ನನಗೆ ನಾನೇ ದೀಪವಾಗುವುದು ಎಂದರೇನು? : ಓಶೋ ವ್ಯಾಖ್ಯಾನ

ನಿಮಗೆ ನೀವು ದೀಪ ಆಗುವುದಲ್ಲ… ದೀಪ ಈಗಾಗಲೇ ನಿಮ್ಮ ಒಳಗೆ ಇದೆ. ಆದರೆ ನಿಮ್ಮ ಪ್ರಯಾಣ ಯಾವತ್ತೂ ಬಹಿರ್ಮುಖವಾದದ್ದು, ಆದ್ದರಿಂದ ನಿಮ್ಮ ಒಳಗೇ ಇರುವ ಬೆಳಕಿನ ಪರಿಚಯ ನಿಮಗಿಲ್ಲ, ಅಷ್ಟೇ. ~ ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರ, ನಿಮ್ಮ ಶರಣ ಸಂಬಂಧ.

~ ಅಲ್ಲಮ ಪ್ರಭು


ಮೊದಲ ಪ್ರಶ್ನೆ, ನನಗೆ ನಾನೇ ದೀಪವಾಗುವುದು ಎಂದರೇನು?

ಇವು ಬುದ್ಧನ ಕೊನೆಯ ಮಾತುಗಳು. ಗೌತಮ ಬುದ್ಧ ತನ್ನ ಶಿಷ್ಯರಿಗೆ ಹೇಳಿದ ವಿದಾಯದ ಮಾತುಗಳು, “ನಿನಗೆ ನೀನು ದೀಪ ವಾಗಿರು. ಆದರೆ , “ನಿನಗೆ ನೀನು ದೀಪ ವಾಗಿರು” ಎಂದರೆ “ನಿನಗೆ ನೀನು ದೀಪ ವಾಗು” ಎಂದಲ್ಲ. ಆಗಿರು (be) ಮತ್ತು ಆಗು (become) ಈ ಎರಡರ ನಡುವೆ ಬಹಳ ವ್ಯತ್ಯಾಸವಿದೆ.

ಆಗು ಎನ್ನುವುದು ಒಂದು ಪ್ರಕ್ರಿಯೆ ಆದರೆ ಆಗಿರು ಎನ್ನುವುದು ಒಂದು ಡಿಸ್ಕವರಿ. ಒಂದು ಬೀಜ, ಮರ ಆಗುವ ಹಾಗೆ ಕಾಣಿಸುತ್ತದೆ ಅಷ್ಟೇ ; ಇದು ತೋರಿಕೆ ಮಾತ್ರ. ಬೀಜ ಈಗಾಗಲೇ ಮರವನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಇದೇ ಬೀಜದ ನಿಜವಾದ ಇರುವಿಕೆಯ ಸ್ಥಿತಿ. ಬೀಜ, ಹೂವು ಆಗುವುದಿಲ್ಲ. ಬೀಜದೊಳಗಡೆ ಅವ್ಯಕ್ತ ರೂಪದಲ್ಲಿರುವ ಹೂವು ಈಗ ವ್ಯಕ್ತಗೊಳ್ಳುತ್ತಿದೆ ಅಷ್ಟೇ.

ಇಲ್ಲಿ “ಆಗುವ” ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಲ್ಲವಾದರೆ, ಕಲ್ಲಿನ ಹರಳು ಅರಳಿ ಹೂವು ಆಗಬಹುದಿತ್ತು. ಆದರೆ ಹಾಗಾಗುವುದಿಲ್ಲ. ಯಾಕೆಂದರೆ ಕಲ್ಲಿನೊಳಗೆ ಹೂವಾಗುವ ಸಾಮರ್ಥ್ಯ (potential) ಇಲ್ಲ. ಆದರೆ ಬೀಜ, ಮಣ್ಣೊಳಗೆ ನಾಟಿಕೊಂಡಾಗ ತನ್ನನ್ನು ತಾನು ಶೋಧಿಸಿಕೊಳ್ಳುತ್ತ, ಹೊರಗಿನ ಕವಚವನ್ನ ಕಳಚಿಕೊಳ್ಳುತ್ತ, ತನ್ನ ನೈಜತೆಯನ್ನು ಅನಾವರಣಗೊಳಿಸಿಕೊಳ್ಳುತ್ತದೆ.

