ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ 11ನೇ ಭಾಗ ಇಲ್ಲಿದೆ…
86
ಬಹಳ ದಿನಗಳ ನಂತರ
ಕಾಣಿಸಿಕೊಂಡಿದ್ದ ಪ್ರೇಮಿಯ ಜೊತೆಗಿನ
ಸಮಾಗಮಕ್ಕಾಗಿ ತುಡಿಯುತ್ತಿದ್ದ ಅವಳು,
ಹಗಲನ್ನು ಕಳೆದಳು ಹೇಗೋ ಕಷ್ಟಪಟ್ಟು
ರಾತ್ರಿ ದೊರಕಬಹುದಾಗಿದ್ದ
ನೂರಾರು ಸುಖಗಳ ನಿರೀಕ್ಷೆಯಲ್ಲಿ.
ಈಗ ಮಂಚ ಸೇರುವ ಸಮಯ ;
ಆದರೂ ಮುಂದುವರೆಸಿದ್ದಾರೆ ಗೆಳತಿಯರು ತಮ್ಮ
ಕಾಡು ಹರಟೆಯನ್ನ
ಇನ್ನು ತಡೆದುಕೊಳ್ಳುವುದು ಸಾಧ್ಯವಿಲ್ಲವೆಂದು ಆಕೆ
“ಓಹ್ ಏನೋ ಕಚ್ಚಿತು” ಎಂದು ತನ್ನ
ಸೀರೆ ಒದರಿಕೊಳ್ಳುತ್ತ ಓಡಿ ಹೋಗಿ
ಬಾಗಿಲು ಹಾಕಿಕೊಂಡಳು
ದೀಪ ಆರಿಸಿ.
87
ಇನ್ನೂ ಚಿಗುರುತ್ತಿದ್ದ ನನ್ನ ಎದೆ
ತುಂಬಿಕೊಳ್ಳುತ್ತಿದೆ ನಿನ್ನ ಅಪ್ಪುಗೆಯಿಂದಾಗಿ,
ನನ್ನ ಮುಗ್ಧ ಮಾತುಗಳು
ಕಳೆದುಕೊಂಡಿವೆ ತಮ್ಮ ಸಹಜತೆಯನ್ನು
ನಿನ್ನ ಮಾತುಗಳಿಂದ ಪ್ರಭಾವಿತಗೊಂಡು.
ಏನು ಮಾಡಲಿ ನಾನು?
ಅಜ್ಜಿಯ ಕೊರಳಿಗೆ ಸದಾ ಸುತ್ತಿಕೊಂಡಿರುತ್ತಿದ್ದ
ನನ್ನ ತೋಳುಗಳು
ಸುತ್ತಲಾರಂಭಿಸಿದ್ದವು ಈಗ ನಿನ್ನ ಸುತ್ತ.
ಆದರೆ ಕಾಣಿಸುಕೊಳ್ಳುತ್ತಲೇ ಇಲ್ಲವಲ್ಲ ಈಗ ನೀನು
ನನ್ನ ನೆರೆಹೊರೆಯಲ್ಲಿ.
88
ನನ್ನ ಹೃದಯ ತುಡಿಯುತ್ತಿದೆ
ಒಂದೇ ಸವನೇ ಅವಳ ನೋಟಕ್ಕಾಗಿ.
ಅವಳನ್ನು ತಲುಪುವ ಸಾವಿರಾರು ಹಾದಿಗಳಿಗಾಗಿ
ನಾನು ಹೊಂಚುಹಾಕುತ್ತಿರುವಾಗ,
ಹೊತ್ತಿ ಉರಿದಿದೆ ಬಯಕೆ ಮತ್ತು
ಹೊತ್ತು ತಂದಿದ್ದಾಳೆ ಅವಳ ಗೆಳತಿ
ನಮ್ಮ ಸಮಾಗಮದ ನಿಖರ ಸೂಚನೆಗಳನ್ನು.
ಯಾರು ತಾನೇ ಕಲ್ಪನೆ ಮಾಡಿಕೊಳ್ಳಬಲ್ಲರು
ಒಂದು ಅವಸರದ ರಾತ್ರಿಯ ವೈಭೋಗಗಳನ್ನ?
ಅವಳ ಮನೆಯ ಸುತ್ತಲಿನ
ಚಕ್ಕಡಿ ರಸ್ತೆಯಲ್ಲಿ ಕಾಣಿಸಿಕೊಂಡವು
ನನ್ನ ಹೆಜ್ಜೆಯ ಗುರುತುಗಳು
ಅನುಭವಿಸಲು ಮಹತ್ತರವಾದ ಸುಖವನ್ನು.
