ಹಾಗೆ ನೋಡಿದರೆ ಈ ಕತೆಗಳನ್ನು ಸಿಂಡರೆಲಾ ಕತೆ ಅನ್ನುವುದಕ್ಕಿಂತ ರೋಡೋಪಿಸಳ ಕತೆ ಅನ್ನುವುದೇ ಹೆಚ್ಚು ಸರಿ. ಚೀನಾ ಮತ್ತು ಪೂರ್ವ ಏಷ್ಯಾದಲ್ಲಿ ಈ ಕತೆಯ ಪಾಠಾಂತರಗಳು ಬರೆಯಲ್ಪಟ್ಟಿರೋದು 8ನೇ ಶತಮಾನದ ಆಸುಪಾಸಲ್ಲಿ. ಪಶ್ಚಿಮದಲ್ಲಿ ಈ ಕತೆ ಹೊಸ ಹುಟ್ಟು ಪಡೆಯತೊಡಗಿದ್ದು 12ನೇ ಶತಮಾನದ ನಂತರದಲ್ಲಿ… । ಚೇತನಾ ತೀರ್ಥಹಳ್ಳಿ
ಬಹುಶಃ ಸುಧಾ ಪತ್ರಿಕೆಯಲ್ಲಿ ಬಹಳ ಚಿಕ್ಕವಳಿದ್ದಾಗ ಓದಿದ್ದ ಒಂದು ಕತೆ; ‘ಸಿಂಡರೆಲಾಳ ಮದುವೆಯ ನಂತರ’. ಕತೆಯಲ್ಲಿ ಏನಿತ್ತು ಅನ್ನೋದು ನಯಾಪೈಸೆ ನೆನಪಿಲ್ಲವಾದರೂ “ಆಮೇಲೆ ಏನಾಗಿರಬಹುದು” ಅನ್ನುವ ನನ್ನ ನಿತ್ಯಕುತೂಹಲದ ಕಾರಣಕ್ಕೆ ಟೈಟಲ್ ಮನಸಲ್ಲಿ ಅಚ್ಚೊತ್ತಿ ಉಳಿದುಬಿಟ್ಟಿದೆ. ಆ ಕತೆ ಓದಿ ಕನಿಷ್ಠ ಮೂರು ದಶಕ ಕಳೆದಿರಬಹುದು… ಈಗಲೂ ಯಾವುದಾದರೂ ಕತೆ ಮುಗಿಯಿತು ಅನ್ನುವಾಗ ನಂತರದ್ದನ್ನು ಯಾರಾದರೂ ಬರೆದಿರಬಹುದೇ, ‘ಸಿಂಡರೆಲಾಳ ಮದುವೆಯ ನಂತರ’ದ ಹಾಗೆ? ಅನ್ನುವ ಯೋಚನೆ ಬರುವುದುಂಟು.
ಅದಕ್ಕೆ ಸರಿಯಾಗಿ ಮೊನ್ನೆ ಚೈನೀಸ್ ಕ್ಲಾಸಿನಲ್ಲಿ ಸಿಕ್ಕಿದ್ದು ಯೆ ಶಿಯಾನಳ ಕತೆ.
ಯೆ ಶಿಯಾನ್ ಚೀನಾ ದೇಶದ ಬಡ ಹುಡುಗಿಯೊಬ್ಬಳ ಕತೆ. ಅವಳ ಅಮ್ಮ ಸತ್ತು, ಅಪ್ಪ ಮತ್ತೊಂದು ಮದುವೆ ಮಾಡಿಕೊಂಡು, ಆ ಹುಡುಗಿ ಮಲತಾಯಿ, ಮಲತಂಗಿಯರ ಕಾಟಕ್ಕೆ ಸಿಕ್ಕು, ಅಪ್ಪನೂ ತೀರಿಕೊಂಡ ಮೇಲೆ ಆ ಕಾಟ ಹೆಚ್ಚಾಗಿ, ಆ ಹುಡುಗಿಯ ದುಃಖಕ್ಕೆ ‘ಕೋಯಿ ಮೀನು’ (ಅದೃಷ್ಟ ತರುವ ಮತ್ಸ್ಯ ದೇವತೆ) ನೆರವಾಗಿ…
ನೆರವಾದ ಆ ಮೀನನ್ನು ಮಲತಾಯಿ, ಮಲತಂಗಿಯರು ಕೊಂದು ತಿಂದು, ಯೆ ಶಿಯಾನ್ ಆ ಸತ್ತ ಮೀನಿನ ಮೂಳೆಗಳನ್ನು ತನ್ನ ಮಂಚದಡಿ ಹುಗಿದು…
ಆ ಮೀನಿನ ಬೋನು ಯೆ ಶಿಯಾನಳಿಗೆ ರಾಜಕುಮಾರನ ಸ್ವಯಂವರಕ್ಕೆ ಹೋಗಲು ಹೊಸ ಉಡುಗೆ ತೊಡುಗೆ, ಚಿನ್ನದ ಚಪ್ಪಲಿಯನ್ನೆಲ್ಲ ಕೊಟ್ಟು, ಆ ಚಿನ್ನದ ಚಪ್ಪಲಿಯಲ್ಲಿ ಒಂದು ಕಳೆದು ಹೋಗಿ…
ಆ ರಾಜಕುಮಾರ ತನಗೆ ಸಿಕ್ಕ ಚಿನ್ನದ ಚಪ್ಪಲಿಗೆ ಹೊಂದಿಕೆಯಾಗುವ ಪಾದದ ಹುಡುಕಾಟ ನಡೆಸಿ, ಅದಕ್ಕೆ ಯೆ ಶಿಯಾನಳ ಪಾದ ಸೆಟ್ ಆಗಿ, ಅವಳು ತೆಗೆದಿರಿಸಿದ್ದ ಇನ್ನೊಂದ್ ಚಿನ್ನದ ಚಪ್ಪಲಿ ತಂದು, ರಾಜನನ್ನು ಮದುವೆಯಾಗಿ…
ಈ ವರೆಗೆ ಫ್ರೆಂಚ್ ಭಾಷೆಯಲ್ಲಿ ಬರೆಯಲ್ಪಟ್ಟು, ಇಂಗ್ಲೀಶ್ ಅನುವಾದದಿಂದ ಜನಪ್ರಿಯಗೊಂಡ ಸಿಂಡರೆಲಾಳ ಕತೆಯ ಹಾಗೇ ಬಹುತೇಕ.
