ಕೆಲವರು ಸಕಾರಾತ್ಮಕತೆಯ ಪ್ರಯಾಣವನ್ನು ಶುರುವೇನೋ ಮಾಡುತ್ತಾರೆ, ಅಲ್ಪ ಸ್ವಲ್ಪ ಪ್ರಗತಿಯನ್ನೂ ಸಾಧಿಸುತ್ತಾರೆ ಆದರೆ ಪೂರ್ಣ ಗುರಿ ಮುಟ್ಟುವ ಮುನ್ನವೇ ತಮ್ಮ ಪ್ರಯಾಣವನ್ನು ನಿಲ್ಲಿಸಿಬಿಡುತ್ತಾರೆ. ಇದರ ಅಂತಿಮ ಗುರಿ ಮುಟ್ಟುವುದು ಕೆಲವರು ಮಾತ್ರ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಧನಾತ್ಮಕ ವ್ಯಕ್ತಿಯಾಗುವುದು ಹೇಗೆ? ಧನಾತ್ಮಕ ವ್ಯಕ್ತಿಯಾಗುವುದಕ್ಕೆ ಹಲವಾರು ಹಂತಗಳಿವೆಯೋ ಅಥವಾ ಥಟ್ಟನೇ ಒಮ್ಮೆಲೇ ಧನಾತ್ಮಕ ವ್ಯಕ್ತಿಯಾಗುವುದು ಸಾಧ್ಯವೆ?
ಬಹುಶಃ ಇದಕ್ಕೆ ಯಾವ ನಿರ್ದಿಷ್ಟ ಉತ್ತರಗಳಿರಲಿಕ್ಕಿಲ್ಲ. ಜನ ಬೇರೆ ಬೇರೆ ಕಾರಣಗಳಿಗಾಗಿ ಸಕಾರಾತ್ಮಕತೆಯತ್ತ ಮುಂದುವರೆಯುತ್ತಾರೆ, ಬೇರೆ ಬೇರೆ ತೀವ್ರತೆಯಲ್ಲಿ, ಬೇರೆ ಬೇರೆ ಸಮಯದಲ್ಲಿ, ಬೇರೆ ಬೇರೆ ಫಲಿತಾಂಶಗಳನ್ನು ನಿರೀಕ್ಷಿಸುತ್ತ. ಕೆಲವರು ಸಕಾರಾತ್ಮಕತೆಯ ಪ್ರಯಾಣವನ್ನು ಶುರುವೇನೋ ಮಾಡುತ್ತಾರೆ, ಅಲ್ಪ ಸ್ವಲ್ಪ ಪ್ರಗತಿಯನ್ನೂ ಸಾಧಿಸುತ್ತಾರೆ ಆದರೆ ಪೂರ್ಣ ಗುರಿ ಮುಟ್ಟುವ ಮುನ್ನವೇ ತಮ್ಮ ಪ್ರಯಾಣವನ್ನು ನಿಲ್ಲಿಸಿಬಿಡುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಋಣಾತ್ಮಕತೆಯನ್ನು ಕಳೆದುಕೊಳ್ಳಲು ಸಂಪೂರ್ಣ ಪ್ರಯತ್ನ ಮಾಡುತ್ತ ಧನಾತ್ಮಕ ಖುಶಿಯ ಮನುಷ್ಯನಾಗುವ ತಮ್ಮ ಬಯಕೆಯನ್ನ ಪೂರ್ತಿ ಮಾಡಿಕೊಳ್ಳುತ್ತಾರೆ.
Marianne Williamson ನ ಒಂದು ಮಾತು ನೆನಪಾಗುತ್ತಿದೆ, “ದ್ವೇಷ ಬಹಳ ಹಿಂದಿನಿಂದಲೂ ಜೋರಾಗಿ ಮಾತನಾಡುತ್ತಿದೆ, ಎಷ್ಟೋ ಕಾಲದಿಂದ ದುರಾಸೆ ಜೋರಾಗಿ ಮಾತನಾಡುತ್ತಿದೆ, ಸುಳ್ಳುಗಾರರು ಜೋರಾಗಿ ಮಾತನಾಡಲು ಶುರು ಮಾಡಿ ಎಷ್ಟೋ ಕಾಲವಾಯಿತು. ಈಗ ಪ್ರೀತಿ ತನ್ನ ಪಿಸುಮಾತನ್ನ ನಿಲ್ಲಿಸಬೇಕಾಗಿದೆ”.