89
ಪ್ರೇಮದಲ್ಲಿ
ಅವಳು ವಿಜೃಂಭಿಸಿದ ಪರಿಗೆ
ಜಾರಿ ಹೋಗಿದೆ ಎದೆಯ ಮೇಲಿನ ಬಟ್ಟೆ.
ತನ್ನ ಪ್ರೇಮಿ ಎಲ್ಲಿ ಮುಚ್ಚಿಕೊಂಡಿರುವ ಕಣ್ಣು
ತೆಗೆದುಬಿಡುವನೋ ಎನ್ನುವ ಭಯದಲ್ಲಿ
ಹುಡುಕಾಡುತ್ತಿದ್ದಾಳೆ ಆಕೆ ತನ್ನ ಬಟ್ಟೆಗಳಿಗಾಗಿ,
ಒಂದು ಕೈಯಿಂದ ಅವನ ಕಣ್ಣುಗಳ ಮುಚ್ಚಿ
ಇನ್ನೊಂದು ಕೈಯಿಂದ
ಹೆರಳಲ್ಲಿನ ಮಲ್ಲಿಗೆ ಮಾಲೆ ಎಸೆದು
ಆರಿಸಿಬಿಟ್ಟಳು ದೀಪ.
ಇಷ್ಟು ಪ್ರೇಮಿಸಿದವನು ಕಣ್ಣು ಮುಚ್ಚಿಕೊಂಡೇ
ಅವಳ ಅವಸ್ಥೆಯನ್ನು ಅನುಭವಿಸಬಲ್ಲ ಎನ್ನುವುದು
ಗೊತ್ತಿಲ್ಲವೆ ಅವಳಿಗೆ.
90
ಪ್ರೇಮ
ಒಂದು ಹಂತ ತಲುಪಿದಾಗ,
ಅವಳ ಸೊಂಟದ ಮೇಲಿನ ಬಟ್ಟೆ ಬಿಚ್ಚಲು
ಅವನು ತನ್ನ ನಡುಗುವ ಕೈಗಳಿಂದ
ಪ್ರಯತ್ನ ಮಾಡುತ್ತಿದ್ದಂತೆಯೇ,
ಆಕೆ ನಿದ್ದೆ ನಟಿಸುತ್ತ ಅವನ ಮೈಯೊಳಗೆ
ಸೇರಿಸಿಕೊಂಡಳು ತನ್ನನ್ನು ತಾನು,
ತನ್ನ ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳುತ್ತ
ಸಣ್ಣಗಾಗಿಸಿಕೊಂಡಳು ಸೊಂಟವನ್ನು.
91
ತನ್ನ ದೃಷ್ಟಿ ನಿಲುಕುವವರೆಗೆ
ಆಕೆ ತನ್ನ ಪ್ರೇಮಿಯ ಹಾದಿಯ ಮೇಲೆ
ಕಣ್ಣು ಹಾಯಿಸಿದಳು.
ದಾರಿ ಮಾತು ನಿಲ್ಲಿಸಿ ಮೌನವಾಯಿತು
ಹಗಲು ಸುಸ್ತಾಗಿ ರಾತ್ರಿಗೆ ಹೊರಳಿಕೊಂಡಿತು.
ಕಾದು ಕಾದು ಬೇಸತ್ತು ಆಕೆ
ತನ್ನ ಮನೆಯ ದಿಕ್ಕಿಗೆ ಮುಖ ಮಾಡಿದಳು
ಮತ್ತೆ ಎನ್ನೋ ನೆನಪಾಗಿ
ಥಟ್ಟನೇ ಹೊರಳಿ ಮತ್ತೆ ಅವನ ನಿರೀಕ್ಷೆಯಲ್ಲಿ
ಕಣ್ಣು ನೆಟ್ಟಳು.
92
ದೇಶ ದೇಶಗಳನ್ನು ಹುಡುಕಿದರೂ
ನೂರಾರು ನದಿ, ಪರ್ವತ,
ಕಾಡುಗಳನ್ನು ತಡಕಾಡಿದರೂ
ತನ್ನ ಪ್ರಿಯತಮೆ ಕಣ್ಣಿಗೆ ಸಿಗುವುದಿಲ್ಲ
ಎನ್ನುವುದು ಗೊತ್ತಿದ್ದರೂ,
ಅವನು ತುದಿಗಾಲ ಮೇಲೆ ನಿಂತು
ಕತ್ತು ಎತ್ತರಿಸಿ, ಕಣ್ಣಲ್ಲಿ ದುಗುಡ ತುಂಬಿಕೊಂಡು
ಅವಳನ್ನೇ ಹುಡುಕುತ್ತಿದ್ದಾನೆ
ಏನು ಯೋಚಿಸುತ್ತಿದ್ದಾನೆ ಅವನು?

