ನಸ್ರುದ್ದೀನ್ ನ ಮಗನಿಗೆ ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿತ್ತು.
“ ನಿನ್ನ ಬಗ್ಗೆ ನನಗೆ ಹೆಮ್ಮೆ ಮಗನೇ. ಏನಾದರೂ ಒಂದು ಕೇಳು, ನಿನಗೆ ಖಂಡಿತ ಕೊಡುತ್ತೇನೆ”. ನಸ್ರುದ್ದೀನ್ ಮಗನಿಗೆ ಹೇಳಿದ.
ಅಪ್ಪನ ಔದಾರ್ಯ ಕಂಡು ಮಗನಿಗೆ ಖುಶಿಯ ಜೊತೆಗೆ ಗಾಬರಿಯೂ ಆಯಿತು. “ ಅಪ್ಪ ವಿಚಾರ ಮಾಡಲು ಒಂದು ದಿನ ಕೊಡು” ಮಗ ಮನವಿ ಮಾಡಿದ.
“ಖಂಡಿತ” ನಸ್ರುದ್ದೀನ್ ಮಗನ ಮನವಿಯನ್ನು ಪುರಸ್ಕರಿಸಿದ.
ಮಾರನೆಯ ದಿನ ಅಪ್ಪನ ಬಳಿ ಬಂದ ನಸ್ರುದ್ದೀನ್ ನ ಮಗ, ತನ್ನ ಬೇಡಿಕೆಯನ್ನು ಮಂಡಿಸಿದ, “ ಅಪ್ಪ ನನಗೆ ಒಂದು ಕತ್ತೆ ಕೊಡಿಸು”
“ವಿಚಾರ ಮಾಡಲು ನೀನು ಒಂದು ದಿನ ಕೇಳಿದ್ದೆ. ನಾನು ನಿನಗೆ ಒಂದು ದಿನ ಕೊಟ್ಟೆ. ಅಲ್ಲಿಗೆ ನಿನ್ನ ಒಂದು ಬೇಡಿಕೆ ಮುಗಿದು ಹೋಯಿತು. ಈಗ ನೀನು ಎರಡನೇಯ ಬೇಡಿಕೆ ಕೇಳುವ ಹಾಗಿಲ್ಲ”.
ನಸ್ರುದ್ದೀನ್ ಮಗನ ಬೇಡಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದ.

