ಸತ್ಯದ ನಮ್ಮ ವ್ಯಾಖ್ಯಾನ ಏನೆಂದರೆ ಅದು ಶಾಶ್ವತವಾಗಿ ಇರುವಂಥದು ಮತ್ತು ಅಸತ್ಯ ಈ ಕ್ಷಣಕ್ಕೆ ಇದ್ದು ಇನ್ನೊಂದು ಕ್ಷಣಕ್ಕೆ ಇರದಂಥದು. ಕ್ಷಣಿಕವಾದದ್ದು, ಅಶಾಶ್ವತವಾದದ್ದು ಅಸತ್ಯವಾದರೆ, ಹಿಂದೆ ಇದ್ದಂಥದು, ಈಗ ಇರುವಂಥದು, ಮುಂದೆ ಇರುವಂಥದು ಸತ್ಯ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಶಾಶ್ವತದ (Eternal) ಹೊರತಾಗಿ ಬೇರೆಲ್ಲವೂ ಬಂದು ಹೋಗುವಂಥದು, ಕ್ಷಣಿಕವಾದಂಥದು…… ಕಾಮನ ಬಿಲ್ಲಿನಂತೆ…….. ನೆರಳಿನಂತೆ, ಯಾವ ಗಟ್ಟಿತನವೂ ಇರದಿರುವಂಥದು, ಅದನ್ನ ಹಿಡಿದುಕೊಳ್ಳುವುದು ಸಾಧ್ಯವಿಲ್ಲ. ನಾವು ರಾತ್ರಿಯ ಮಟ್ಟಿಗೆ ಮರದ ಮೇಲೆ ಕುಳಿತಿರುವ ಹಕ್ಕಿಯಂತೆ, ಆಗಲೇ ನಮಗೆ ಮರದ ಬಗ್ಗೆ ಪ್ರೀತಿ ಶುರುವಾಗಿದೆ.
ಶಾಶ್ವತದ ಹೊರತಾಗಿ ಬದುಕಿನಲ್ಲಿ ಎಲ್ಲವೂ ಕ್ಷಣಿಕವಾದದ್ದು. ನೀವು ನೆರಳನ್ನು ಹಿಡಿಯಲು ಓಡುತ್ತಿದ್ದೀರಿ. ಅವು ನಿಜದಂತೆ ಕಾಣುತ್ತವೆ ಆದರೆ ಹತ್ತಿರವಾಗುತ್ತಿದ್ದಂತೆಯೇ ನಿಮಗೆ ಗೊತ್ತಾಗುತ್ತದೆ ಅದು ಮರಿಚಿಕೆ ಎಂದು. ನಮ್ಮ ಸುತ್ತಲಿನ ಅಶಾಶ್ವತ ಜಗತ್ತಿನ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಆ ಕೂಡಲೆ ನಿಮಗೆ ಗೊತ್ತಾಗುತ್ತದೆ ಬುದ್ಧ ಯಾಕೆ ಅದನ್ನು ಮಾಯೆ, ಭ್ರಮೆ, ಕನಸು ಎಂದ ಎನ್ನುವುದು.
ಸತ್ಯದ ನಮ್ಮ ವ್ಯಾಖ್ಯಾನ ಏನೆಂದರೆ ಅದು ಶಾಶ್ವತವಾಗಿ ಇರುವಂಥದು ಮತ್ತು ಅಸತ್ಯ ಈ ಕ್ಷಣಕ್ಕೆ ಇದ್ದು ಇನ್ನೊಂದು ಕ್ಷಣಕ್ಕೆ ಇರದಂಥದು. ಕ್ಷಣಿಕವಾದದ್ದು, ಅಶಾಶ್ವತವಾದದ್ದು ಅಸತ್ಯವಾದರೆ, ಹಿಂದೆ ಇದ್ದಂಥದು, ಈಗ ಇರುವಂಥದು, ಮುಂದೆ ಇರುವಂಥದು ಸತ್ಯ. ಕ್ಷಣಿಕ ನೆರಳಿನ ಹಿಂದಿನ ಶಾಶ್ವತವನ್ನು ಕಂಡುಕೊಳ್ಳಿ, ಪೆನಿಟ್ರೇಟ್ ಮಾಡಿ. ಏಕೆಂದರೆ ಶಾಶ್ವತ ಮಾತ್ರ ಆನಂದವನ್ನು ಸಾಧ್ಯಮಾಡಬಲ್ಲದು. ಕ್ಷಣಿಕವಾದದ್ದು ಯಾವತ್ತೂ ಸಂಕಟಕ್ಕೆ ಕಾರಣ.
ಯಾರು ಖುಶಿಗಾಗಿ ಕೇವಲ ಮೇಲು ಮೇಲಿನ ಕಂಡಿಷನ್ ನ ಅವಲಂಬಿಸಿದ್ದಾರೋ ಅವರಿಗೆ ದಕ್ಕುವ ಖುಶಿ, ಅಸ್ಥಿರವಾದದ್ದು, ತೆಳುವಾದದ್ದು. ಎಲ್ಲ ಮೇಲು ಮೇಲಿನ ವಿದ್ಯಮಾನ ಆಕಸ್ಮಿಕವಾದಂಥದು, ಕಂಡಿಷನಲ್ ಆದಂಥದು. ಕಂಡಿಷನಲ್ ಹ್ಯಾಪಿನೆಸ್ ಮೇಲೆ ಎಷ್ಟು ಅವಲಂಬನೆ ಮಾಡಬಹುದು?
“ನಸ್ರುದ್ದೀನ್, ನಾನು ಈ ಊರು ಬಿಟ್ಟು ಬೇರೆ ಊರಿಗೆ ಹೋಗುತ್ತಿದ್ದೇನೆ. ನಿನ್ನ ಗುರುತಿಗಾಗಿ ನೀನು ಯಾಕೆ ನಿನ್ನ ಉಂಗುರ ನನಗೆ ಕೊಡಬಾರದು? ಆ ಉಂಗುರ ನೋಡಿದಾಗಲೆಲ್ಲ ನಾನು ನಿನ್ನ ನೆನಪಿಸಿಕೊಳ್ಳುತ್ತೇನೆ “
ಮುಲ್ಲಾ ನಸ್ರುದ್ದೀನ್ ನ ಗೆಳೆಯ ಕೇಳಿಕೊಂಡ.
“ ಉಂಗುರ ನೀನು ಕಳೆದುಕೊಂಡು ಬಿಡಬಹುದು ಆಗ ನೀನು ನನ್ನ ಮರತೇಬಿಡುತ್ತೀಯ, ಹೀಗೆ ಮಾಡಿದರೆ ಹೇಗೆ? ನಾನು ನಿನಗೆ ಉಂಗುರ ಕೊಡುವುದಿಲ್ಲ, ನೀನು ಉಂಗುರವಿಲ್ಲದ ಖಾಲಿ ಬೆರಳು ನೋಡಿಕೊಂಡಾಗಲೆಲ್ಲ ನಿನಗೆ ನನ್ನ ನೆನಪಾಗುತ್ತದೆ. ನನ್ನ ಮರೆಯುವ ಸಾಧ್ಯತೆಯೇ ಇರುವುದಿಲ್ಲ.“
ಮುಲ್ಲಾ ನಗುತ್ತ ಉತ್ತರಿಸಿದ.

