿಯನ್ನು ತೋರಿಸಿಕೊಟ್ಟ ಗುರುಗಳು ಅನಗತ್ಯ ಭಾವುಕತೆಯ ಬಲೆಯೊಳಗೆ ಸಿಲುಕದೆ ವಾಸ್ತವವನ್ನು ಕಾಣುವುದನ್ನೂ ಕಲಿಸಿಕೊಟ್ಟರು. ಇವೆಲ್ಲವೂ ಅವರು ಮುಂದೆ ಕೈಗೆತ್ತಿಕೊಳ್ಳಲಿದ್ದ ನಿಜ ಶಿಕ್ಷಣಕ್ಕೆ ಅಗತ್ಯವಾದ ಸಿದ್ಧತೆಗಳಾಗಿದ್ದವು. ಭವಿಷ್ಯದಲ್ಲೂ ಅನುಯಾಯಿಗಳು ನಿರಂತರವಾಗಿ ಕಲಿತು ವ್ಯಾಖ್ಯಾನಿಸಲು ಅನುಕೂಲವಾಗುವಂತೆ ಗುರುಗಳು ತಮ್ಮ ಬೋಧನೆಗಳನ್ನೆಲ್ಲಾ ಪದ್ಯ ಮತ್ತು ಗದ್ಯ ಸ್ವರೂಪದಲ್ಲಿ ದಾಖಲಿಸಿದ್ದಾರೆ.
ಹೂವಿನಲ್ಲಿರುವ ಮಕರಂದವು ದುಂಬಿಗಳನ್ನು ಆಕರ್ಷಿಸುತ್ತವೆ. ಗುರುಗಳ ವ್ಯಕ್ತಿತ್ವಕ್ಕಿದ್ದ ಸಹಜ ಕಾರುಣ್ಯದ ಪ್ರಭೆ ಯುವಕರನ್ನು ಅದರಲ್ಲೂ ಮುಖ್ಯವಾಗಿ ಉನ್ನತ ಶಿಕ್ಷಣ ಪಡೆದ ಬುದ್ಧಿವಂತ ಯುವಕರನ್ನು ಆಕರ್ಷಿಸುತ್ತಿತ್ತು. ಅವರು ಹೋದಲ್ಲೆಲ್ಲಾ ಗುರುಗಳನ್ನು ಭೇಟಿಯಾಗಲು ಯುವಕರ ಸಮೂಹವೇ ನೆರೆಯುತ್ತಿತ್ತು. ಗುರುಗಳ ವಿಚಾರ ಮತ್ತು ಆದರ್ಶಗಳಿಂದ ಪ್ರಭಾವಿತರಾಗಿದ್ದ ಈ ಯುವಕರು ಬೇರೆ ಬೇರೆ ಮಟ್ಟದಲ್ಲಿ ಗುರುಗಳನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದರು. ಈ ಯುವಕರ ಜೊತೆ ವಿಚಾರದ ಮಥನ ನಡೆಸುತಿದ್ದ ಗುರುಗಳು ತಾತ್ಕಾಲಿಕ ಗುರಿಗಳ ಎಲ್ಲೆ ಮೀರಿ ಶಾಶ್ವತವಾದ ಗುರಿಗಳನ್ನು ಕಂಡುಕೊಳ್ಳುವುದಕ್ಕೆ ಸಹಾಯವನ್ನೂ ಮಾಡುತ್ತಿದ್ದರು. ಜ್ಞಾನವೆಂಬ ಸುವರ್ಣ ಸೂಚಿಯನ್ನು ಬಳಸಿ ಈ ಯುವಕರ ಒಳಗಣ್ಣು ತೆರೆಸಿ ಸತ್ಯದ ದರ್ಶನ ಮಾಡಿಸಿದರು. ಕೆಲಮೊಮ್ಮೆ ಕಠಿಣವಾಗಿ ಇನ್ನು ಕೆಲವೊಮ್ಮೆ ಪ್ರೀತಿಯಿಂದ ಮಾರ್ಗದರ್ಶನ ಮಾಡುತ್ತಾ ಈ ಯುವ ಸಹಯಾತ್ರಿಗಳನ್ನು ಒಂದು ಶಿಖರದಿಂದ ಮತ್ತೂ ಎತ್ತರವಾದ ಮತ್ತೊಂದಕ್ಕೆ ಏರುವವಂತೆ ಮಾಡುತ್ತಿದ್ದರು. ಈ ಆರೋಹಣ ಪ್ರಕ್ರಿಯೆಯಲ್ಲಿ ಕೆಲವರು ಹಿಂದುಳಿದರು. ಇನ್ನು ಕೆಲವರು ಸಾಂಸಾರಿಕ ಬದುಕಿನಲ್ಲಿ ಕಳೆದುಹೋದರು. ಅವರೆಲ್ಲೇ ಇದ್ದರು ಗುರುಗಳು ನೀಡಿದ ಶಿಕ್ಷಣ ಅವರಿರುವ ಕ್ಷೇತ್ರದಲ್ಲಿ ತೇಜಸ್ವಿಗಳಾಗಿರುವಂತೆ ನೋಡಿಕೊಂಡಿತು. ಇನ್ನು ಕೆಲವರು ಗುರುವಿಗೆ ಬೇಕಾದ ಗುಣಗಳನ್ನು ತಮ್ಮೊಳಗೆ ಬೆಳೆಸಿಕೊಂಡರು. ಮರದಿಂದ ಬೀಜಗಳು ಸಿಡಿದು ದೂರ ಸಾಗುವಂತೆ ಈ ಶಿಷ್ಯರು ಸ್ವತಂತ್ರರಾಗಿ ಹರಡಿಕೊಂಡರು. ಆದರೆ ಗುರುಗಳ ಪ್ರಯತ್ನ ಮಾತ್ರ ಸತತವಾಗಿ ಚಾಲನೆಯಲ್ಲಿತ್ತು.