ಮನುಷ್ಯನೂ ಬಿಜದಂತೆ, ಅವನು ಈಗಾಗಲೇ ತನ್ನೊಳಗೆ ಬುದ್ಧನನ್ನು ಧರಿಸಿಕೊಂಡಿದ್ದಾನೆ. ಆದ್ದರಿಂದ ಮನುಷ್ಯ ಬುದ್ಧ ಆಗುವುದಿಲ್ಲ, ಅವನು ಈಗಾಗಲೇ ಬುದ್ದ. ಬುದ್ಧನಾಗುವುದೆಂದರೆ ಕಲಿಯುವ, ಸಾಧಿಸುವ ಪ್ರಶ್ನೆಯಲ್ಲ, ಬುದ್ದನಾಗುವುದೆಂದರೆ ಒಳಗಿನ ಬುದ್ಧನನ್ನು ಗುರುತಿಸಿಕೊಳ್ಳುವುದು. ನೀವು ನಿಮ್ಮೊಳಗೆ ಪ್ರಯಾಣ ಮಾಡಿ ಈಗಾಗಲೇ ನಿಮ್ಮೊಳಗೆ ಇರುವುದನ್ನ ಗುರುತಿಸಿಕೊಳ್ಳುವುದು. ಬುದ್ಧನಾಗುವುದೆಂದರೆ ಸೆಲ್ಫ್ ಡಿಸ್ಕವರಿ.

ಹಾಗಾಗಿ ನಿಮಗೆ ನೀವು ದೀಪ ಆಗುವುದಲ್ಲ. ದೀಪ ಈಗಾಗಲೇ ನಿಮ್ಮ ಒಳಗೆ ಇದೆ. ಆದರೆ ನಿಮ್ಮ ಪ್ರಯಾಣ ಯಾವತ್ತೂ ಬಹಿರ್ಮುಖವಾದದ್ದು, ಆದ್ದರಿಂದ ನಿಮ್ಮ ಒಳಗೇ ಇರುವ ಬೆಳಕಿನ ಪರಿಚಯ ನಿಮಗಿಲ್ಲ. ನಮ್ಮ ವ್ಯವಸ್ಥೆ ನಮಗೆ ಬಹಿರ್ಮುಖತೆಯನ್ನ ಹೇಳಿಕೊಡುತ್ತದೆ. ಹಾಗಾಗಿ ನಾವು ಯಾವಾಗಲೂ ಹೊರಗೆ ಹುಡುಕುತ್ತಿರುತ್ತೇವೆ. ನಮ್ಮ ಗುರಿ ಅಲ್ಲಿ ಎಲ್ಲೋ ಹೊರಗೆ ಇದೆ ಎಂದುಕೊಂಡಿರುತ್ತೇವೆ.

ಹೀಗೆ ನಮ್ಮ ಗುರಿಯನ್ನ ನಾವು ದೂರ ಕಲ್ಪಿಸಿಕೊಂಡಷ್ಟು, ಇದನ್ನ ನಮ್ಮ ಅಹಂ ಚಾಲೇಂಜ್ ಆಗಿ ತೆಗೆದುಕೊಳ್ಳುತ್ತದೆ. ಗುರಿ ಕಠಿಣವಾದಷ್ಟು ಹೆಚ್ಚು ಆಕರ್ಷಕವಾಗುತ್ತ ಹೋಗುತ್ತದೆ. ಅಹಂ ಗೆ ಸವಾಲುಗಳು ಎಂದರೆ ಬಹಳ ಇಷ್ಟ. ಅದಕ್ಕೆ ಸದಾ ತನ್ನನ್ನು ತಾನು ಸಾಬೀತು ಮಾಡಿಕೊಳ್ಳುವ ಹುಕಿ. ಅಹಂ ಗೆ ಸರಳತೆಯಲ್ಲಿ, ಸಹಜತೆಯಲ್ಲಿ, ಸಾಮಾನ್ಯತೆಯಲ್ಲಿ ಆಸಕ್ತಿ ಇಲ್ಲ. ಅಹಂ ಯಾವಾಗಲೂ ದುರ್ಗಮವನ್ನ, ಅಸಹಜತೆಯನ್ನ, ಅಸಾಮಾನ್ಯವನ್ನ ಹುಡುಕಾಡುತ್ತದೆ. ಆದರೆ ಸತ್ಯ ಬಹಳ ಸರಳ, ಬಹಳ ಸಹಜ ಮತ್ತು ಬಹಳ ಸಾಮಾನ್ಯ.

ಸತ್ಯ ಅಲ್ಲಿ ಇಲ್ಲ, ಇಲ್ಲಿ ಇದೆ. ಸತ್ಯ ಯಾವಾಗಲೋ ಇಲ್ಲ, ಈಗ ಇದೆ. ಸತ್ಯ ಎಲ್ಲೋ ಹೊರಗೆ ಇಲ್ಲ, ನಿಮ್ಮ ಅಸ್ತಿತ್ವದ ಒಳಗೆ ಇದೆ. ನೀವು ಸುಮ್ಮನೇ ಕಣ್ಣು ಮುಚ್ಚಿಕೊಂಡು ನಿಮ್ಮೊಳಗೆ ಈಗಾಗಲೇ ಇರುವುದನ್ನ ಕಂಡುಕೊಳ್ಳಬೇಕಷ್ಟೆ.

~ Osho, Walking in Zen, Sitting in Zen, Chapter 13, excerpt


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.