ತರತಮವಿಲ್ಲದೆ ಪ್ರೀತಿಸಿ । Buddha in Blue jeans #7

ಏಕೆಂದರೆ ಪ್ರೀತಿಸುವ ಪ್ರಕ್ರಿಯೆಯೇ ಒಂದು ಅದ್ಭುತ. ಇದು ದೊರಕಿಸಿಕೊಡುವ ಅರಿವು ನಿಮ್ಮ ಪ್ರತಿದಿನದ ಬದುಕನ್ನು ಹಗುರಗೊಳಿಸುವುದು ~ Tai Sheridan | ಚೇತನಾ ತೀರ್ಥಹಳ್ಳಿ : Tai Sheridan | ಚೇತನಾ ತೀರ್ಥಹಳ್ಳಿ

ಪ್ರೀತಿ, ಹಂಚಿದಷ್ಟೂ ಹೆಚ್ಚುವ ಸಂಪತ್ತು. ಅದನ್ನು ಕೇವಲ ಒಬ್ಬರಿಗೆ ಮೀಸಲಾಗಿಡಬೇಡಿ. ನಿಮ್ಮ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರಿಗೂ, ಪ್ರತಿಯೊಂದು ಜೀವಿಗೂ ಪ್ರೀತಿ ಹಂಚಿ.

ಪ್ರೀತಿಸುವಾಗ ಇದು ಒಳ್ಳೆಯದು, ಅದು ಕೆಟ್ಟದ್ದು; ಇದು ಸುಂದರ, ಅದು ಕುರೂಪ ಎಂದೆಲ್ಲ ತಾರತಮ್ಯ ತೋರಬೇಡಿ. ನೀವು ಏನನ್ನು ಪ್ರೀತಿಸುತ್ತೀರಿ ಅನ್ನುವುದು ಮುಖ್ಯವಲ್ಲ, ನೀವು ಪ್ರೀತಿಸುತ್ತೀರಿ ಅನ್ನುವುದಷ್ಟೇ ಮುಖ್ಯ.

ಏಕೆಂದರೆ ಪ್ರೀತಿಸುವ ಪ್ರಕ್ರಿಯೆಯೇ ಒಂದು ಅದ್ಭುತ. ಇದು ದೊರಕಿಸಿಕೊಡುವ ಅರಿವು ನಿಮ್ಮ ಪ್ರತಿದಿನದ ಬದುಕನ್ನು ಹಗುರಗೊಳಿಸುವುದು.

ನಿಮ್ಮ ಶತ್ರುಗಳನ್ನೂ ಪ್ರೀತಿಸಿ. ನೀವು ಪ್ರೀತಿಸಿದ ಕ್ಷಣವೇ ನಿಮ್ಮ ಶತ್ರುಗಳ ಪಟ್ಟಿಯಲ್ಲಿ ಒಬ್ಬರ ಹೆಸರು ಇಲ್ಲವಾಗುವುದು! ಶತ್ರುವಿನ ಹೆಸರಳಿಸೋದು ಎಂದರೆ ಅದು ಹೀಗೆ, ಪ್ರೀತಿಸಿ ಶತ್ರುತ್ವವನ್ನೇ ಅಲ್ಲಗಳೆಯುವ ಮೂಲಕ.

ನೀವು ನಿಮ್ಮ ಪರಿಚಿತರನ್ನಷ್ಟೇ ಪ್ರೀತಿಸಬೇಕಿಲ್ಲ. ಭೂಮಿಯ ಮತ್ತೊಂದು ಮಗ್ಗುಲಿನ ಜನರನ್ನೂ ಪ್ರೀತಿಸಿ. ಅವರಿಗಾಗಿ ಪ್ರಾರ್ಥಿಸಿ. ಇದು ನಿಮ್ಮ ಜಗತನ್ನು ವಿಶಾಲಗೊಳಿಸುವುದು. ನಿಮ್ಮ ಹೃದಯವನ್ನೂ ವಿಶಾಲಗೊಳಿಸುವುದು.

ಎಲ್ಲವನ್ನೂ ಪ್ರೀತಿಸುವುದೆಂದರೆ, ತಾರತಮ್ಯವಿಲ್ಲದೆ ಪ್ರೀತಿಸುವುದೆಂದರೆ ನಿಮ್ಮನ್ನು ನೀವೇ ಪ್ರೀತಿಸಿಕೊಳ್ಳುವುದು.

ಸಾಧ್ಯವಾದಷ್ಟೂ ಪ್ರೀತಿಸಿ. ಅಸಾಧ್ಯವನ್ನೂ ಪ್ರೀತಿಸಿ!

ನಿಮ್ಮ ಆತ್ಮವನ್ನು ತಬ್ಬಿ
ಸುಮ್ಮನೆ ಕುಳಿತುಕೊಳ್ಳಿ.
ಪ್ರೀತಿಸುವ ಕಲೆ ಒಲಿಯುವುದು.


ತಾಯ್ ಶೆರಿದಾನ್ (Tai Sheridan) ಅವರು ಶೆನ್ರ್ಯು ಸುಜುಕಿ ಪರಂಪರೆಯಲ್ಲಿ 40ಕ್ಕೂ ಹೆಚ್ಚು ಕಾಲ ಅಭ್ಯಾಸ ನಡೆಸಿದ ಝೆನ್ ಸಾಧಕರು. ಇವರೊಬ್ಬ ಉಪನ್ಯಾಸಕ, ಲೇಖಕ ಮತ್ತು ಕವಿಯೂ ಹೌದು. ಕ್ಯಾಲಿಫೋರ್ನಿಯಾ ಇವರ ನೆಲೆ. ಪ್ರಸ್ತುತ ಈ ಸರಣಿಯು Buddha in blue jeans ಕೃತಿಯ ಸ್ವತಂತ್ರ ಅನುವಾದವಾಗಿದ್ದು, ಕೆಲವು ಚಿಕ್ಕಪುಟ್ಟ ಸೇರ್ಪಡೆಯೊಂದಿಗೆ ಮರು ನಿರೂಪಣೆ ಮಾಡಲಾಗಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.