ಹದಿನೈದು ವರ್ಷಗಳ ನಿರಂತರ ಸಂಚಾರದಲ್ಲಿ ಗುರುಗಳು ಎಲ್ಲೆಡೆಯೂ ಇದ್ದರು, ಆದರೆ ಅವರೆಲ್ಲೋ ಒಂದೆಡೆ ನೆಲೆಯಾಗಲಿಲ್ಲ. ಸ್ಥಿರವಾದ ಸಾರ್ವಜನಿಕ ಬದುಕನ್ನು ಅವರು ಮತ್ತೆ ಆರಂಭಿಸಿದ್ದು ತಮ್ಮ ಮೂಲ ಆಶ್ರಮದಿಂದ ಉತ್ತರಕ್ಕೆ ಸುಮಾರು ನಲವತ್ತು ಮೈಲುಗಳ ದೂರದಲ್ಲಿದ್ದ ಸ್ಥಳದಲ್ಲಿ. ಅಲ್ಲಿದ್ದ ಪಾಳು ಗುಡ್ಡವೇ ತಮ್ಮ ಇರುವಿಕೆಗೆ ಸೂಕ್ತ ತಾಣವೆಂದು ಗುರುಗಳು ನಿರ್ಧರಿಸಿದ್ದರ ಹಿಂದೆಯೇ ಸ್ಥಳೀಯ ಬಡ ರೈತರೊಬ್ಬರು ತೆಂಗಿನ ಗರಿಗಳನ್ನುಪಯೋಗಿಸಿ ಗುಡಿಸಲನ್ನು ನಿರ್ಮಿಸಿಕೊಟ್ಟಿದ್ದರು. ಅಲ್ಲಿಂದ ನೋಡಿದರೆ ದೂರದಲ್ಲಿ ಹೊಳೆವ ಬೆಳ್ಳಿ ಕಡಲೂ ಅದರ ಅಲೆಗಳಂತೆ ಗುಡ್ಡದ ತಪ್ಪಲಿನ ತನಕವೂ ಏರಿಳಿದಿರುವ ಭೂಭಾಗವು ಕಾಣಿಸುತ್ತಿತ್ತು. ಜನರಿಂದ ದೂರಾಗಿದ್ದ ಗುರುಗಳ ದರ್ಶನವನ್ನು ಹೇಗಾದರೂ ಮಾಡಿ ಪಡೆಯಲೇಬೇಕೆಂದು ಗುಡ್ಡವೇರಿ ಆಶ್ರಮ ತಲುಪಿದ ಸಂದರ್ಶಕರಿಗೆ ಕಂಡದ್ದು ಮತ್ತೆ ತಪೋನಿರತರಾಗಿದ್ದ ಯೋಗಿ.
