ಅಮರು ಶತಕ: 8ನೇ ಕಂತಿನ ಪದ್ಯಗಳು

ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ 8ನೇ ಭಾಗ ಇಲ್ಲಿದೆ…

60

ಉಕ್ಕಿ ಹರಿಯುತ್ತಿದ್ದ ಪ್ರೇಮ ಪ್ರವಾಹದಲ್ಲಿ
ಕೊಚ್ಚಿಕೊಂಡು ಹೋಗುತ್ತಿದ್ದ ಪ್ರೇಮಿಗಳನ್ನು ತಡೆದರು
ನದಿಗೆ ಅಡ್ಡಲಾಗಿ ಕಟ್ಟಿರುವ ಒಡ್ಡಿನಂತೆ ಎದುರಾಗಿ
ಅವರ ತಂದೆ ತಾಯಂದಿರು.
ವಿವಶರಾಗಿ ನಿಶ್ಚಲ ಚಿತ್ರಗಳಂತೆ
ಎದುರುಬದುರಾಗಿ ನಿಂತಿದ್ದ ಪ್ರೇಮಿಗಳು
ತಮ್ಮ ಕಮಲದ ದಂಟಿನಂಥ ಕಣ್ಣುಗಳಿಂದ
ಒಬ್ಬರನ್ನೊಬ್ಬರು ತಾಕುತ್ತ ಮುಂದುವರೆಸಿದರು
ಸವಿಯುವುದನ್ನ ಪ್ರೇಮ ಮಕರಂದ.

***^*****^*^^^*************

61

ಕಾಣಿಸದಾಗಿದೆ
ನಿನ್ನ ತುಂಬು ಎದೆಯ ತುದಿಗಳಲ್ಲಿನ
ಗಂಧದ ಗುರುತು,
ಮಾಯವಾಗಿದೆ
ನಿನ್ನ ತಂಬುಲ ತುಟಿಯ ರಂಗು,
ಅಸ್ತವ್ಯಸ್ತವಾಗಿದೆ ನಿನ್ನ ಕಣ್ಣಿನ ಕಾಡಿಗೆ ,
ಇನ್ನೂ ಎದ್ದು ಕಾಣಿಸುತ್ತಿದೆ
ನಿನ್ನ ನಾಜೂಕು ಮೈಯಲ್ಲಿನ ರೋಮಾಂಚನ,
ಹೇಳು ಎಲ್ಲಿಗೆ ಹೋಗಿದ್ದೆ ನೀನು?
ಸ್ನಾನ ಮಾಡಲು ಊರಾಚೆಯ ಕೆರೆಗೋ
ಅಥವಾ ಮತ್ತೆ ಆ ಖೂಳನ ತೋಳುಗಳ
ತೆಕ್ಕೆಗೋ?

********************^**********

62

ನಾನು ಮರಳಿ ಬಂದೊಡನೆ,
ಅವಳ ಸೊರಗಿದ ಕಾಂತಿರಹಿತ ಮುಖ,
ಜೀವಂತಿಕೆ ಕಳೆದುಕೊಂಡು ಹರಡಿಕೊಂಡಿದ್ದ ಕೂದಲು,
ಒಮ್ಮೆಲೇ ಹೊತ್ತಿಕೊಂಡವು ಝಗ್ ಎಂದು.
ತನ್ನ ಇಷ್ಟು ದಿನದ ಕೋಪವನ್ನೆಲ್ಲ
ಇಷ್ಟಪಟ್ಟು ತೀರಿಸಿಕೊಂಡಳು ಆಕೆ
ಅಂದು ರಾತ್ರಿ,
ಅವಳ ತುಟಿಗಳನ್ನ ಒಂದೇಸವನೇ ಚುಂಬಿಸುತ್ತ
ಮಂತ್ರಮುಗ್ಧನಂತೆ ಅನುಭವಿಸುತ್ತಿದ್ದೆ ನಾನು
ರೌದ್ರವೂ ಲಾಸ್ಯದಂತೆ ವಿಜೃಂಭಿಸುತ್ತಿರುವ
ಅದ್ಭುತವ.

*************************

63

ಮೊದಲಿನ ಹಾಗೆ ಸಿಡಿಮಿಡಿಗೊಳ್ಳುವುದಿಲ್ಲ
ಅವಳು, ಈಗ ಸೀರೆಗೆ ಕೈ ಹಾಕಿದರೆ,
ಹೆರಳು ಹಿಡಿದೆಳೆದು ತುಟಿಗಳಿಗೆ ಕನ್ನ ಹಾಕಿದರೆ
ಹುಬ್ಬು ಗಂಟಿಕ್ಕುವುದಿಲ್ಲ, ಕಚ್ಚುವುದಿಲ್ಲ,
ಬರಸೆಳೆದು ಅಪ್ಪಿಕೊಂಡಾಗ ಬಿಡಿಸಿಕೊಳ್ಳುವುದಿಲ್ಲ
ಒಪ್ಪಿಸಿಕೊಳ್ಳುತ್ತಾಳೆ ಇಡಿಯಾಗಿ.
ಏನಿದು ಹೊಸ  ವಿಧಾನದ ಪ್ರೀತಿ ?
ಮಾಯವಾಗಿ ಹೋಗಿದೆಯಲ್ಲ
ಮುನಿಸು ಮಾಯೆಯಾಗಿ ಮನಸು
ಗೆಲ್ಲುವ ರೀತಿ.

