ಸಂಬಂಧಗಳಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವುದು ಬಹಳ ಕಠಿಣ. ಆದರೆ ಸವಾಲು ಇರುವುದೇ ಇಲ್ಲಿ. ನೀವು ಈ ಸವಾಲಿನಿಂದ ತಪ್ಪಿಸಿಕೊಳ್ಳುವಿರಾದರೆ ಪ್ರಬುದ್ಧತೆಯನ್ನು ಸಾಧಿಸುವ ಒಂದು ಒಳ್ಳೆಯ ಅವಕಾಶದಿಂದ ತಪ್ಪಿಸಿಕೊಳ್ಳುವಿರಿ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬುದ್ಧಿ ಮತ್ತು ಪ್ರೇಮದ ಸಂಯೋಜನೆ
ಬೇರೆ ಬೇರೆ ಧಾತುಗಳಿಂದ .
ಬುದ್ಧಿ ಜನರ ನಡುವೆ ಗಂಟು ಹಾಕುತ್ತದೆ
ಆದರೆ ಯಾವ ಅಪಾಯಕ್ಕೂ ತೆರೆದುಕೊಳ್ಳದಂತೆ.
ಆದರೆ ಪ್ರೇಮ ಹಾಗಲ್ಲ
ಅದು ಬಿಚ್ಚುತ್ತದೆ ಸಂಬಂಧಗಳಲ್ಲಿನ ಸಿಕ್ಕುಗಳನ್ನ
ಎಲ್ಲ ಅಪಾಯಗಳನ್ನೂ ಆಹ್ವಾನಿಸುತ್ತ.
ಬುದ್ಧಿಯದು
ಯಾವಾಗಲೂ ಜಾಗರೂಕತೆಯ ಸ್ವಭಾವ
ಸಲಹೆ ನೀಡುವ ಹುಕಿ
ಉನ್ಮತ್ತ ಆನಂದದ ಬಗ್ಗೆ ಸದಾ ಹಿಂಜರಿಕೆ.
ಆದರೆ ಪ್ರೇಮಕ್ಕೆ ಅಪಾರ ಉತ್ಸಾಹ
ಅಪಾಯಗಳಿಗೆ ಎದೆಯೊಡ್ಡುವ ಹುರುಪು
ಬೆಂಕಿಯಲ್ಲಿ ಹಾರಿ ಬಂಗಾರವಾಗುವ ಉತ್ಕಟತೆ.
ಬುದ್ಧಿಯನ್ನು ಒಡೆಯುವುದು ಕಠಿಣ
ಆದರೆ ಪ್ರೇಮ ನಿರಾಯಾಸವಾಗಿ
ತನ್ನನ್ನು ತಾನು ಒಡೆದುಕೊಂಡು
ಅವಶೇಷವಾಗಬಲ್ಲದು.
ನಿಮಗೆ ಗೊತ್ತಿದೆ
ನಿಧಿ ಅಡಗಿರುವುದೆ ಅವಶೇಷಗಳಡಿಯಲ್ಲಿ
ಒಡೆದ ಹೃದಯ
ತನ್ನೊಳಗೆ ಬಚ್ಚಿಟ್ಟುಕೊಂಡಿದೆ
ಅಪಾರ ಸಂಪತ್ತು.
~ ಶಮ್ಸ್ ತಬ್ರೀಝಿ
ಈ ಜಗತ್ತಿನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಖುಶಿಯಿಂದ ಬದುಕುವುದು ಬಹು ದೊಡ್ಡ ಸವಾಲಿನ ವಿಷಯ. ಒಬ್ಬರೇ ಪ್ರಶಾಂತವಾಗಿ ಬದುಕಿಬಿಡಬಹುದು ಆದರೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಶಾಂತಿಯಿಂದ ಸಹಬಾಳ್ವೆ ಮಾಡುವುದು ಬಹಳ ಕಷ್ಟಕರ ಏಕೆಂದರೆ, ಇವು ಎರಡು ವಿಭಿನ್ನ ಜಗತ್ತುಗಳು.
ಹಾಗಾದರೆ, ಅವರು ಪರಸ್ಪರ ಆಕರ್ಷಿತರಾಗುವುದು ಹೇಗೆ? ಏಕೆಂದರೆ ಅವರಿಬ್ಬರೂ ತೀರ ಭಿನ್ನವಾದವರು, ಬಹುಮಟ್ಟಿಗೆ ಪರಸ್ಪರ ವಿರುದ್ಧವಾಗಿರುವವರು.
ಸಂಬಂಧಗಳಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವುದು ಬಹಳ ಕಠಿಣ. ಆದರೆ ಸವಾಲು ಇರುವುದೇ ಇಲ್ಲಿ. ನೀವು ಈ ಸವಾಲಿನಿಂದ ತಪ್ಪಿಸಿಕೊಳ್ಳುವಿರಾದರೆ ಪ್ರಬುದ್ಧತೆಯನ್ನು ಸಾಧಿಸುವ ಒಂದು ಒಳ್ಳೆಯ ಅವಕಾಶದಿಂದ ತಪ್ಪಿಸಿಕೊಳ್ಳುವಿರಿ. ನೀವು ಈ ಸವಾಲುಗಳ ಆಳಕ್ಕೆ ಇಳಿದಂತೆಲ್ಲ ಕೊನೆಗೆ ಇವೇ ಸವಾಲುಗಳು ಹಾರೈಕೆಗಳಾಗಿ ಬದಲಾಗುವವು. ಶಾಪಗಳು ಹರಕೆಗಳಾಗಿ ನಿಮ್ಮನ್ನು ಸಲಹುವವು. ನಾನು ಹೇಳುತ್ತಿರುವುದು ದಬ್ಬಾಳಿಕೆ ಮತ್ತು ಅಸಮಾನತೆಯನ್ನು ಪೋಷಿಸುವ ಬಗ್ಗೆ ಅಲ್ಲ, ಎರಡು ವೈರುಧ್ಯಗಳನ್ನು ಅರ್ಥಮಾಡಿಕೊಳ್ಳುವ ಬಗ್ಗೆ.
ಕೊನೆಗೆ ಈ ಬಿಕ್ಕಟ್ಟುಗಳು, ಸಂಘರ್ಷಗಳು, ತಿಕ್ಕಾಟಗಳು ಹರಳುಗಟ್ಟುವವು. ಹೆಚ್ಚು ಎಚ್ಚರಿಕೆ, ಹೆಚ್ಚಿನ ಅರಿವು ನಿಮ್ಮನ್ನು ತುಂಬಿಕೊಳ್ಳುವುದು.
ಆಗ ಆ ಇನ್ನೊಬ್ಬ ವ್ಯಕ್ತಿ ನಿಮಗೆ ಕನ್ನಡಿಯಾಗುವರು. ಆ ಕನ್ನಡಿಯಲ್ಲಿ ನೀವು ನಿಮ್ಮ ಚೆಲುವನ್ನು ನೋಡಿಕೊಳ್ಳಬಹುದು, ನಿಮ್ಮ ಕುರೂಪವನ್ನು ಗಮನಿಸಬಹುದು. ಆ ಇನ್ನೊಬ್ಬರು ನಿಮ್ಮ ಪ್ರಜ್ಞೆಯನ್ನು ಪ್ರಚೋದಿಸುತ್ತ ಅದನ್ನು ಜಾಗೃತಗೊಳಿಸಬಹುದು.
ನಿಮಗೆ ನಿಮ್ಮ ಒಳಗಿನ ಎಲ್ಲ ಭಾಗಗಳೂ ಗೊತ್ತಾಗಬೇಕು. ಇದಕ್ಕೆ ಬಹಳ ಸುಲಭವಾದ ವಿಧಾನವೆಂದರೆ ನೀವು ಇನ್ನೊಬ್ಬರಲ್ಲಿ ಪ್ರತಿಫಲನಗೊಳ್ಳುವುದು.
ನಾನು ಇದು ಸುಲಭ ಎಂದು ಯಾಕೆ ಹೇಳುತ್ತಿದ್ದೇನೆಂದರೆ, ಇದರ ಹೊರತಾಗಿ ಬೇರೆ ದಾರಿ ಇಲ್ಲ. ಹೌದು ಇದು ಕಠಿಣ, ಬಹಳ ಕಠಿಣ, ಏಕೆಂದರೆ ಇದು ನಿಮ್ಮನ್ನು ಬದಲಾಯಿಸುವ ದಾರಿ.
ತನ್ನ ಬರ್ಥ್ ಡೇ ದಿನ ಬೆಳಿಗ್ಗೆ ನಿದ್ದೆಯಿಂದ ಎದ್ದ ನಸ್ರುದ್ದೀನ್ ನ ಹೆಂಡತಿ, ಗಂಡನನ್ನ ಕೇಳಿದಳು,
“ಇವತ್ತು ಬೆಳಿಗ್ಗೆ ನನ್ನ ಕನಸಿನಲ್ಲಿ ನೀನು ನನಗೆ ಡೈಮಂಡ್ ನೆಕ್ಲೇಸ್ ಗಿಫ್ಟ್ ಕೊಟ್ಟಿದ್ದೆ, ಈ ಕನಸಿನ ಅರ್ಥ ಏನು? “
“ ಕನಸಿನ ಅರ್ಥ ನಿನಗೆ ಸಂಜೆ ಗೊತ್ತಾಗುತ್ತದೆ” ನಸ್ರುದ್ದೀನ್ ಹೆಂಡತಿಯನ್ನ ಪ್ರೀತಿಸಿದ.
ಸಂಜೆ ನಸ್ರುದ್ದೀನ್ ಒಂದು ಸುಂದರ್ ಗಿಫ್ಟ್ ಪ್ಯಾಕ್ ಹೆಂಡತಿಯ ಕೈಯಲ್ಲಿಟ್ಟ. ಹೆಂಡತಿ ಆತುರತೆಯಿಂದ ಪ್ಯಾಕ್ ಬಿಚ್ಚಿದಾಗ, ಗಿಫ್ಟ್ ಪ್ಯಾಕ್ ಲ್ಲಿ ಒಂದು ಪುಸ್ತಕ ಇತ್ತು ‘ The meaning of Dreams ‘

