ಮೆಡಿಟೇಟಿವ್ ಮನುಷ್ಯ ಮಾತ್ರ ಅನ್ ಪ್ರೆಡಿಕ್ಟೇಬಲ್ ; ಇತರರಿಗೆ ಮಾತ್ರ ಅಲ್ಲ ಸ್ವತಃ ತನಗೆ ಕೂಡ ಅವನು ಅನ್ ಪ್ರೆಡಿಕ್ಟೇಬಲ್… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜನ ಸಣ್ಣ ಸಣ್ಣ ಬದುಕುಗಳನ್ನ ಬದುಕುತ್ತಾರೆ, ಬಹಳ ಸಾಧಾರಣ ಬದುಕನ್ನ, ಯಾವುದೇ ಮಹತ್ವ ಇಲ್ಲದ ಬದುಕನ್ನ, ಯಾವ ಖುಶಿ, ಯಾವ ಬೆರಗುಗಳಿಲ್ಲದ ಬದುಕನ್ನ ಬದುಕುತ್ತಾರೆ. ಜನ ಹುಟ್ಟಿನಿಂದ ಸಾವಿನ ತನಕ ಮತ್ತೆ ಅದೇ ಅದೇ ಮಾಡುತ್ತ ಪುನರಾವರ್ತನೆಯ ವೃತ್ತಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇದು ಬದುಕುವ ಸರಿಯಾದ ರೀತಿ ಅಲ್ಲ. ಇದು ನಿಧಾನವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೀತಿ.
ಬದುಕುವ ಸರಿಯಾದ ರೀತಿ ಎಂದರೆ, ಅಪಾಯಕರ ರೀತಿಯಲ್ಲಿ ಬದುಕುವುದು, Live Dangerously. ಸದಾ ಅನ್ವೇಷಣೆ ಮಾಡುತ್ತ, ಸದಾ ನಕ್ಷತ್ರಗಳಿಗೆ ಕೈ ಚಾಚುತ್ತ. ಆಗ ಬದುಕು ಧ್ಯಾನಮಯವಾಗುತ್ತದೆ (meditative). ಏಕೆಂದರೆ ಆಗ ನಾವು ಪ್ರತಿಕ್ಷಣ ಬೆರಗನ್ನು ಎದುರುಗೊಳ್ಳುತ್ತಿರುತ್ತೇವೆ, ಮತ್ತು ಪ್ರತಿ ಗಳಿಗೆ ಎಷ್ಟು ಹೊಸದಾಗಿರುತ್ತದೆ ಎಂದರೆ, ಅಲ್ಲಿ ನಿಮಗೆ ಆಲೋಚನೆಗೆ ಅವಕಾಶವೇ ಇರುವುದಿಲ್ಲ, ನೀವು ಅದನ್ನು ಬದುಕಬೇಕಷ್ಚೇ, ಎದುರಿಸಬೇಕಷ್ಟೇ.
ಪುನರಾವರ್ತನೆಯ (repetitive) ಮನುಷ್ಯ ತನ್ನ ಬದುಕಿನ ಬಗ್ಗೆ ಆಲೋಚನೆ ಮಾಡಬಲ್ಲ, ತನ್ನ ಬದುಕನ್ನ ಪ್ಲಾನ್ ಮಾಡಬಲ್ಲ, ಏಕೆಂದರೆ ಅವನು ಪ್ರೆಡಿಕ್ಟೇಬಲ್. ಅವನು ನಾಳೆ ಏನು ಮಾಡುತ್ತಾನೆ, ನಾಡಿದ್ದು ಏನು ಮಾಡುತ್ತಾನೆ ಎನ್ನುವುದನ್ನ ಮೊದಲೇ ಊಹೆ ಮಾಡಬಹುದು.