**********************

64

ಆಲೋಚನೆಗಳು, ಭಾವನೆಗಳು
ಎಲ್ಲ ಚದುರಿ ಹೋಗಿಬಿಟ್ಟಿದ್ದವು ಚೆಲ್ಲಾಪಿಲ್ಲಿಯಾಗಿ,
ತನ್ನ ಪಾದದ ಬಳಿ ಬಾಗಿದ್ದ ಪ್ರಿಯತಮನಿಗೆ
ಛೀಮಾರಿ ಹಾಕಿದಳು ಒಂದೂ ಮಾತನಾಡದೇ.
ಕಠಿಣನಾಗಿ ಆತ ಹೊರಡಲು ಸಿದ್ಧನಾದಾಗ
ಕಣ್ತುಂಬಿಕೊಂಡು ಆಕೆ ನಡುಗಿದ ರೀತಿಗೆ,
ಇಡೀ ಜಗತ್ತಿನ ಹೆಣ್ತನವೇ ಒಂದಾಗಿ
ತನ್ನ ಪುರುಷಾಹಂಕಾರಕ್ಕೆ ತಿವಿದಂತಾಗಿ
ಆಗಲಿಲ್ಲ ಅವನಿಗೆ
ಒಂದು ಹೆಜ್ಜೆಯನ್ನೂ ಮುಂದಿಡಲು.

***************************

65

ಹಾಸಿಗೆಯ ಮೇಲಿನ
ತಂಬುಲ ತುಟಿಯ ಗುರುತುಗಳು,
ಮೈಗೆ ಹಚ್ಚಿಕೊಂಡಿದ್ದ ಗಂಧದೆಣ್ಣೆಯ ಕಲೆಗಳು,
ಬಾಯೊಳಗಿನ ಕವಳ, ಕರ್ಪೂರ ಸೋರಿ
ಬಿಡಿಸಿದ ಚಿತ್ರ,
ಅಲ್ಲಲ್ಲಿ ಅಂಟಿಕೊಂಡಿದ್ದ
ಪಾದಗಳ ಮೇಲಿನ ಚಿತ್ರದ ಬಣ್ಣ,
ಎಲ್ಲೆಡೆ ಚದುರಿಕೊಂಡಿದ್ದ
ಮುಡಿದ ಹೂವಿನ ಪಕಳೆಗಳು,
ಮುದುಡಿಕೊಂಡಿದ್ದ ಹಾಸಿಗೆ – ಹೊದಿಕೆ,
ಎಲ್ಲವೂ ಸಾಕ್ಷಿಯಾಗಿದೆ ಅವರು ಹೇಗೆಲ್ಲ
ಸುಖ ಅನುಭವಿಸಿದರು ಎನ್ನುವುದಕ್ಕೆ
ಹಾಸಿಗೆಯ ಮೇಲೆ ಅಂದು.

*****************************

66

“ಗುಟ್ಟು ಹೇಳುತ್ತೇನೆ ಬಾ”
ಎಂದು ಕರೆದವನು
ಕರೆದುಕೊಂಡು ಹೋದ ನನ್ನನ್ನು
ಏಕಾಂತದ ಜಾಗೆಗೆ,
ಅವನ ಹತ್ತಿರ ಹೋಗುತ್ತಿದ್ದಂತೆಯೇ
ಹೊತ್ತಿಕೊಂಡಿತು ನನ್ನ ಉತ್ಸುಕತೆ ಕುತೂಹಲ.
ನನ್ನ ಕಿವಿಯಲ್ಲಿ ಅವನು ಏನೋ ಹೇಳಿದ
ಆದರೆ ನನಗೆ ಕೇಳಿಸಿದ್ದು ಮಾತ್ರ
ನನ್ನ ತುಟಿಗೆ ತಾಕಿದ ಅವನ ಉಸಿರಾಟ.
ಅವನು ನನ್ನ ಹೆರಳಿಗೆ ಕೈ ಹಾಕಿದಾಗ
ಬಾಗಿ ಚುಂಬಿಸತೊಡಗಿದೆ ಅವನ ತುಟಿಗಳನ್ನು
ಅರ್ಥವಾದಂತೆ ಗುಟ್ಟು
ಸ್ಪಷ್ಟವಾಗಿ.

*^**************************

67

ತಿಂಗಳು ತುಂಬಿ ಹರಿಯತೊಡಗಿದಾಗ
ಎದ್ದಳು ಅವಳು ಹಾಸಿಗೆಯಿಂದ ಲಗುಬಗೆಯಲ್ಲಿ
ಅವನನ್ನು ದೂರ ಮಾಡುತ್ತ.
ಬೇಡಿಕೊಂಡವು ಅವನ ಹುಬ್ಬುಗಳು ದೀನವಾಗಿ
ಒಂದೇ ಒಂದು ಬಿಗಿ ಮುತ್ತಿಗಾಗಿ,
ಆಹ್ವಾನ ನೀಡಿದವು ಅವನ ತುಟಿಗಳು
ಒಂದು ದೀರ್ಘ ಸಂಭಾಷಣೆಗಾಗಿ.
ಸೀರೆಯ ಸೆರಗಿನಿಂದ ಗಲ್ಲ ಮುಚ್ಚಿಕೊಂಡ ಆಕೆ
ಕತ್ತು ಅಲ್ಲಾಡಿಸಿದಾಗ
ಅವಳ ಕಿವಿಯೊಳಗಿನ ಓಲೆಗಳು
ಸದ್ದು ಮಾಡುತ್ತ ಮುಟ್ಟಿಸಿದವು ಸಂದೇಶವನ್ನ
“ಬೇಡ”.

****************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.