ಗಂಡ – ಹೆಂಡತಿ ಜೀವನ ಸಂಗಾತಿಗಳು, ಜೀವಮಾನದ ಗೆಳೆಯರು ಅನ್ನೋದು ಜಾವೇದ್ ಅಖ್ತರ್ ನಂಬಿಕೆ. ಅವರು ಈ ನಂಬಿಕೆಯನ್ನೇ ಬದುಕುತ್ತಿದ್ದಾರೆ ಕೂಡ…
ಶಬಾನಾ
ವೋ ಉಸ್ ಜಮಾನೇ ಕಿ ಔರತ್ ಹೈ
ಜಿಸ್ ಜಮಾನೆ ಮೆ ಮೈ ರೆಹತಾ ಹೂಂ.
ಪ್ರತಿದಿನದ ಅವಾಂತರಗಳು,
ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವುದು,
ಅಲ್ಲಿ ಇಲ್ಲಿ ಹೆಣಗಾಟ,
ಅವರಿವರನ್ನು ಭೇಟಿ ಮಾಡುವುದು,
ನಮ್ಮ ಎಲ್ಲ ಕ್ಷಣಗಳೂ
ರೇಲ್ವೆ ಪ್ಲಾಟಫಾರ್ಮ್ ಮೇಲೆ
ಟ್ರೇನು ಹೊರಡುತ್ತಿದ್ದಂತೆಯೇ
ಉಸಿರು ಬಿಗಿ ಹಿಡಿದು
ತಮ್ಮ ತಮ್ಮ ಬೋಗಿಗಳನ್ನು
ಗಡಿಬಿಡಿಯಿಂದ ಹುಡುಕುತ್ತಿರುವ
ಯಾತ್ರಿಕರಂತೆ ಕಾಣಿಸುತ್ತವೆ ನನಗೆ.
ನನಗೆ ನಿನ್ನನ್ನೂ, ನಿನಗೆ ನನ್ನನ್ನೂ
ನೋಡಬೇಕೆಂದು ಅನಿಸುವಷ್ಟು ಸಮಯವೂ
ನಮ್ಮ ಬಳಿ ಇಲ್ಲವಲ್ಲ ಎಂದು
ಒಮ್ಮೊಮ್ಮೆ ದಿಗಿಲಾಗುತ್ತದೆ ನನಗೆ.
ಆದರೆ ಈ ನಿರ್ದಯಿ ಜಗತ್ತು
ನನ್ನ ಮನ ಮುರಿದಾಗ,
ಯಾವದೋ ಒಂದು ಭರವಸೆ
ಹೋಗ ಹೋಗುತ್ತಾ ದಿಕ್ಕು ಬದಲಿಸಿದಾಗ,
ಎದೆಯಲ್ಲೊಂದು ಖುಶಿಯ ಹೂವು ಅರಳಿದಾಗ,
ನನ್ನ ಅರಿವು
ನನಗೊಂದು ಕನಸ ವರ ನೀಡಿದಾಗ,
ಆಸೆಯೊಂದು ಹಣ್ಣಾಗಿ ಎದೆ ಹಗುರವಾದಾಗ
ನೀನು ಬೇಕಾಗುತ್ತೀ ನನಗೆ.
ಸಂತೋಷ, ದುಃಖ, ಗೊಂದಲ, ಭಾವುಕತೆ
ಒಂದೊಂದೂ ಮಗ್ಗಲು ಬದಲಿಸಿದಾಗ ಒಮ್ಮೆ,
ಇಡೀ ಜಗತ್ತು ನನ್ನ ಬಿಟ್ಟು
ಮುಂದೆ ಹೋದಾಗ ಒಂದು ಕ್ಷಣ,
ಈ ಬದುಕಿನ ಸೂತ್ರದ ದಾರ
ತುಂಡು ತುಂಡಾದ ಘಳಿಗೆಯಲ್ಲೊಮ್ಮೆ,
ನಿನ್ನ ಕೈ ಹಿಡಿಯಬೇಕನ್ನಿಸುತ್ತದೆ ನನಗೆ.
ಆದರೆ ಇದು
ನನ್ನ ಬದುಕಿನ ಒಂದು ಸುಂದರ ಸತ್ಯ
ದಾರಿಯಲ್ಲಿ ಇಂಥಹ
ತಿರುವುಗಳು ಎದುರಾದಾಗಲೆಲ್ಲ
ಪ್ರತೀ ತಿರುವಿನಲ್ಲಿಯೂ
ನನ್ನ ಜೊತೆ ನೋಡಿದ್ದೇನೆ ನಾನು
ನಿನ್ನ.
- ಜಾವೇದ್ ಅಖ್ತರ್ (ಹೆಂಡತಿ ಶಬಾನಾ ಆಜ್ಮಿ ಕುರಿತು ಬರೆದ ಪದ್ಯ)

