ಯೋಧನಿಗೆ ಅಚ್ಚರಿ. ಅಲಿ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿದ್ದೇಕೆ? ತನ್ನನ್ನು ಕೊಲ್ಲದೆ ಬಿಟ್ಟಿದ್ದೇನೆ? ಉತ್ತರ ತಿಳಿಯಲೇಬೇಕು ಅನಿಸಿತು. ರಣಾಂಗಣದಿಂದ ಹೊರಡುತ್ತಿದ್ದ ಅಲಿಯನ್ನು ಕೂಗಿದ… । ಜಲಾಲುದ್ದೀನ್ ರೂಮಿ (ಮಸ್ನವಿ); ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಅದಿನ್ನೂ ಅರಬ್ ಭೂಮಿಯಲ್ಲಿ ಇಸ್ಲಾಂ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ. ಹೊಸತಾಗಿ ಮುಸ್ಲಿಮರಾದವರು ಉಳಿದವರನ್ನೂ ಸತ್ಯವಿಶ್ವಾಸಿಗಳನ್ನಾಗಿ ಮಾಡಲು ಖಡ್ಗ ಹಿಡಿದಿದ್ದರು. ಭೂಮಿಯ ಉದ್ದಗಲ ಯುದ್ಧ ಮಾಡುತ್ತಾ, ಗೆದ್ದ ನೆಲದಲ್ಲೆಲ್ಲ ಇಸ್ಲಾಂ ಸ್ಥಾಪನೆ ಮಾಡುತ್ತಾ ಅಲ್ಲಾಹನ ರಾಜ್ಯ ವಿಸ್ತರಣೆ ಮಾಡುತ್ತಿದ್ದರು. ಅಂಥವರಲ್ಲಿ ಪ್ರವಾದಿ ಮಹಮ್ಮದರ ಅಳಿಯ ಇಮಾಮ್ ಅಲಿಯೂ ಒಬ್ಬ.
ಅಲಿ ಒಬ್ಬ ಧೀರ ಯೋಧ. ಖಡ್ಗ ಹಿಡಿದು ಕಣಕ್ಕೆ ಇಳಿದನೆಂದರೆ ಅವನ ಮುಂದೆ ಯಾರೂ ಉಳಿಯಿತ್ತಿರಲಿಲ್ಲ. ಅಲಿಯ ಶೌರ್ಯದ ಮುಂದೆ ಎಂತೆಂಥಾ ಸಾಮ್ರಾಜ್ಯದ ದೊರೆಗಳೂ ಮಂಡಿಯೂರಿದ್ದರು. ಅಂಥಾ ಅಲಿಗೆ ಒಮ್ಮೆ ಧೈರ್ಯ – ಸ್ವಾಭಿಮಾನಗಳ ಪ್ರತೀಕದಂತಿದ್ದ ಯೋಧನೊಬ್ಬ ಎದುರಾದ. ಅವರಿಬ್ಬರಿಗೂ ಘನಘೋರ ಯುದ್ಧವೇ ನಡೆದುಹೋಯ್ತು. ಆ ಮತ್ತೊಬ್ಬ ಯೋಧ ಎಷ್ಟೇ ಅವುಡುಗಚ್ಚಿ ಕಾದಿದರೂ ಅಲಿಯದೇ ಮೇಲುಗೈಯಾಯ್ತು.
ಸೋತವರಿಗೆ ಯಾವತ್ತೂ ಸಾವೇ ಶಿಕ್ಷೆ. ಅದರಲ್ಲೂ ಈ ಧರ್ಮಯೋಧರು ತಮ್ಮ ನಂಬಿಕೆಯಲ್ಲಿ ನಂಬಿಕೆ ಇಡದವರನ್ನು ಉಳಿಸುತ್ತಲೇ ಇರಲಿಲ್ಲ.
ಸೋತ ಧೀರ ಮಂಡಿಯೂರಿ ತನ್ನ ತಲೆ ಕತ್ತರಿಸುವ ಖಡ್ಗದ ಏಟಿಗಾಗಿ ಕಾಯುತ್ತ ಕುಳಿತ. ಇನ್ನೇನು ಅಲಿ ತನ್ನ ಒರೆಯಿಂದ ಖಡ್ಗ ಸೆಳೆದು ಮೇಲೆತ್ತಬೇಕು, ಯೋಧ, ಹೇಗಿದ್ದರೂ ಸಾಯೋದು ಖಾತ್ರಿ; ಕೊನೆಯ ಸಲವೊಮ್ಮೆ ಪ್ರತಿರೋಧ ತೋರಿಯೇಬಿಡೋಣ ಅಂದುಕೊಂಡು ತಲೆ ಎತ್ತಿ ಅಲಿಯ ಮುಖಕ್ಕೆ ಉಗುಳಿದ.
