ಶಾಂತಿಯನ್ನೂ ಸಮಾಧಾನವನ್ನೂ ಹುಡುಕಿಕೊಂಡು ನಾವು ದೂರ ದೂರದ ದೇವಾಲಯಗಳಿಗೆ ತೀರ್ಥಯಾತ್ರೆ ಹೋಗುತ್ತೇವೆ. ಆದರೆ ಕೊನೆಗೆ ನಮಗೆ ಗೊತ್ತಾಗುತ್ತದೆ ನಾವು ಹುಡುಕುತ್ತಿದ್ದ ಶಾಂತಿ ಸಮಾಧಾನ ಬೇರೇಲ್ಲೂ ಇಲ್ಲ, ಅದು ನಮ್ಮೊಳಗೇ ಇದೆ, ನಮ್ಮ ಹೃದಯದಲ್ಲಿಯೇ ಇದೆ ಎನ್ನುವದು! ಸಂಗ್ರಹಾನುವಾದ: ಚಿದಂಬರ ನರೇಂದ್ರ
ಕಾಫಿ ಶಾಪ್ ಮಾಲಿಕ ಇಡೀ ದಿನ ಬ್ಯುಸಿ ಆಗಿದ್ದ. ಅವತ್ತು ಶನಿವಾರವಾದ್ದರಿಂದ ಕಾಫಿ ಶಾಪ್ ತುಂಬಿ ಹೋಗಿತ್ತು. ಒಂದೇ ಸವನೇ ಗ್ರಾಹಕರು ಬರುತ್ತಿದ್ದರು.
ಪೂರ್ತಿ ದಿನ ತುದಿಗಾಲ ಮೇಲೆ ಓಡಾಡುತ್ತ ಕೆಲಸ ಮಾಡುತ್ತಿದ ಮಾಲಿಕನಿಗೆ ದಿನದ ಕೊನೆಗೆ ಸುಸ್ತಾಗಿ ತೀವ್ರವಾಗಿ ತಲೆ ಸಿಡಿಯಲಾರಂಭಿಸಿತು.
ಸಮಯ ಆದಂತೆಲ್ಲ ತಲೆ ನೋವು ಹೆಚ್ಚಾಗತೊಡಗಿತು.
ತಲೆನೋವು ಸಹಿಸಲಸಾಧ್ಯವಾದಾಗ ಮಾಲಿಕ, ಸೇಲ್ಸ್ ನೋಡಿಕೊಳ್ಳುವಂತೆ ತನ್ನ ಸಹಾಯಕಳಿಗೆ ಹೇಳಿ, ಕಾಫಿ ಶಾಪ್ ಬಿಟ್ಟು ಹೊರಬಂದ.
ಆಚೆ ರಸ್ತೆಯಲ್ಲಿದ್ದ ಫಾರ್ಮಸಿ ಗೆ ಬಂದು ಪೇನ್ ಕಿಲ್ಲರ ತೆಗೆದುಕೊಂಡ.
ಮಾತ್ರೆ ನುಂಗಿದ ಮೇಲೆ ಈಗ ಅವನಿಗೆ ಕೊಂಚ ನಿರಾಳ ಅನಿಸತೊಡಗಿತು. ಇನ್ನೂ ಸ್ವಲ್ಪ ಹೊತ್ತಿನಲ್ಲಿ ತಲೆನೋವು ಕಡಿಮೆಯಾಗುತ್ತದೆ ಎಂದು ಅವನಿಗೆ ಸಮಾಧಾನವಾಯಿತು.
ಕ್ಯಾಶ್ ಕೌಂಟರ್ ಲ್ಲಿ ಕೆಮಿಸ್ಟ್ ಇಲ್ಲದಿರುವುದನ್ನ ಗಮನಿಸಿ, ಸೇಲ್ಸ್ ಗರ್ಲ ನ ಪ್ರಶ್ನೆ ಮಾಡಿದ, “ ಎಲ್ಲಿ ನಿನ್ನ ಬಾಸ್ ಕಾಣ್ತಾ ಇಲ್ವಲ್ಲ?”
