ಅಮರು ಶತಕ: 10ನೇ ಕಂತಿನ ಪದ್ಯಗಳು

ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ 10ನೇ ಭಾಗ ಇಲ್ಲಿದೆ…

77

ನಾಜೂಕಿನ ಹುಡುಗಿ,
ನೀನು ಅಪ್ಪಿಕೊಂಡ ಬಿರುಸಿಗೆ
ನಿನ್ನ ಮೈ ಗೆ ಅಂಟಿಕೊಂಡಿದ್ದ ಶ್ರೀ ಗಂಧ
ಪುಡಿ ಪುಡಿಯಾಗಿ ಹಾಸಿಗೆ ಮೇಲೆ ಹರಡಿಕೊಂಡು
ಚುಚ್ಚುತ್ತಿದೆ ಈಗ ನನ್ನ ಮೈಯನ್ನು
ಎನ್ನುತ್ತ ಅವನು,
ತನ್ನ ಕಾಲು ಬೆರಳುಗಳನ್ನು ಬಳಸಿ
ಜಾರಿಸಿದ ಅವಳ ಸೊಂಟದ ಮೇಲಿನ ಬಟ್ಟೆಯನ್ನು,
ನಂತರ ಮತ್ತೆ ಮುಂದುವರೆಯಿತು ಹಬ್ಬ
ಶಾಸ್ತ್ರೋಕ್ತವಾಗಿ.

*****************************
79

ಗೆಳತಿ,
ಒಡೆದು ಹೋಳಾಗಲಿ ಬೇಕಾದರೆ
ಈ ದುಗುಡ ತುಂಬಿದ ಹೃದಯ,
ಬೇಕಾದರೆ ಹಿಂಡಿ ಹಿಪ್ಪೆ ಮಾಡಿಬಿಡಲಿ
ಆ ಕಾಮದೇವ ನನ್ನ ದೇಹವನ್ನ,
ಸಾಕು ನನಗಿನ್ನು ಈ ಮನುಷ್ಯನ ಒಡನಾಟ,
ಅವನ ಅಪನಂಬಿಕೆಯ ಪ್ರೇಮ.

ಸಾಲು ಸಾಲಾಗಿ ಬಂದ
ಸಿಟ್ಟಿನ ಮಾತುಗಳು ಮುಗಿಯುತ್ತಿದ್ದಂತೆಯೇ
ಕಾಡಿನತ್ತ ನಡೆದ
ಅವನ ಭಾರ ಹೆಜ್ಜೆಗಳನ್ನು ದಿಟ್ಟಿಸುತ್ತ
ನಿಂತುಬಿಟ್ಟಳು ಆಕೆ ಸುಮ್ಮನೇ.

******************************

80

ಅವನ ತುಟಿಗಳ ಮೇಲಿನ
ಇನ್ನೊಬ್ಬಳ ಹಲ್ಲಿನ ಗುರುತುಗಳು ಕಾಣಿಸುತ್ತಿದ್ದಂತೆಯೇ
ಸಿಟ್ಟಿನಿಂದ ಎಸೆದಳು ಅವಳು
ಕಮಲದ ಹೂವೊಂದನ್ನು ಅವನ ಮುಖಕ್ಕೆ ಗುರಿಯಿಟ್ಟು.
ಕಣ್ಣಿಗೆ ಗಾಯವಾಯಿತೆಂದು ಕುಳಿತುಬಿಟ್ಟ ಅವನು
ಕಣ್ಣು ಮುಚ್ಚಿಕೊಂಡು ಧರಣಿ ಹೂಡಿದವನಂತೆ.
ಇನ್ನು ಅವನು ಕ್ಷಮೆ ಕೇಳುವ ಸಾಧ್ಯತೆ ಇಲ್ಲವೆಂದು ಆಕೆಯೇ
ಅವನ ಕಣ್ಣಿನ ರೆಪ್ಪೆಯನ್ನು ಅಗಲಿಸಿ
ಗಾಳಿ ಊದತೊಡಗಿದಾಗ,
ಚುಂಬಿಸತೊಡಗಿದ ಅವನು ಅವಳನ್ನು ಬರಸೆಳೆದು,
ಅವಳ ತುಟಿಯುಸಿರು ಅವನನ್ನು
ತಾಕುತ್ತಿದ್ದಂತೆಯೇ.

*****************************

81

ಉತ್ಕಟ ಪ್ರೇಮದ
ಆ ಮೊದಲಿನ ದಿನಗಳಲ್ಲಿ,
ನಮ್ಮಿಬ್ಬರ ದೇಹಗಳು ಬೇರೆ ಬೇರೆಯೆಂದು
ಸಾಧ್ಯವೇ ಆಗುತ್ತಿರಲಿಲ್ಲ ಗುರುತಿಸಲು.
ಮದುವೆ ಇಬ್ಬರನ್ನಾಗಿಸಿತು ನಮ್ಮನ್ನು
ಈಗ ನೀನು ಗಂಡ,  ನಾನು ಹೆಂಡತಿ.

ಮತ್ತೆ ಕಾಲ ಬದಲಾಗುವುದೇ?
ಆಗದೇ ಹೋದರೆ
ಬದುಕು ಮಿಂಚಿನ ಹಾಗೆ ಕ್ರೂರ
ಸಿಡಿಲಿನ ಹಾಗೆ ಕಠೋರ.