ಆಮೇಲೆ?
ಅದು ಮಾತ್ರ ಬೇರೆಯೇ ಲೋಕ!
ಮದುವೆಯಾದ ಮೇಲೆ ರಾಜಕುಮಾರನಿಗೆ ಯೆ ಶಿಯಾನ್ ತನಗೆ ಸಹಾಯ ಮಾಡಿದ ಫಿಶ್ ಬೋನಿನ ಕತೆ ಹೇಳ್ತಾಳೆ.
ಆ ರಾಜಕುಮಾರ ಲೋಭಿ. ಅಂವ ದಿನವೂ ಆ ಮೀನಿನ ಬೋನಿಗೆ ಹೇಳಿ ಚಿನ್ನ ತರಿಸಿಕೊಡು ಅಂತ ಜೀವ ತಿನ್ನತೊಡಗುತ್ತಾನೆ.
ಅದಕ್ಕೆ ಸರಿಯಾಗಿ ಯೆ ಶಿಯಾನಳ ಮಲತಾಯಿ, ಮಲತಂಗಿಯರೂ ಅರಮನೆ ಸೇರಿ ರಾಜಕುಮಾರನನ್ನು ಓಲೈಸಿ ಸ್ಥಾನ ಗಿಟ್ಟಿಸ್ತಾರೆ.
ಯೆ ಶಿಯಾನಳಿಗೆ ಇತ್ತ ಗಂಡನ ಕಾಟ, ಅತ್ತ ಮಲತಾಯಿ, ಸೋದರಿಯ ಕಾಟ.
ಕೊನೆಗೊಂದು ದಿನ ಸಿಟ್ಟುಬಂದು ಕೋಯಿ ಮೀನಿನ ಮೂಳೆಯನ್ನು ಅದರ ಅಷ್ಟೂ ಚಿನ್ನದ ಜೊತೆ ಸಮುದ್ರ ದಡದಲ್ಲಿ ಹುಗಿದು ಬಂದುಬಿಡ್ತಾಳೆ.
ಅದೇ ವೇಳೆಗೆ ರಾಜ್ಯದಲ್ಲಿ ದಂಗೆ ಶುರುವಾಗುತ್ತೆ. ಸೈನಿಕರನ್ನು ತನ್ನ ಪರ ಮಾಡಿಕೊಳ್ಳಲು ನಿರ್ಧರಿಸಿದ ರಾಜಕುಮಾರ, ಫಿಶ್ ಬೋನಿನ ಚಿನ್ನ ಕೊಡುವಂತೆ ಯೆ ಶಿಯಾನಳಿಗೆ ಕೇಳ್ತಾನೆ. ಅವಳು ಅದನ್ನು ಹುಗಿದುಬಂದ ವಿಷಯ ಬಾಯಿಬಿಡ್ತಾಳೆ.
ಬೆನ್ನುಬಿಡದ ರಾಜಕುಮಾರ ತನ್ನ ಸೈನಿಕರನ್ನು ಕಳಿಸಿ ಸಮುದ್ರದ ದಡ ಅಗೆಸ್ತಾನೆ.
ಅಲ್ಲಿ ನೋಡೋದೇನು? ಮೀನಿನ ಮೂಳೆ, ಅದರ ಚಿನ್ನ ಎಲ್ಲವನ್ನೂ ಅಲೆಗಳು ನುಂಗಿಹಾಕಿವೆ!
ರಾಜಕುಮಾರ ತನ್ನ ಲೋಭಕ್ಕೆ, ಅಧಿಕಾರದ ದುರಾಸೆಗೆ ನಾಚಿ ಅಲ್ಲೇ ಕುಸಿದು ಬೀಳ್ತಾನೆ.
