ಪ್ರತಿಬಾರಿ ನನ್ನ ಹೆಜ್ಜೆ ನೆಲವನ್ನು ಮುಟ್ಟಿದಾಗ ನನ್ನ ತಾಯಿ ನನ್ನ ಜೊತೆ ಇರುವುದು ನನಗೆ ಗೊತ್ತಾಗುತ್ತಿತ್ತು. ಈ ದೇಹ ನನ್ನದಲ್ಲ ನನ್ನ ತಾಯಿಯ ಮತ್ತು ತಂದೆಯ, ನನ್ನ ಅಜ್ಜ ಅಜ್ಜಿಯರ, ನನ್ನ ಮತ್ತಜ್ಜ ಮುತ್ತಜ್ಜಿಯರ ಜೀವಂತ ಮುಂದುವರಿಕೆ ಎನ್ನುವುದು ನನಗೆ ಅರ್ಥವಾಯಿತು… ~ Thich Nhat Hanh । ಕನ್ನಡಕ್ಕೆ: ಚಿದಂಬರ ನರೇಂದ್ರ
ನನ್ನ ತಾಯಿ ತೀರಿಕೊಂಡಿದ್ದ ದಿನ ನಮ್ಮ ಜರ್ನಲ್ ನಲ್ಲಿ ಬರೆದಿದ್ದೆ, “ ಇವತ್ತು ನನ್ನ ಬದುಕಿನ ಅತ್ಯಂತ ದುರದೃಷ್ಟದ ದಿನ” ಎಂದು. ಅಮ್ಮ ತೀರಿಕೊಂಡ ನಂತರ ಒಂದು ವರ್ಷದ ವರೆಗೂ ಬಹಳ ಕಷ್ಟಪಟ್ಟೆ.
ಆದರೆ ಒಂದು ರಾತ್ರಿ ನಾನು ವಿಯೆತ್ನಾಂ ನ ನನ್ನ ಆಶ್ರಮದಲ್ಲಿ ಮಲಗಿದ್ದಾಗ ನನಗೊಂದು ಕನಸು ಬಿತ್ತು. ಕನಸಲ್ಲಿ ನನ್ನ ತಾಯಿ ಬಂದಿದ್ದಳು. ನಾನು ಅವಳೊಡನೆ ಅದ್ಭುತ ಮಾತುಕತೆಯಲ್ಲಿ ತೊಡಗಿದ್ದೆ. ಆಕೆ ಉದ್ದ ಕೂದಲಿನ ಸುಂದರ ಹರೆಯದ ಹೆಣ್ಣು ಮಗಳಂತೆ ಕಾಣುತ್ತಿದ್ದಳು. ಅವಳ ಜೊತೆಗಿನ ಮಾತುಕತೆ ತುಂಬ ಮಧುರವಾಗಿತ್ತು.
ನನಗೆ ನಿದ್ದೆಯಿಂದ ಎಚ್ಚರವಾದಾಗ ರಾತ್ರಿ ಎರಡು ಗಂಟೆಯಾಗಿತ್ತು, ನನ್ನೊಳಗೆ ನನ್ನ ತಾಯಿ ಸತ್ತೇ ಇಲ್ಲವೇನೋ ಎಂಬ ಭಾವ ಗಟ್ಟಿಯಾಗಿತ್ತು. ನನ್ನ ತಾಯಿ ಇನ್ನೂ ನನ್ನ ಜೊತೆ ಇದ್ದಾಳೆ ಎನ್ನುವ ಅನಿಸಿಕೆ ಸ್ಪಷ್ಟವಾಗಿತ್ತು. ನನ್ನ ತಾಯಿ ತೀರಿಕೊಂಡಿದ್ದಾಳೆ ಎನ್ನುವ ಐಡಿಯಾ ಕೇವಲ ಒಂದು ಐಡಿಯಾ ಎನ್ನುವುದು ನನಗೆ ಅರ್ಥವಾಗಿತ್ತು.
