ಬನ್ನಿ ದಯವಿಟ್ಟು, ಎಲೆಯ ಬದುಕನ್ನು ಪೂರ್ಣವಾಗಿ ಒಳಹೊಕ್ಕು ಪರಿಶೀಲಿಸೋಣ. ಎಲೆಯ ಬದುಕಿನೊಂಡನೆ ಒಂದಾಗುತ್ತ, ನಮ್ಮ ಸ್ವಭಾವವನ್ನು ಗುರುತಿಸಿಕೊಳ್ಳೋಣ, ಭಯದಿಂದ ಮುಕ್ತರಾಗೋಣ. ಈ ಬಗ್ಗೆ ಆಳವಾಗಿ ಪರಿಶೀಲನೆ ಮಾಡಿದಾಗ ನಾವು ಹುಟ್ಟು ಮತ್ತು ಸಾವು ಎರಡನ್ನೂ ಮೀರುವಂತಾಗುತ್ತೇವೆ… ~ Thich Nhat Hanh | ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಎಲೆಯನ್ನ ಪ್ರಶ್ನೆ ಮಾಡಿದೆ,
“ಇದು ಶರತ್ಕಾಲ ಎಲ್ಲ ಎಲೆಗಳು ಉದುರಿ ಬೀಳುತ್ತಿವೆ, ನಿನಗೇನಾದರೂ ಭಯ ಆಗುತ್ತಿದೆಯಾ?”
ಎಲೆ, ನನಗೆ ಹೇಳಿತು,
“ ಇಲ್ಲ, ಕಳೆದ ವಸಂತ ಮತ್ತು ಬೇಸಿಗೆಯಲ್ಲಿ ನಾನು ಸಂಪೂರ್ಣವಾಗಿ ಜೀವಂತವಾಗಿದ್ದೆ.
ಈ ಮರ ವನ್ನು ಪೋಷಿಸುವುದಕ್ಕಾಗಿ ಬಹಳ ಶ್ರಮ ಪಟ್ಟೆ. ಮತ್ತು ನನ್ನ ಬಹುತೇಕ ಈಗ ಮರದ ಭಾಗವಾಗಿದೆ. ಕೇವಲ ಎಲೆಯ ರೂಪದಲ್ಲಿಯೇ ನಾನು ಲಿಮಿಟ್ ಆಗಿಲ್ಲ.
ನಾನು ಈಗ ಇಡೀ ಮರವೂ ಹೌದು. ನಾನು ಮರಳಿ ಮಣ್ಣಿಗೆ ಹೋದ ಮೇಲೂ, ಈ ಮರವನ್ನು ಪೋಷಿಸುತ್ತವೇ ಇರುತ್ತೇನೆ. ಹಾಗಾಗಿ ಕಳಚಿ ಬೀಳುವ ಕುರಿತು ನಾನು ಚಿಂತೆ ಮಾಡುವುದೇ ಇಲ್ಲ. ಯಾವಾಗ ನಾನು ರೆಂಬೆಯಿಂದ ಕಳಚಿಕೊಂಡು ನೆಲದ ಮೆಲೆ ಬೀಳುತ್ತೇನೆಯೋ ಆಗ ನಾನು ಮರಕ್ಕೆ ವೇವ್ ಮಾಡುತ್ತ ಹೇಳುತ್ತೇನೆ,
“ಮತ್ತೆ ಸಿಗೋಣ, ಆದಷ್ಟು ಬೇಗ”.
ಆ ದಿನ ಗಾಳಿ ಜೋರಾಗಿ ಬೀಸಿದಾಗ ಎಲೆ ನಲಿದಾಡುತ್ತ ರೆಂಬೆಯಿಂದ ಕಳಚಿಕೊಂಡು ನೆಲದ ಮೇಲೆ ಹಾಯಾಗಿ ಒರಗಿ ಕೊಂಡಿತು. ಅದರ ಮುಖದಲ್ಲಿ ಖುಶಿ ತುಂಬಿ ತುಳುಕುತ್ತಿತ್ತು.
ಈ ಎಲೆಯಿಂದ ಕಲಿಯುವುದು ಬೇಕಾದಷ್ಟಿಯೆಂದು ನಾನು, ಎಲೆಯ ಎದುರು ತಲೆ ಬಾಗಿಸಿದೆ.
ಸೋ ಬನ್ನಿ ದಯವಿಟ್ಟು, ಎಲೆಯ ಬದುಕನ್ನು ಪೂರ್ಣವಾಗಿ ಒಳಹೊಕ್ಕು ಪರಿಶೀಲಿಸೋಣ. ಎಲೆಯ ಬದುಕಿನೊಂಡನೆ ಒಂದಾಗುತ್ತ, ನಮ್ಮ ಸ್ವಭಾವವನ್ನು ಗುರುತಿಸಿಕೊಳ್ಳೋಣ, ಭಯದಿಂದ ಮುಕ್ತರಾಗೋಣ. ಈ ಬಗ್ಗೆ ಆಳವಾಗಿ ಪರಿಶೀಲನೆ ಮಾಡಿದಾಗ ನಾವು ಹುಟ್ಟು ಮತ್ತು ಸಾವು ಎರಡನ್ನೂ ಮೀರುವಂತಾಗುತ್ತೇವೆ.
ನಾವು ಇವತ್ತಿಗೆ ಕೊನೆಯಾಗುವುದಿಲ್ಲ, ನಾಳೆಗೂ ಮುಂದುವರೆಯುತ್ತೇವೆ. ಆದರೆ ನಾಳೆಯ ಬದುಕನ್ನು ಎದುರುಗೊಳ್ಳಲು ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಾನು ನಾಳೆ, ಎಲೆಯಾಗಬಹುದು ಅಥವಾ ಹೂವಾಗಬಹುದು, ಆಗ ನಾನು ನಿಮಗೆ ಹಲೋ ಹೇಳುತ್ತೇನೆ. ನೀವು ಎಚ್ಚರದ ಬದುಕನ್ನು ಬದುಕುತ್ತಿದ್ದರೆ, ನೀವು ನನ್ನ ಗುರುತಿಸುತ್ತೀರ. ಮತ್ತು ನೀವು ಕೂಡ ನನಗೆ ಹಲೋ ಹೇಳುತ್ತೀರ. ಆಗ ನನಗೆ ಖುಶಿಯಾಗುತ್ತದೆ.