ಇನ್ನೇನು ಖಡ್ಗ ಅವನ ಕತ್ತು ಸೋಕಬೇಕು, ಅಲಿ ತದೆದು ನಿಂತ. ಹಿಡಿದ ಖಡ್ಗ ನೆಲಕ್ಕೆ ಬಿಸಾಡಿ ಅಲ್ಲಿಂದ ಹೆಜ್ಜೆ ತಿರುಗಿಸಿದ.
ಯೋಧನಿಗೆ ಅಚ್ಚರಿ. ಅಲಿ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿದ್ದೇಕೆ? ತನ್ನನ್ನು ಕೊಲ್ಲದೆ ಬಿಟ್ಟಿದ್ದೇನೆ? ಉತ್ತರ ತಿಳಿಯಲೇಬೇಕು ಅನಿಸಿತು. ರಣಾಂಗಣದಿಂದ ಹೊರಡುತ್ತಿದ್ದ ಅಲಿಯನ್ನು ಕೂಗಿದ. “ನನ್ನನ್ನು ಕೊಲ್ಲದೆ ಬಿಟ್ಟ ಕಾರಣ ಹೇಳಿ ಹೋಗು ಅಲಿ! ನಾನು ನಿನ್ನ ಸತ್ಯವಿಶ್ವಾಸದಲ್ಲಿ ನಂಬಿಕೆ ಇಡಲಿಲ್ಲ. ನಿನ್ನ ಮತಕ್ಕೆ ಬರಲು ಒಪ್ಪಲಿಲ್ಲ. ಸಾಲದ್ದಕ್ಕೆ ನಿನ್ನ ಮುಖಕ್ಕೆ ಉಗಿದೆ. ಆದರೂ ನನಗ್ಯಾಕೆ ಕ್ಷಮಾದಾನ ಕೊಟ್ಟೆ?”
ಅಲಿ ನಿಂತ. ಹಿಂದೆ ತಿರುಗಿ ಯೋಧನನ್ನೊಮ್ಮೆ ದಿಟ್ಟಿಸಿದ.
“ಹೌದು, ನೀನು ಉಗಿದು. ಉಗಿಯದೆ ಇದ್ದರೆ ನಿನ್ನನ್ನು ಕೊಂದೇಬಿಡುತ್ತಿದ್ದೆ! ನಾನು ಕೊಲ್ಲುವುದು ನನ್ನ ನಂಬಿಕೆಗಾಗಿ, ಧರ್ಮ ಸ್ಥಾಪನೆಗಾಗಿ ಮತ್ತು ಸತ್ಯದ ಮೇಲಿನ ವಿಶ್ವಾಸಕ್ಕಾಗಿಯೇ ಹೊರತು ನನ್ನ ಅಹಂಕಾರ ತಣಿಸಿಕೊಳ್ಳಲಿಕ್ಕಾಗಿ ಅಲ್ಲ. ನೀನು ನನ್ನ ಮುಖಕ್ಕೆ ಉಗಿದಾಗ ಒಂದು ಕ್ಷಣ ನನ್ನ ಸಿಟ್ಟು ನೆತ್ತಿಗೇರಿತ್ತು. ಆಗೇನಾದರೂ ನಾನು ಖಡ್ಗ ಬೀಸಿದ್ದರೆ, ನಾನು ನನ್ನ ಸಿಟ್ಟಿನ ಕಾರಣದಿಂದ, ನನ್ನ ಪ್ರತೀಕಾರಕ್ಕಾಗಿ ನಿನ್ನನ್ನು ಕೊಂದಹಾಗೆ ಆಗುತ್ತಿತ್ತು. ಅದು ನನಗೆ ಬೇಕಿಲ್ಲ. ನಾನು ಯುದ್ಧ ಮಾಡುವುದು ದೇವರಿಗಾಗಿ. ನೀನು ಉಗಿದ ನಂತರ ಒಂದು ಕ್ಷಣ ನಾನು ಅರ್ಧ ದೇವರಿಗಾಗಿ, ಅರ್ಧ ನನ್ನ ಸೇಡಿಗಾಗಿ ಖಡ್ಗ ಹಿಡಿದು ನಿಂತಿದ್ದೆ. ಅದು ಅರಿವಾದ ಕೂಡಲೇ ಖಡ್ಗವನ್ನು ನೆಲಕ್ಕೆಸೆದುಬಿಟ್ಟೆ”
ಇಮಾಮ್ ಅಲಿಯ ಮಾತಿಗೆ ಯೋಧ ತಲೆದೂಗಿದ. ಅಲಿ ಮತ್ತೆ ಹಿಂತಿರುಗಿ ನೋಡದೆ ಅಲ್ಲಿಂದ ಹೊರಟುಹೋದ.