ಯೆ ಶಿಯಾನ್ ಅರಮನೆ, ಸಂಸಾರ ತೊರೆದು ಹೊರಟು ನಿಲ್ತಾಳೆ.
ಚಿಕ್ಕವಳಿದ್ದಾಗ ಓದಿದ್ದ ಸಿಂಡರೆಲಾ ಕತೆಯಲ್ಲಿ ಏನಿತ್ತೋ ಗೊತ್ತಿಲ್ಲ. ಸಿಂಡರೆಲಾಳ ಕತೆಯ ಮೂಲ – ಮೊಟ್ಟಮೊದಲ ರೂಪ ಒಂದನೇ ಶತಮಾನದಲ್ಲಿ ಈಜಿಪ್ಟಿನ ಲಾವಣಿ ಹಾಡಾಗಿದ್ದ ರೋಡೋಪಿಸಳ ಕತೆಯೂ ಗುಲಾಮ ಹುಡುಗಿ ಚಪ್ಪಲಿ ಮ್ಯಾಚ್ ಆಗಿ ರಾಜನನ್ನ ಮದುವೆಯಾದ ಕತೆಯಷ್ಟೇ ಆಗಿತ್ತು. ಮತ್ತಷ್ಟು ಹುಡುಕಿದಾಗ ಸಿಕ್ಕ ಪರ್ಶಿಯಾದ ಮಾಹ್ ಮಿಶೂನಿಯ ಕತೆಯೂ ಹಾಗೇ. ಆದರೆ ಅದು ಫ್ರೆಂಚ್, ಇಂಗ್ಲೀಶ್ ಕತೆಗಳಿಗಿಂತ ವಿವರಗಳಲ್ಲಿ ಹೆಚ್ಚು ರೋಚಕ, ಸುಂದರ.
ಏಷ್ಯಾದ ಸಿಂಡರೆಲಾ ಕತೆಗಳಲ್ಲಿ ವಿಯೆಟ್ನಾಮಿನ ಟಾಮ್ – ಚಾಮ್ ಕತೆ, ಕೊರಿಯಾದ ಕತೆಗಳು ಯೆ ಶಿಯಾನಳ ಕತೆಯಂತಿಲ್ಲ. ಅಲ್ಲಿ ಮದುವೆಯ ನಂತರ ಅವಳು ಮಲತಾಯಿ ಕೊಡುವ ಮತ್ತಷ್ಟು ಕಷ್ಟಗಳನ್ನು ಹಾದು, ರೂಪಾಂತರಗಳನ್ನು ಧರಿಸಿ, ಸತ್ತು – ಹುಟ್ಟಿ – ಸತ್ತು – ಹುಟ್ಟಿ ಮರಳಿ ರಾಜಕುಮಾರನನ್ನು ಸೇರಿ ಮಲತಾಯಿ, ಸೋದರಿಯ ಮೇಲೆ ಸೇಡು ತೀರಿಸಿಕೊಳ್ಳುವ ಕತೆಯಿದೆ. ಮತ್ತು ಈ ಸೇಡು ತೀರಿಸಿಕೊಳ್ಳುವ ಬಗೆ ಭಯಾನಕವಾಗಿದೆ!
ಹಾಗೆ ನೋಡಿದರೆ ಈ ಕತೆಗಳನ್ನು ಸಿಂಡರೆಲಾ ಕತೆ ಅನ್ನುವುದಕ್ಕಿಂತ ರೋಡೋಪಿಸಳ ಕತೆ ಅನ್ನುವುದೇ ಹೆಚ್ಚು ಸರಿ. ಚೀನಾ ಮತ್ತು ಪೂರ್ವ ಏಷ್ಯಾದಲ್ಲಿ ಈ ಕತೆಯ ಪಾಠಾಂತರಗಳು ಬರೆಯಲ್ಪಟ್ಟಿರೋದು 8ನೇ ಶತಮಾನದ ಆಸುಪಾಸಲ್ಲಿ. ಪಶ್ಚಿಮದಲ್ಲಿ ಈ ಕತೆ ಹೊಸ ಹುಟ್ಟು ಪಡೆಯತೊಡಗಿದ್ದು 12ನೇ ಶತಮಾನದ ನಂತರದಲ್ಲಿ.
ಅದೇನೇ ಇರಲಿ, ಇಷ್ಟು ವರ್ಶನ್’ಗಳಲ್ಲಿ ನನಗೆ ಇಷ್ಟವಾಗಿದ್ದು, ಅರಮನೆಯನ್ನೂ ತೊರೆದು ಹೊರಡುವ ಯೆ ಶಿಯಾನಳ ಕತೆ.
ನನ್ನ ಪ್ರಕಾರ ಕತೆ ಮುಗಿಯುವುದು
ಮಿಲನದಲ್ಲಿ ಅಲ್ಲ,
ವಿದಾಯದಲ್ಲಿ.