ಆದರೆ ಮೆಡಿಟೇಟಿವ್ ಮನುಷ್ಯ ಮಾತ್ರ ಅನ್ ಪ್ರೆಡಿಕ್ಟೇಬಲ್ ; ಇತರರಿಗೆ ಮಾತ್ರ ಅಲ್ಲ ಸ್ವತಃ ತನಗೆ ಕೂಡ ಅವನು ಅನ್ ಪ್ರೆಡಿಕ್ಟೇಬಲ್. ಅವನಿಗೆ ಮುಂದಿನ ಕ್ಷಣದಲ್ಲಿ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಹಾಗಾಗಿ, ಅದರ ಕುರಿತಾಗಿ ಪ್ಲಾನ್ ಮಾಡುವ, ಥಿಂಕ್ ಮಾಡುವ ಪ್ರಶ್ನೆಯೇ ಇಲ್ಲ. ಅವನು ಮುಕ್ತವಾದ ಬದುಕು ಬದುಕುತ್ತಾನೆ, ಅವನು ಪ್ರತಿ ಕ್ಷಣವನ್ನು ಹೊಸದಾಗಿ ಸ್ವಾಗತಿಸುತ್ತ ಬದುಕನ್ನು ಎದುರುಗೊಳ್ಳುತ್ತಾನೆ. ಮತ್ತು ಇಂಥ ಸ್ವಾಗತಿಸುವ ಹೃದಯದಿಂದಾಗಿ ಅವನು, ನಿಧಾನವಾಗಿ ನಾವು ಯಾವುದನ್ನ ಸತ್ಯ, ದೇವರು, ನಿರ್ವಾಣ ಎಂದು ಗುರುತಿಸುತ್ತೇವೆಯೋ ಅದರ ಬಗ್ಗೆ ಅರಿವು ಹೊಂದುತ್ತಾನೆ.
ಒಂದು ಝೆನ್ ಆಶ್ರಮದಲ್ಲಿ, ಶಿಷ್ಯರಿಗೆಲ್ಲ ಅಲ್ಲಿದ್ದ ಒಬ್ಬ ವೃದ್ಧ ಸನ್ಯಾಸಿಯ ಬಗ್ಗೆ ಅಪಾರ ಕುತೂಹಲ. ಆ ವೃದ್ಧ, ಯಾವುದಕ್ಕೂ ಪ್ರತಿಕ್ರಯಿಸುತ್ತಿರಲಿಲ್ಲ, ಯಾವುದರ ಬಗ್ಗೆಯೂ ಚಿಂತೆ ಮಾಡುತ್ತಿರಲಿಲ್ಲ.
ಶಿಷ್ಯರಿಗೆ ಸನ್ಯಾಸಿಯ ಈ ವರ್ತನೆ, ಅಸಹಜ ಅನಿಸಿತ್ತು, ಅವನನ್ನು ಕಂಡು ಅವರಿಗೆ ಒಮ್ಮೊಮ್ಮೆ ಹೆದರಿಕೆಯಾಗುತ್ತಿತ್ತು.
ಒಂದು ದಿನ ಎಲ್ಲ ಶಿಷ್ಯರು ಸೇರಿ ಆ ಸನ್ಯಾಸಿಯನ್ನು ಪರೀಕ್ಷೆ ಮಾಡಬೇಕೆಂದು ನಿರ್ಧರಿಸಿದರು. ಒಂದು ಕತ್ತಲ ದಾರಿಯ ತಿರುವಿನಲ್ಲಿ ಅಡಗಿಕೊಂಡು ಆ ಸನ್ಯಾಸಿ ಬರುವುದನ್ನೇ ಕಾಯತೊಡಗಿದರು. ಸನ್ಯಾಸಿ ಬಿಸಿ ಚಹಾದ ಬಟ್ಟಲು ಹಿಡಿದುಕೊಂಡು ಅದೇ ದಾರಿಯಲ್ಲಿ ಬಂದ. ಅವ ಹತ್ತಿರ ಬರುತ್ತಿದ್ದಂತೆಯೇ ಶಿಷ್ಯರೆಲ್ಲ ದೊಡ್ಡ ಶಬ್ದ ಮಾಡಿ ಸನ್ಯಾಸಿಯನ್ನು ಹೆದರಿಸಲು ಪ್ರಯತ್ನಿಸಿದರು. ಅಚಾನಕ್ ಆಗಿ ಆದ ಈ ಗದ್ದಲಕ್ಕೆ ಸನ್ಯಾಸಿ ಪ್ರತಿಕ್ರಯಿಸಲೇ ಇಲ್ಲ. ಸುಮ್ಮನೇ ಎರಡು ಫರ್ಲಾಂಗ್ ಮುಂದೆ ನಡೆದು ಹೋಗಿ ಅಲ್ಲಿದ್ದ ಟೇಬಲ್ ಮೇಲೆ ಚಹಾದ ಕಪ್ ಇಟ್ಟು, ಗೋಡೆಗೆ ಬೆನ್ನು ಹಚ್ಚಿ ಜೋರಾಗಿ ಹೋ ಎಂದು ಕಿರಚಿಕೊಂಡ. ಅವನ ಮುಖದಲ್ಲಿ ಹೆದರಿಕೆ ಎದ್ದು ಕಾಣುತ್ತಿತ್ತು.
ಶಿಷ್ಯರು, ಸನ್ಯಾಸಿಯ ಈ ವರ್ತನೆ ಕಂಡು ಬೆಕ್ಕಸ ಬೆರಗಾದರು.
óshó / First In the Morning / Day:207