ಗುರುಗಳು ಜಗದ ಪರಿವೆಯನ್ನೇ ಮರೆತು ಕುಳಿತಿದ್ದರು. ಗುಡ್ಡದ ತಪ್ಪಲಲ್ಲಿದ್ದ ಒಸರುವ ನೀರು ಅಶ್ರುವಿನಷ್ಟೇ ಸ್ಫಟಿಕ ಶುದ್ಧ ತೊರೆಯಾಗಿಯಾಗಿ ಹರಿಯುತ್ತಿದ್ದುದು ಗುರುಗಳು ತಮ್ಮ ಅಂತರಂಗದಲ್ಲಿ ಅನುಭವಿಸುತ್ತಿದ್ದ ಶಾಂತಿಯ ರೂಪಕವೂ ಹೌದು. ಈ ಹಿಂದೆಲ್ಲಾ ಜನರು ಬಂದು ಕೇಳಿದಾಗ ಪ್ರಾರ್ಥನೆಗಳನ್ನು ಬರೆದುಕೊಡುತ್ತಿದ್ದರು. ಈ ಬಾರಿ ಅವರು ದೇವರನ್ನು ತಾಯಿಯೆಂದು ಸಂಬೋಧಿಸಲು ನಿರ್ಧರಿಸಿದರು. ಇದಕ್ಕೆ ಅವರು ಬಳಸಿದ ಭಕ್ತಿಯ ಭಾಷೆಯು ಭೋರ್ಗರೆಯುತ್ತಾ ರಭಸದಿಂದ ಹರಿವ ಹೊಳೆಯಂತಿರದೆ ಸ್ಫಟಿಕ ಶುದ್ಧವಾಗಿ ಶಾಂತವಾಗಿ ತೆವಳುವ ನದಿಯಂತಿತ್ತು.
“ತಾಯೇ! ನನ್ನಾತ್ಮದ ಬೇಗುದಿ ಶಮನಗೊಂಡು ತೇಜೋಮಯ ದಳಗಳ ವೈಭವದ ನಡುವೆ ತಿರುಳಿನಂತಿರುವ ಏಕೈಕ ಆದಿ ಮಾನಸದಲ್ಲಿ ಸೇರುವುದೆಂದು? ಈ ಹಸಿವಿನ ಕಾಣ್ಕೆಗಳ ವಂಚಕ ಬಲೆಯಿಂದ ಮುಕ್ತಿಯೆಂದು?” ಎಂದವರು ಹಾಡಿದರು.
ಈ ಸ್ಥಳವೂ ಗುರುಗಳ ಉಪಸ್ಥಿತಿಯೆಂಬ ಮಾಂತ್ರಿಕ ಸ್ಪರ್ಶದಿಂದ ಬಹುಬೇಗ ಬೆಳೆದು ಒಂದು ಸಂಸ್ಥೆಯಾಯಿತು. ಪರಿಸರದಲ್ಲಿ ಇದ್ದ ಬಡ ಮಕ್ಕಳಿಗೆ ಆಶ್ರಮದಲ್ಲೇ ಊಟ ಮತ್ತು ವಸತಿಯ ಏರ್ಪಾಡಾಯಿತು. ಈ ಮಕ್ಕಳು ಗುರುಗಳ ಜೊತೆಗೂಡಿ ಆಶ್ರಮದ ಕೆಲಸಗಳನ್ನು ಮಾಡುತ್ತಿದ್ದರು. ಒಬ್ಬ ವಿದ್ಯಾರ್ಥಿಗೆ ನೇಕಾರಿಕೆ ಕಲಿಸಿದ ಗುರುಗಳು ಅವನ ಸಂಪಾದನೆಗೊಂದು ದಾರಿ ಮಾಡಿಕೊಟ್ಟರು. ಮತ್ತೊಬ್ಬ ಬಾಲಕ ಸದಾ ಗುರುಗಳ ಜೊತೆಗೇ ಇದ್ದು ಅವರಿಗೆ ಪುಸ್ತಕಗಳನ್ನು ಓದಿ ಹೇಳುತ್ತಿದ್ದ. ಆಶ್ರಮದ ಪ್ರತೀ ವಿದ್ಯಾರ್ಥಿಯ ಜೊತೆಗೆ ನಿತ್ಯವೂ ಮಾತನಾಡುತ್ತಿದ್ದ ಗುರುಗಳು ಅವರೆಲ್ಲರ ಆಲೋಚನೆಗಳೂ ಅರ್ಥಪೂರ್ಣ ದಿಕ್ಕಿಗೆ ಹರಿಯುವಂತೆ ನೋಡಿಕೊಳ್ಳುತ್ತಿದ್ದರು. ಈ ಮಕ್ಕಳಿಗೆ ತಮ್ಮ ತಾತ್ವಿಕತೆಯನ್ನೂ ತಮ್ಮ ದೃಷ್ಟಿಯ ಧರ್ಮವನ್ನೂ ಸರಳವಾಗಿ ವಿವರಿಸುವುದಕ್ಕಾಗಿಯೇ ಗುರುಗಳು ಪ್ರಾರ್ಥನಾ ಪದ್ಯವೊಂವನ್ನು ರಚಿಸಿದರು. ನಿತ್ಯದ ಧ್ಯಾನದಲ್ಲಿ ಬಳಕೆಯಾಗುತ್ತಿದ್ದ ಆ ಪದ್ಯದ ಅನುವಾದ ಇಲ್ಲಿದೆ.