ಈ ಮಾತುಗಳು ಆಶಾವಾದ ಮತ್ತು ಖುಶಿಯ ಕಡೆಗಿನ ನಮ್ಮ ಪ್ರಯಾಣದ ಬಗ್ಗೆ ಹಲವಾರು ಒಳನೋಟಗಳನ್ನು ನೀಡುತ್ತದೆ. ಸಕಾರಾತ್ಮಕತೆಯತ್ತ ಬಹುತೇಕರ ಪ್ರಯಾಣ ಶುರುವಾಗೋದು ಅವರು ವಿಷಕಾರಿ ಭಾವನೆಗಳು ಮತ್ತು ಕೋಪ, ದುರಾಸೆ, ಅಸೂಯೆ, ದ್ವೇಷ ಮುಂತಾದವುಗಳಿಂದ ದಣಿದು ಬೇಸತ್ತಾಗ. ಕೆಲವರಿಗೆ ಬದುಕಿನ ಯಾವುದೋ ಒಂದು ಹಂತದಲ್ಲಿ ಥಟ್ಟನೇ ಆಶ್ಚರ್ಯಕರವಾಗಿ ಸಾಕ್ಷಾತ್ಕಾರವಾಗಿಬಿಡುತ್ತದೆ, ಈ ಋಣಾತ್ಮಕ ಭಾವನೆಗಳು, ನಂಬಿಕೆಗಳು, ದೃಷ್ಟಿಕೋನಗಳು ತಮಗೆ ಎಷ್ಟು ಹಾನಿ ಮಾಡುತ್ತಿವೆ ಎಂದು. ಇವುಗಳಿಂದ ಹೊರ ಬರಲು ಏನಾದರೂ ಮಾಡಲೇಬೇಕೆಂಬ ಹಟ ಅವರಲ್ಲಿ ಹುಟ್ಟಿಕೊಂಡು ಬಿಡುತ್ತದೆ. ಈ ಏನಾದರೂ ಎನ್ನುವುದು ಒಂದು ವ್ಯಕ್ತಿಗತ ನಿರ್ಧಾರ, ವಿಷಕಾರಿ ಸಂಗತಿಗಳನ್ನು ನಮ್ಮಿಂದ ಡ್ರೇನ್ ಔಟ್ ಮಾಡಲು.
ಯಾವಾಗ ನಮಗೆ ಹೀಗೆ ಅನಿಸುತ್ತದೆಯೋ, ಆಗ ನಾವು ಕತ್ತಲಿಂದ ಎಲ್ಲ ಸಾಮರ್ಥ್ಯವನ್ನು ಹೊರತೆಗೆದು ಬೆಳಕಿಗೆ ಕೊಟ್ಟುಬಿಡುತ್ತೇವೆ. ಈಗ ನಾವು ನಿಜವಾಗಿ ಸಕಾರಾತ್ಮಕತೆಯ ಪ್ರಯಾಣದಲ್ಲಿದ್ದೇವೆ ಮತ್ತು ಈಗ ನಾವು ಯಾವತ್ತಿಗಿಂತಲೂ ಶಕ್ತಿಶಾಲಿಗಳಾಗಿದ್ದೇವೆ ಎನ್ನುವುದನ್ನ ನಾವು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕು. ಋಣಾತ್ಮಕತೆಯನ್ನು ನಿರಾಕರಿಸಿ, ಧನಾತ್ಮಕತೆಯನ್ನು ಅಪ್ಪಿಕೊಂಡಿರುವ ಪ್ರತಿ ವ್ಯಕ್ತಿಯೂ ವಾಸ್ತವದಲ್ಲಿದ್ದಾನೆ ಮತ್ತು ಈ ಜಗತನ್ನು ಎಲ್ಲ ನೋವು ಸಂಕಟಗಳಿಂದ ಪಾರು ಮಾಡುವ ಪ್ರಯತ್ನಗಲ್ಲಿದ್ದಾನೆ.
ಇವತ್ತು ಈ ಒಂದು ಧೃಡ ನಿರ್ಧಾರವನ್ನು ನಾವು ಮಾಡಲೇಬೇಕಾಗಿದೆ, ಪ್ರೀತಿ ಮತ್ತು ಅಂತಃಕರಣ, ದ್ವೇಷ, ದುರಾಸೆ ಮತ್ತು ಎಲ್ಲ ವಿಷಕಾರಿ ಭಾವನೆಗಳಿಗಿಂತ ಗಟ್ಟಿಯಾಗಿ ಮಾತನಾಡಲೇಬೇಕಿದೆ. ಪ್ರೇಮದ ಧ್ವನಿ – ಪ್ರತಿಧ್ವನಿ ಗೆ ಮಾತ್ರ ಇದೆ ಎಲ್ಲವನ್ನೂ ಗೆಲ್ಲುವ ಸಾಮರ್ಥ್ಯ.