“ಅವರಿಗೆ ಸಿಕ್ಕಾಪಟ್ಟೆ ತಲೆನೋವು. ಒಂದು ಕಪ್ ಬಿಸಿ ಬಿಸಿ ಕಾಫೀ ಕುಡಿದರೆ ತಲೆ ನೋವು ವಾಸಿಯಾಗುತ್ತದೆ ಅಂತ ಅವರು ಈಗ ತಾನೇ ನಿಮ್ಮ ಕಾಫೀ ಶಾಪ್ ಗೆ ಹೋದರು”. ಸೇಲ್ಸ್ ಗರ್ಲ ಉತ್ತರಿಸಿದಳು.
ಹುಡುಗಿಯ ಮಾತು ಕೇಳಿ ಕಾಫಿ ಶಾಪ್ ಮಾಲಿಕನ ಬಾಯಿ ಒಣಗಿ ಹೋಯಿತು. “ಓಹ್ ಹೌದಾ!” ಎಂದು ಅವನು ಆಶ್ಚರ್ಯ ಚಕಿತನಾದ.
ಇದು, ನಮ್ಮಲ್ಲಿರುವುದನ್ನ ಬಿಟ್ಟು ಹೊರಗೆ ಪರಿಹಾರ ಹುಡುಕುವ ಟಿಪಿಕಲ್ ಕೇಸು.
ಎಷ್ಟು ವಿಚಿತ್ರ ಇದು ! ಆದರೆ ನಿಜ.
ಕೆಮಿಸ್ಟ್ ನ ತಲೆನೋವು ಕಡಿಮೆಯಾಗಲು ಬಿಸಿ ಕಾಫಿ ಬೇಕು ಆದರೆ, ಕಾಫಿ ಶಾಪ್ ಮಾಲಿಕನ ತಲೆನೋವು ಕಡಿಮೆಯಾಗಲು ಪೇನ್ ಕಿಲ್ಲರ್ ಮಾತ್ರೆ ಬೇಕು. ಎಷ್ಟು ವಿಚಿತ್ರ !
ಹೀಗೆಯೇ ಶಾಂತಿಯನ್ನೂ ಸಮಾಧಾನವನ್ನೂ ಹುಡುಕಿಕೊಂಡು ನಾವು ದೂರ ದೂರದ ದೇವಾಲಯಗಳಿಗೆ ತೀರ್ಥಯಾತ್ರೆ ಹೋಗುತ್ತೇವೆ.
ಆದರೆ ಕೊನೆಗೆ ನಮಗೆ ಗೊತ್ತಾಗುತ್ತದೆ ನಾವು ಹುಡುಕುತ್ತಿದ್ದ ಶಾಂತಿ ಸಮಾಧಾನ ಬೇರೇಲ್ಲೂ ಇಲ್ಲ, ಅದು ನಮ್ಮೊಳಗೇ ಇದೆ, ನಮ್ಮ ಹೃದಯದಲ್ಲಿಯೇ ಇದೆ ಎನ್ನುವುದು.
ಶಾಂತಿ ಸಮಾಧಾನ ಲಭ್ಯವಾಗೋದು, ನಾವು ತೃಪ್ತಿಯನ್ನು ಅನುಭವಿಸಿದಾಗ, ಮತ್ತು ನಮ್ಮ ಬಳಿ ಇರುವುದರ ಬಗ್ಗೆ ನಾವು ಕೃತಜ್ಞರಾದಾಗ.
ಬದುಕನ್ನ ಅನುಭವಿಸಲು ಶಾಂತಿಯುತವಾದ ಮಾರ್ಗವೊಂದಿದೆ. ಆದರೆ ಬದುಕಿನ ಕುರಿತ ನಮ್ಮ ಸಿನಿಕ ದೃಷ್ಚಿಕೋನವನ್ನ ನಾವು ಬದಲಾಯಿಸಿಕೊಳ್ಳಬೇಕಷ್ಟೇ.
ವಯಸ್ಸಾಗುತ್ತ ಹೋದಂತೆ ಒಂದು ನಿಜ ಮಾತ್ರ ನನಗೆ ಪಕ್ಕಾ ಆಗುತ್ತಿದೆ. ಬದುಕಿನ ಅಲ್ಟಿಮೇಟ್ ಐಷಾರಾಮಿ ಎಂದರೆ ಪೀಸ್ ಆಫ್ ಮೈಂಡ್.

