ಹಾರ್ಟ್ ಸೂತ್ರದ ಪ್ರಕಾರ “ ಯಾವುದನ್ನೂ ಸಾಧಿಸಿಕೊಳ್ಳುವ ಅವಶ್ಯಕತೆಯಿಲ್ಲ” (there is nothing to attain). ನಾವು ಧ್ಯಾನ ಮಾಡುವುದು ಜ್ಞಾನೋದಯವನ್ನ ಸಾಧಿಸಿಕೊಳ್ಳಲಿಕ್ಕಲ್ಲ, ಏಕೆಂದರೆ ಜ್ಞಾನೋದಯ ಈಗಾಗಲೇ ನಮ್ಮಲ್ಲಿ ಇರುವಂಥದು. ಬೇರೆ ಕಡೆ ಹುಡುಕಾಡುವ ಅವಶ್ಯಕತೆ ಇಲ್ಲ… ~ Thich Nhat Hanh । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದು
ಕಪ್ಪೆಯನ್ನು ತಟ್ಟೆಯಲ್ಲಿಟ್ಟಾಗ
ಕೆಲ ಕ್ಷಣಗಳ ನಂತರ ಕಪ್ಪೆ
ಜಿಗಿಯುತ್ತದೆ ತಟ್ಟೆಯಿಂದ ಆಚೆ.
ಮತ್ತೆ ಆ ಕಪ್ಪೆಯನ್ನು ತಂದು
ತಟ್ಟೆಯ ಮಧ್ಯೆ ಇಟ್ಟಾಗ
ಮತ್ತೆ ಜಿಗಿಯುತ್ತದೆ ಕಪ್ಪೆ
ತಟ್ಟೆಯಿಂದ ಆಚೆಗೆ.
ನಿಮ್ಮ ಯೋಜನೆಗಳು ಸಾಕಷ್ಟು,
ಏನೋ ಆಗಬೇಕೆಂದುಕೊಂಡಿದ್ದೀರಿ
ಹಾಗಾಗಿಯೇ ನೀವು
ದಾಟಿ ಹೋಗಬಯಸುತ್ತೀರಿ,
ಎದುರು ನೋಡುತ್ತಿದ್ದೀರಿ
ದೊಡ್ಡದೊಂದು ಹಾರುವಿಕೆಯನ್ನ.
ಕಪ್ಪೆಯನ್ನು
ತಟ್ಟೆಯ ನಡುವೆ ಸುಮ್ಮನಿರಿಸುವುದು
ಸಾಧ್ಯವಿಲ್ಲದ ಮಾತು
ನಿಮ್ಮಲ್ಲಿ ಮತ್ತು
ನನ್ನಲ್ಲಿ ಬುದ್ಧ ಸ್ವಭಾವವಿದೆ,
ಇದು ಧೈರ್ಯ ತುಂಬುವ ವಿಷಯ.
ಆದರೆ ನನ್ನಲ್ಲಿ ಮತ್ತು ನಿಮ್ಮಲ್ಲಿ ಇದೆ
ಕಪ್ಪೆಯ ಸ್ವಭಾವವೂ.
ಹಾಗಾಗಿ ಸಾಧನೆ
ಬುದ್ಧನಾಗುವುದಲ್ಲ ಕಪ್ಪೆಯಾಗದಿರುವುದು.
ಬುದ್ಧ ಅಲ್ಲೇ ಇರುತ್ತಾನೆ,
ಹೋಗುವುದಿಲ್ಲ ಎಲ್ಲಿಯೂ.
ಎಲ್ಲಿಗೂ ಹೋಗುವ ಬಯಕೆ ಇರದೇ, ಏನನ್ನು ಮುಟ್ಟುವ ಗುರಿ ಇರದೇ ಸುಮ್ಮನೇ ನಡೆಯುವುದು ಬೇಕಾದಷ್ಟಾಯ್ತು ಎಂದರೆ ಬಹಳಷ್ಟು ಜನ ನಂಬಲಿಕ್ಕಿಲ್ಲ. ಅವರ ಪ್ರಕಾರ ತುಡಿತ ಮತ್ತು ಸ್ಪರ್ಧೆ ಇರಬೇಕಾದದ್ದು ಸಹಜ ಮತ್ತು ಅವಶ್ಯಕ.
