ತಮ್ಮ ಮತ್ತು ಕಿಶೋರ್ ಕುಮಾರ್ ಮದುವೆ ಪ್ರಸಂಗವನ್ನು ನಟಿ ಲೀನಾ ಚಂದಾವರಕರ್ ಹೀಗೆ ನೆನಪು ಮಾಡಿಕೊಳ್ಳುತ್ತಾರೆ… । ಚಿದಂಬರ ನರೇಂದ್ರ
ಒಂದು ದಿನ ಕಿಶೋರ್, ಮೆಹಬೂಬ್ ಸ್ಟುಡಿಯೋದಲ್ಲಿ ರಿಕಾರ್ಡಿಂಗ್ ಮುಗಿಸಿಕೊಂಡು ನೇರ ಕಾರ್ಟರ್ ರೋಡ್ ಲ್ಲಿದ್ದ ನನ್ನ ಮನೆಗೆ ಬಂದು ನನ್ನ ಕೇಳಿಕೊಂಡರು
“ ನೋಡು ಲೀನಾ, ತಂದೆ ತಾಯಿಯರ ಆಶೀರ್ವಾದ ಇಲ್ಲದೆ ನಾನು ಮೂರು ಮದುವೆ ಮಾಡಿಕೊಂಡೆ. ಮೂರು ಮದುವೆಗಳೂ ಮುರಿದು ಹೋದವು. ಈ ಸಲ ಹಾಗಾಗೋದು ಬೇಡ. ಈ ಸಲ ತಂದೆ ತಾಯಿಯರನ್ನು ಕೇಳಿ ಅವರ ಆಶೀರ್ವಾದ ತೆಗೆದುಕೊಂಡು ಮದುವೆಯಾಗೋಣ. ನಡಿ ಧಾರವಾಡಕ್ಕೆ ಹೋಗಿ ನಿನ್ನ ಅಪ್ಪ ಅಮ್ಮನ ಪರ್ಮಿಷನ್ ತೆಗೆದುಕೊಳ್ಳೋಣ”.
“ ಧಾರವಾಡಕ್ಕಾ ? ಬೇಡ ಬೇಡ ನನ್ನ ಅಪ್ಪ ಸಿಟ್ಟು ಮಾಡಿಕೊಂಡು ಬಿಡುತ್ತಾರೆ”. ನಾನು ಹಿಂಜರಿದೆ.
“ಯಾಕೆ ಹೆದರುತ್ತೀಯ? ಹೆಚ್ಚೆಂದರೆ ಏನು ಆಗಬಹುದು, ಧಾರವಾಡದಲ್ಲಿ ಮಾರಧಾಡ, ಅಷ್ಟೇ ತಾನೆ “ ಎನ್ನುತ್ತ ಕಿಶೋರ್ ನನ್ನನ್ನು ಹೊರಡಿಸಿಕೊಂಡು ಧಾರವಾಡದ ನನ್ನ ಮನೆಗೆ ಬಂದುಬಿಟ್ಟರು.
ಧಾರವಾಡದಲ್ಲಿ ನಮಗೆ ಯಾರೂ ಮನೆಯ ಬಾಗಿಲು ತೆರೆಯಲಿಲ್ಲ. ಆಗ ಕಿಶೋರ್ ಒಂದಾದಮೇಲೊಂದರಂತೆ ಆ ಕಾಲದ ಹಾಡುಗಳನ್ನು ಹಾಡತೊಡಗಿದರು ನಂತರ ಬಾಗಿಲು ತೆರೆದುಕೊಂಡಿತು. ಮನೆಯ ಸದಸ್ಯರು ಒಬ್ಬೊಬ್ಬರಾಗಿ ಹೊರಗೆ ಬರತೊಡಗಿದರು. ಆದರೆ ಒಂದು ರೂಮಿನ ಬಾಗಿಲು ಇನ್ನೂ ತೆರೆದಿರಲೇ ಇಲ್ಲ. ಅದು ನನ್ನ ಅಪ್ಪನ ರೂಮು.
ಕೊನೆಗೆ ಕಿಶೋರ್, ಅಪ್ಪನ ರೂಮಿನ ಎದುರಿಗೆ ನಿಂತು, “ನಫರತ್ ಕರನೇ ವಾಲೋಂ ಕೀ ಸೀನೆ ಮೇ ಪ್ಯಾರ ಭರದೂಂ, ಮೈ ವೋ ಪರವಾನಾ ಹೂಂ ಪತ್ಥರ ಕೋ ಮೋಮ ಕರದೂಂ”. ಹಾಡು ಹಾಡತೊಡಗಿದರು
ಆಗ ಅಪ್ಪನ ರೂಮಿನ ಬಾಗಿಲು ತೆರೆದುಕೊಂಡಿತು, ಹೊರಗೆ ಬಂದ ಅಪ್ಪ, ನಮ್ಮಿಬ್ಬರಿಗೂ ಆಶೀರ್ವಾದ ಮಾಡಿ ನಮ್ಮ ಮದುವೆಗೆ ಒಪ್ಪಿಗೆ ನೀಡಿದರು.