ನಾನು ಬಾಗಿಲು ತೆರೆದು ಹೊರಗೆ ಬಂದೆ. ಇಡೀ ಪರ್ವತ ಶ್ರೇಣಿ ಬೆಳದಿಂಗಳಿನಿಂದ ತೊಯ್ದು ಒದ್ದೆಯಾಗಿತ್ತು. ಅದು ಚಹಾ ತೋಟಗಳಿಂದ ಸುತ್ತುವರೆದಿದ್ದ ಬೆಟ್ಟವಾಗಿತ್ತು. ನನ್ನ ಗುಡಿಸಲನ್ನ ಅರ್ಧ ಬೆಟ್ಟದ ಮೇಲೆ ದೇವಸ್ಥಾನದ ಹಿಂದುಗಡೆ ಕಟ್ಟಿಕೊಂಡಿದ್ದೆ. ಚಹಾ ತೋಟದ ನಡುವೆ ಬೆಳದಿಂಗಳಲ್ಲಿ ಹೆಜ್ಜೆ ಹಾಕುತ್ತಿದ್ದಾಗ ನನ್ನ ತಾಯಿ ಇನ್ನೂ ನನ್ನ ಜೊತೆಯಿರುವುದನ್ನು ನಾನು ಗಮನಿಸಿದೆ. ಆ ಬೆಳದಿಂಗಳು ನನ್ನ ತಾಯಿ ಯಾವಾಗಲೂ ಮಾಡುತ್ತಿದ್ದ ಹಾಗೆ ನನ್ನನ್ನು ಮುದ್ದಿಸುತ್ತಿತ್ತು, ಹಿತವಾಗಿ, ಬಹಳ ಪ್ರೀತಿಯಿಂದ, ಅದ್ಭುತವಾಗಿ.
ಪ್ರತಿಬಾರಿ ನನ್ನ ಹೆಜ್ಜೆ ನೆಲವನ್ನು ಮುಟ್ಟಿದಾಗ ನನ್ನ ತಾಯಿ ನನ್ನ ಜೊತೆ ಇರುವುದು ನನಗೆ ಗೊತ್ತಾಗುತ್ತಿತ್ತು. ಈ ದೇಹ ನನ್ನದಲ್ಲ ನನ್ನ ತಾಯಿಯ ಮತ್ತು ತಂದೆಯ, ನನ್ನ ಅಜ್ಜ ಅಜ್ಜಿಯರ, ನನ್ನ ಮತ್ತಜ್ಜ ಮುತ್ತಜ್ಜಿಯರ ಜೀವಂತ ಮುಂದುವರಿಕೆ ಎನ್ನುವುದು ನನಗೆ ಅರ್ಥವಾಯಿತು. ನನ್ನ ಎಲ್ಲ ಪೂರ್ವಜರು ನನ್ನೊಳಗಿರುವುದು ನನಗೆ ಸ್ಪಷ್ಟವಾಯಿತು. ನಾನು ಯಾವುದನ್ನ ನನ್ನ ಹೆಜ್ಜೆ ಎಂದುಕೊಂಡಿದ್ದೆನೋ ಅದು ನಮ್ಮ ಹೆಜ್ಜೆ ಎನ್ನುವುದು ನನಗೆ ದಿಟವಾಯಿತು. ಆ ಒದ್ದೆ ಮಣ್ಣಿನಲ್ಲಿ ನಾನು ನನ್ನ ಅಮ್ಮನ ಜೊತೆಗೂಡಿ ಹೆಜ್ಜೆ ಮೂಡಿಸುತ್ತಿದ್ದೆ.
ಆ ಕ್ಷಣದ ನಂತರ ನನ್ನ ತಾಯಿ ನನ್ನ ಜೊತೆ ಇಲ್ಲ ಎನ್ನುವ ಭಾವ ಮರೆಯಾಗಿ ಹೋಯಿತು. ನನ್ನ ತಾಯಿ ನನ್ನ ಜೊತೆ ಯಾವಾಗಲೂ ಇದ್ದಾಳೆ ಎನ್ನುವುದನ್ನ ನೆನಪು ಮಾಡಲಿಕ್ಕೆ ನಾನು ಮಾಡಬೇಕಾದದ್ದು ಇಷ್ಟೆ, ನನ್ನ ಅಂಗೈಯನ್ನು ಬಿಚ್ಚಿ ನೋಡಿಕೊಂಡರೆ ಸಾಕು, ನನ್ನ ಮುಖದ ಮೇಲಿನ ತಂಗಾಳಿಯನ್ನು ಒಮ್ಮೆ ಫೀಲ್ ಮಾಡಿದರೆ ಸಾಕು, ನನ್ನ ಪಾದದ ಕೆಳಗಿನ ನೆಲದ ಸ್ಪರ್ಶವನ್ನು ಒಮ್ಮೆ ಅನುಭವಿಸಿದರೆ ಸಾಕು, ನನ್ನ ತಾಯಿಯ ಅನುಭವ ನನಗಾಗುತ್ತದೆ ಪ್ರತಿಬಾರಿ.

