ಖ್ಯಾತ ಉರ್ದು ಕವಿ ಫೈಜ್ ಅಹಮದ್ ಫೈಜ್ ಅವರನ್ನು ಭೇಟಿಯಾದಾಗ ಶಬಾನಾ ಆಜ್ಮಿ ಎದುರಿಸಿದ ಮುಜುಗರದ ಸನ್ನಿವೇಶವನ್ನು ಅವರ ಮಾತುಗಳಲ್ಲೇ ಓದಿ! : ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಶಬಾನಾ ಮಾಸ್ಕೋ ಫಿಲ್ಮ್ ಫೆಸ್ಟಿವಲ್ ಸಮಯದಲ್ಲಿ ಶಾಯರ್ ಫೈಜ್ ಅವರನ್ನ ಭೇಟಿಯಾಗ್ತಾರೆ. ಫೈಜ್, ಶಬಾನಾ ತಂದೆ ಕೈಫಿಯ ಪರಮ ಮಿತ್ರ, ಶಬಾನಾ ನ್ನ ಎತ್ತಿ ಆಡಿಸಿದವರು. ಸಂಜೆ ಬಾ ಕೆಲ ಹೊಸ ಪದ್ಯ ಬರ್ದಿದೀನಿ ಓದುವಿಯಂತೆ ಅಂತ ಫೈಜ್, ಶಬಾನಾ ನ ಇನ್ವೈಟ್ ಮಾಡ್ತಾರೆ.
ಸಂಜೆ ಶಬಾನಾ ಫೈಜ್ ರ ರೂಮಿಗೆ ಹೋದಾಗ, ತಮ್ಮ ಹೊಸ ಪದ್ಯಗಳನ್ನ ಶಬಾನಾಗೆ ಕೊಟ್ಟು ಓದಲು ಹೇಳುತ್ತಾರೆ ಫೈಜ್. ಶಬಾನಾ ಗೆ ಗಾಬರಿ ಆ ಪದ್ಯಗಳೆಲ್ಲ ಉರ್ದು ಲಿಪಿಯಲ್ಲಿವೆ. ತುಂಬ ನಾಚಿಕೆಯಿಂದ ತನಗೆ ಉರ್ದು ಓದಲು ಬರುವದಿಲ್ಲ ಎಂದು ಶಬಾನಾ ನಿವೇದಿಸಿಕೊಂಡಾಗ ಫೈಜ್ ಗೆ ವಿಪರೀತ ಸಿಟ್ಟು.
ಆದರೆ ಫೈಜ್ ಸಾಬ್, ನನಗೆ ಉರ್ದು ಕಾವ್ಯ ಅರ್ಥ ಆಗತ್ತೆ, ಉರ್ದು ಲಿಪಿ ಗೊತ್ತಿಲ್ಲ ಅಷ್ಟೆ, ನಿಮ್ಮ ಕೆಲವು ಪದ್ಯ ನನಗೆ ಬಾಯಿಪಾಠ ಅಂತ ಶಬಾನಾ, ಫೈಜ್ ರನ್ನ ಸಮಾಧಾನ ಮಾಡಲಿಕ್ಕೆ ಪ್ರಯತ್ನ ಮಾಡಿದಾಗ, ಹಾಗಾದ್ರೆ ನನ್ನ ಪದ್ಯ ಹೇಳು ನೋಡೋಣ, ಫೈಜ್ ಸವಾಲು ಹಾಕುತ್ತಾರೆ. ಗಾಬರಿಯಲ್ಲಿ ಶಬಾನಾ ಬಾಯಿ ತುದಿಯಲ್ಲಿದ್ದ ಶೇರ್ ಒಂದನ್ನ ಹೇಳ್ತಾರೆ
ದೇಖ್ ತೋ ದಿಲ್ ಕೀ ಜಾನ್ ಸಾ ಉಠ್ತಾ ಹೈ
ಯೆಹ್ ಧುಆಂ ಕಹಾಂ ಸೇ ಉಠ್ತಾ ಹೈ …..
ಸಿಗರೇಟ್ ನ ಒಂದು ದಮ್ ದೀರ್ಘವಾಗಿ ಎಳೆದುಕೊಂಡು ಫೈಜ್ ಗಂಭೀರರಾಗಿ “ ಭಾಯಿ ಯೆಹ್ ತೋ ಮೀರ್ ಕಾ ಕಲಾಂ ಹೈ “
ಓ ಅದಲ್ಲ ಅದಲ್ಲ ಇದು ಅಂತ ಶಬಾನಾ ಮತ್ತೊಂದು ಪದ್ಯ ಹೇಳಲಿಕ್ಕೆ ಶುರು ಮಾಡ್ತಾರೆ,
ಬಾತ್ ಕರನೀ ಮುಝೇ ಮುಷ್ಕಿಲ್ ಕಭೀ ಐಸೀ ತೋ ನ ಥೀ……
ಸಿಗರೇಟ್ ಪಕ್ಕಕ್ಕಿಟ್ಟು ಫೈಜ್
“ ಭಾಯಿ ಮೀರ್ ಕೀ ಹದ್ ತಕ್ ತೋ ಠೀಕ್ ಹೈ, ಲೇಕಿನ್ ಮೈ ಬಹಾದ್ದೂರ್ ಶಾ ಜಫರ್ ಕೋ ಶಾಯರ್ ನಹೀ ಮಾನ್ತಾ “
ಶಬಾನಾ ತನ್ನ ಮೂರ್ಖತನಕ್ಕೆ ನಾಚಿ ಕೆಂಪಾಗಿ ರೂಂ ನಿಂದ ಹೊರಗೆ ಬರ್ತಿದ್ದ ಹಾಗೆಯೇ ಫೈಜ್ ರ ಪದ್ಯಗಳೆಲ್ಲ ನೆನಪಾಗಲಿಕ್ಕೆ ಶುರು ಆಗ್ತವೆ!!