(ಇಲ್ಲಿರುವ ಕನ್ನಡ ಅನುವಾದವನ್ನು ನಟರಾಜ ಗುರುಗಳ ಶಿಷ್ಯರಾದ ವಿನಯ ಚೈತನ್ಯ ಅವರು ಕನ್ನಡಕ್ಕೆ ತಂದಿರುವ ‘ನಾರಾಯಣ ಗುರು ಸಂಪೂರ್ಣ ಕೃತಿಗಳು’ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.)
ದೈವದಶಕ
1
ದೇವರೇ ಕಾಪಾಡು ನೀನಲ್ಲಿ
ಕೈಯ ಬಿಡದಂತೆ ನಮ್ಮನಿಲ್ಲಿ
ನೀನು ನಾವಿಕನು, ನಿನ್ನ ಪದವು ಭವಾದ್ಧಿಗೆ
ಒಂದು ಆವಿಯ ಮಹತ್ತಾದ ನಾವೆ
2
ಒಂದೊಂದಾದಿ ಎಣಿಸಿಯೆಣಿಸಿ ಮುಟ್ಟಿ
ಎಣಿಸುವ ಪದಾರ್ಥಗಳು ತೀರಿಹೋದರೆ
ಆಗ ದೃಕ್ಕಾದದ್ದು ಉಳಿಯುವುದು, ಅದರ ಹಾಗೆಯೇ
ನಿನ್ನಲ್ಲಿ ನನ್ನ ಅಂತರಾತ್ಮವು ನಿಶ್ಚಲತೆ ಹೊಂದಬೇಕು
3
ಅನ್ನವಸ್ತ್ರಾದಿಗಳ ತಡೆಯಿಲ್ಲದೆ
ನೀಡಿ ರಕ್ಷಿಸಿ ನಮ್ಮನು
ಧನ್ಯರನ್ನಾಗಿಸುವ ನೀನು
ನೀನೊಬ್ಬನೇ ನಮಗೊಡೆಯ
4
ಕಡಲು, ಅಲೆ, ಗಾಳಿ
ಆಳವೂ ಇದ್ದಂತೆ ನಾವು
ಮಾಯೆಯೂ ನಿನ್ನ ಮಹಿಮೆಯೂ
ನೀನೇ ಎಂದು ಅಂತರಂಗದಲಿರಿಯಬೇಕು
5
ನೀನು ತಾನೇ ಸೃಷ್ಟಿಯೂ ಸೃಷ್ಟಿ-
ಕರ್ತನೂ ಸೃಷ್ಟಿಜಾಲವೂ
ಸೃಷ್ಟಿಗೆ ಸಾಮಗ್ರಿಯಾದದ್ದೂ
ನೀನೇ ಅಲ್ಲವೇ
6
ನೀನಲ್ಲವೇ ಮಾಯೆಯೂ ಮಾಯಾ
ವಿಯೂ ಮಾಯಾವಿನೋದನೂ
ನೀನಲ್ಲವೇ ಮಾಯೆಯನ್ನು ಕಳೆದು
ಸಾಯುಜ್ಯವ ನೀಡುವ ಆರ್ಯನೂ
7
ನೀನೇ ಸತ್ಯ, ನೀ ಜ್ಞಾನಾನಂದನೂ
ನೀನೇ ವರ್ತಮಾನ, ಭೂತ
ಭವಿಷ್ಯತ್ತು ಬೇರಲ್ಲ, ಆಡುವ
ನುಡಿಯು ನೆನೆದೊಡೆ ನೀನೇ ಅಲ್ಲವೇ
8
ಒಳಗೂ ಹೊರಗೂ ತುಂಬಿರುವ
ಮಹಿಮೆಯುಳ್ಳ ನಿನ್ನ ಪದವನ್ನು
ಹೊಗಳುವೆವು ನಾನು
ಒಡೆಯನೇ ಜಯಿಸು
9
ಜಯಿಸು ನೀ ಮಹಾದೇವ
ದೀನಾವನ ಪಾರಾಯಣ
ಜಯಿಸು ನೀ ಚಿದಾನಂದನೇ
ದಯಾಸಿಂಧುವೇ ಜಯಿಸು ನೀ
10
ಅಧಿಕ ಆಳವಿರುವಂತ ನಿನ್ನ ಮಹಸ್ಸಾದ
ಕಡಲಲ್ಲಿ ನಾವೆಲ್ಲರೂ ಒಟ್ಟಾಗಿ
ಮುಳುಗಬೇಕು, ನಿತ್ಯವಾಗಿ ಬಾಳಬೇಕು
ಬಾಳಬೇಕು ಸುಖದಿಂದಲಿ.
ಹಿಂದಿನ ಭಾಗ ಇಲ್ಲಿದೆ: https://aralimara.com/2024/08/13/guru-55/


[…] ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/14/guru-56/ […]
LikeLike