ಈ ಗುರಿರಹಿತತೆ (aimlessness) ಯನ್ನು ಕನಿಷ್ಟ 5 ನಿಮಿಷ ಪ್ರ್ಯಾಕ್ಟೀಸ್ ಮಾಡಿ ಆಗ ನಿಮಗೆ ಗೊತ್ತಾಗುತ್ತದೆ ಆ ಐದು ನಿಮಿಷಗಳು ನಿಮಗೆ ಎಷ್ಟು ಆನಂದದಾಯಕವಾಗಿದ್ದವು ಎನ್ನುವುದು.
ಹಾರ್ಟ್ ಸೂತ್ರದ ಪ್ರಕಾರ “ ಯಾವುದನ್ನೂ ಸಾಧಿಸಿಕೊಳ್ಳುವ ಅವಶ್ಯಕತೆಯಿಲ್ಲ” (there is nothing to attain). ನಾವು ಧ್ಯಾನ ಮಾಡುವುದು ಜ್ಞಾನೋದಯವನ್ನ ಸಾಧಿಸಿಕೊಳ್ಳಲಿಕ್ಕಲ್ಲ, ಏಕೆಂದರೆ ಜ್ಞಾನೋದಯ ಈಗಾಗಲೇ ನಮ್ಮಲ್ಲಿ ಇರುವಂಥದು. ಬೇರೆ ಕಡೆ ಹುಡುಕಾಡುವ ಅವಶ್ಯಕತೆ ಇಲ್ಲ. ನಮಗೆ ಯಾವುದೇ ಒಂದು ಗುರಿ ಅಥವಾ ಉದ್ದೇಶದ ಅವಶ್ಯಕತೆ ಇಲ್ಲ. ಯಾವುದೇ ಎತ್ತರದ ಸ್ಥಾನವನ್ನು ಗಳಿಸಲು ನಾವು ಪ್ರ್ಯಾಕ್ಟೀಸ್ ಮಾಡಬೇಕಿಲ್ಲ.
ಈ ಗುರಿರಹಿತತೆ ಯಲ್ಲಿ ನಮಗೆ ಯಾವುದರ ಕೊರತೆಯೂ ಇಲ್ಲ, ನಾವು ಈಗಾಗಲೇ ಇರುವ, ಆಗಲು ಬಯಸುವ, ಮತ್ತು ನಮ್ಮೊಳಗಿನ ಎಲ್ಲ ತುಡಿತವೂ ನಿಂತು ಹೋಗುತ್ತದೆ. ನಾವು ಈಗಿನ ಮೊಮೆಂಟ್ ಲ್ಲಿ ಸಮಾಧಾನ ಹೊಂದಿದ್ದೇವೆ. ಕೇವಲ ನಮ್ಮ ಕಿಟಕಿಯಿಂದ ಬರುತ್ತಿರುವ ಬಿಸಿಲಿನ ಕೋಲನ್ನು ನೋಡುವುದು ಅಥವಾ ಕೇವಲ ಮಳೆಯ ಸದ್ದನ್ನು ಕೇಳುವುದು ನಮಗೆ ಸಾಧ್ಯವಾಗುತ್ತಿದೆ.
ನಾವು ಯಾವುದರ ಹಿಂದೆಯೂ ಓಡಬೇಕಿಲ್ಲ. ನಾವು ಪ್ರತಿಕ್ಷಣವನ್ನೂ ಆನಂದಿಸುವುದು ಸಾಧ್ಯವಾಗಬೇಕು. ಜನ ನಿರ್ವಾಣವನ್ನು ಪ್ರವೇಶಿಸುವ ಬಗ್ಗೆ ಮಾತನಾಡುತ್ತಾರೆ ಆದರೆ ನಾವು ಈಗಾಗಲೇ ಅಲ್ಲಿದ್ದೇವೆ. ಗುರಿರಹಿತತೆ ಮತ್ತು ನಿರ್ವಾಣ ಬೇರೆ ಬೇರೆ ಅಲ್ಲ, ಎರಡೂ ಒಂದೇ.