******************************

82

“ಇನ್ನಾದರೂ
ಮಕ್ಕಳ ಹಾಗಿರುವುದನ್ನು ಬಿಟ್ಟುಬಿಡು,
ಚೆಲುವೆ ಹೆಣ್ಣು ನೀನು
ಬೆಳೆಸಿಕೋ ಆ ಅಭಿಮಾನವನ್ನಾದರೂ.
ಸಾಕು ವಿಧೆಯತೆ
ತಲೆಯೆತ್ತಿ ನಿಲ್ಲು ನಿನ್ನ ಪ್ರೇಮಿಯ ಎದುರು “

ಸಖಿಯ ಮಾತು ಕೇಳಿ
ಗಾಬರಿಯಾದಳು ಅವಳು

“ದಯವಿಟ್ಟು ಮೆಲ್ಲಗೆ ಮಾತನಾಡು
ಇಲ್ಲೇ ಇದ್ದಾನೆ ನನ್ನ ಪ್ರೇಮಿ, ನನ್ನ ಎದೆಯಲ್ಲಿ”

********************************

83

ವಿರಹದಿಂದ
ತೊಯ್ದು ಒದ್ದೆಯಾಗಿರುವ ಹೆಣ್ನೊಬ್ಬಳು
ಆತುಕೊಂಡು ನಿಂತಿದ್ದಾಳೆ
ಅಂಗಳದ ಬಾವಿಯ ಪಕ್ಕ ಇರುವ
ಮಾವಿನ ಮರದ ಟೊಂಗೆಗೆ.
ಮಾವಿನ ಹೂಗಳ ಪರಾಗದ ಆಸೆಯಲ್ಲಿ
ಗದ್ದಲ ಹಾಕುತ್ತಿರುವ
ಗಂಡು ಹೆಣ್ಣು ದುಂಬಿಗಳ ಹಾರಾಟದ ಭರಾಟೆಗೆ,
ಉಳಿದುಕೊಂಡಿದೆ
ಅವಳ ಸೊಂಟದ ಮೇಲಿನ ಬಟ್ಟೆ ಮಾತ್ರ
ಗಾಬರಿಯಲ್ಲಿ.
ಅವಳ ಏದುಸಿರಿಗೆ ಕಂಪಿಸುತ್ತಿರುವ
ಮೊಲೆಗಳನ್ನು ನೋಡಿ
ಹೊತ್ತಿಗೆ ಮುಂಚೆ  ಮರದಲ್ಲಿ ಹಣ್ಣು ಕಂಡಂತೆ
ಬೆರಗಾಗಿವೆ ದುಂಬಿಗಳು.

******************************

84

ನೀನು ಕೇಳಲಿಲ್ಲ
ಬದಲಾದ ಪ್ರೇಮದ ಋತುಗಳ ಮಾತನ್ನೂ,
ನಿರಾಕರಿಸಿದೆ ಸಖಿಯರ ಸಲಹೆಯನ್ನೂ,
ಧಿಕ್ಕರಿಸಿದೆ ಯಾವುದೋ  ಸೊಕ್ಕಿನಲ್ಲಿ
ಎಲ್ಲ ಪ್ರೇಮಿಗಳನ್ನೂ.
ಪ್ರಾಯದ ಬೆಂಕಿಯಲ್ಲಿ ಕೈ ಹಾಕಿ
ಕೆಂಡವನ್ನು ಆರಿಸಿಕೊಂಡಂತಿದೆ ನಿನ್ನ ಸ್ಥಿತಿ.
ಸಿಟ್ಟಿಗೆದ್ದ ಕಾಡುಮೃಗದಂತೆ ವ್ಯವಹರಿಸುತ್ತಿದೆ
ಈಗ ನಿನ್ನ ಪ್ರೇಮ, ಅಥವಾ
ಕಾಮ.

*****************************

85

ಗೆಳತಿ,
ಸಿಟ್ಟಿನಲ್ಲಿ ನೀನು ನಿನ್ನ ಕೈಗಳನ್ನು
ನಿನ್ನ ಕೆನ್ನೆಗೆ ಒತ್ತಿಕೊಂಡಿರುವ ಒತ್ತಡದ ಬೆವರಿಗೆ
ಅಳಿಸಿಹೋಗಿದೆ ನಿನ್ನ ಕೈಗಳ ಮದರಂಗಿ.
ನಿನ್ನ ನಿಟ್ಟಿಸಿರು ಆರಿಸಿ ಒಣಗಿಸಿದೆ
ನಿನ್ನ ತುಟಿಯ ಹಸಿಯನ್ನು,
ನಿನ್ನ ಮೊಲೆಗಳು ಕಂಪಿಸುತ್ತಿವೆಯೇನೋ ನಿಜ
ಆದರೆ ಪ್ರೇಮದ ಆತರಕ್ಕಲ್ಲ,
ನಿನ್ನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿರುವ ಬಿಕ್ಕು ಕಾರಣವಾಗಿ.

ಗೆಳತಿ
ಈಗ ನಿನ್ನ ಪ್ರೇಮಿಸುತ್ತಿರುವುದು
ನಿನ್ನ ಕೋಪ,
ನಾನಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.