ಒಳಗಿನ ಜಗತ್ತಿಗೆ ತನ್ನದೇ ಆದ ರುಚಿ ಇದೆ, ತನ್ನದೇ ಆದ ಪರಿಮಳವಿದೆ, ತನ್ನದೇ ಆದ ಬೆಳಕು ಇದೆ. ಮತ್ತು ಇವುಗಳು ಅಪಾರ ಮೌನವನ್ನು ಧರಿಸಿಕೊಂಡಿವೆ, ಸಂಪೂರ್ಣ ಮೌನ, ಅನನ್ಯ ಮೌನವನ್ನು… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಬುದ್ಧಿ ಮತ್ತು ಪ್ರೇಮದ ಸಂಯೋಜನೆ
ಬೇರೆ ಬೇರೆ ಧಾತುಗಳಿಂದ .
ಬುದ್ಧಿ ಜನರ ನಡುವೆ ಗಂಟು ಹಾಕುತ್ತದೆ
ಆದರೆ ಯಾವ ಅಪಾಯಕ್ಕೂ ತೆರೆದುಕೊಳ್ಳದಂತೆ.
ಆದರೆ ಪ್ರೇಮ ಹಾಗಲ್ಲ
ಅದು ಬಿಚ್ಚುತ್ತದೆ ಸಂಬಂಧಗಳಲ್ಲಿನ ಸಿಕ್ಕುಗಳನ್ನ
ಎಲ್ಲ ಅಪಾಯಗಳನ್ನೂ ಆಹ್ವಾನಿಸುತ್ತ.
ಬುದ್ದಿಯದು
ಯಾವಾಗಲೂ ಜಾಗರೂಕತೆಯ ಸ್ವಭಾವ
ಸಲಹೆ ನೀಡುವ ಹುಕಿ
ಉನ್ಮತ್ತ ಆನಂದದ ಬಗ್ಗೆ ಸದಾ ಹಿಂಜರಿಕೆ.
ಆದರೆ ಪ್ರೇಮಕ್ಕೆ ಅಪಾರ ಉತ್ಸಾಹ
ಅಪಾಯಗಳಿಗೆ ಎದೆಯೊಡ್ಡುವ ಹುರುಪು
ಬೆಂಕಿಯಲ್ಲಿ ಹಾರಿ ಬಂಗಾರವಾಗುವ ಉತ್ಕಟತೆ.
ಬುದ್ಧಿಯನ್ನು ಒಡೆಯುವುದು ಕಠಿಣ
ಆದರೆ ಪ್ರೇಮ ನಿರಾಯಾಸವಾಗಿ
ತನ್ನನ್ನು ತಾನು ಒಡೆದುಕೊಂಡು
ಅವಶೇಷವಾಗಬಲ್ಲದು.
ನಿಮಗೆ ಗೊತ್ತಿದೆ
ನಿಧಿ ಅಡಗಿರುವುದೆ ಅವಶೇಷಗಳಡಿಯಲ್ಲಿ
ಒಡೆದ ಹೃದಯ
ತನ್ನೊಳಗೆ ಬಚ್ಚಿಟ್ಟುಕೊಂಡಿದೆ
ಅಪಾರ ಸಂಪತ್ತು.
~ ಶಮ್ಸ್ ತಬ್ರೀಝಿ
ಹೇಗೆ ಹೊರಗಿನ ಜಗತ್ತನ್ನು ಅನುಭವಿಸಲು ಪಂಚೇಂದ್ರಿಯಗಳು ಇವೆಯೋ ಹಾಗೆಯೇ, ನಮ್ಮೊಳಗಿನ ಜಗತ್ತನ್ನು ಅನುಭವಿಸಲು ಕೂಡ ಐದು ಇಂದ್ರಿಯಗಳಿವೆ. ಹಾಗಾಗಿ ಮನುಷ್ಯನಲ್ಲಿ ಇರುವುದು ಒಟ್ಟು ಹತ್ತು ಸಂವೇದನೆಯ ಇಂದ್ರಿಯಗಳು. ಮನುಷ್ಯನ ಒಳಗಿನ ಪ್ರಯಾಣ ವನ್ನು ಸಾಧ್ಯ ಮಾಡಿಕೊಡುವ ಮೊದಲ ಇಂದ್ರಿಯ ಅವನ ಮೂರನೇ ಕಣ್ಣು. ಒಮ್ಮೆ ಮೂರನೇ ಕಣ್ಣು ತೆರೆದುಕೊಂಡಿತೆಂದರೆ ಮುಂದಿನ ನಾಲ್ಕು ಇಂದ್ರಿಯಗಳು ತಾವೇ ತಾವಾಗಿ ತೆರೆದುಕೊಳ್ಳುತ್ತವೆ.
ಒಳಗಿನ ಜಗತ್ತಿಗೆ ತನ್ನದೇ ಆದ ರುಚಿ ಇದೆ, ತನ್ನದೇ ಆದ ಪರಿಮಳವಿದೆ, ತನ್ನದೇ ಆದ ಬೆಳಕು ಇದೆ. ಮತ್ತು ಇವುಗಳು ಅಪಾರ ಮೌನವನ್ನು ಧರಿಸಿಕೊಂಡಿವೆ, ಸಂಪೂರ್ಣ ಮೌನ, ಅನನ್ಯ ಮೌನ. ಹಿಂದೆಯೂ ಅಲ್ಲಿ ಯಾವ ಗದ್ದಲವಿರಲಿಲ್ಲ, ಮುಂದೂ ಗದ್ದಲ ಅವನ್ನು ಪ್ರಭಾವಿಸುವುದು ಸಾಧ್ಯವಿಲ್ಲ. ಯಾವ ಶಬ್ದಕ್ಕೂ ಅಲ್ಲಿಗೆ ತಲುಪುವುದು ಸಾಧ್ಯವಿಲ್ಲ, ಆದರೆ ನೀವು ಅಲ್ಲಿಗೆ ತಲುಪಬಹುದು. ಮೈಂಡ್ ಗೆ ಅವನ್ನು ತಲುಪುವುದು ಸಾಧ್ಯವಿಲ್ಲ ಆದರೆ, ನೀವು ಅಲ್ಲಿಗೆ ತಲುಪಬಹುದು. ಏಕೆಂದರೆ ನೀವು ನಿಮ್ಮ ಮೈಂಡ್ ಅಲ್ಲ. ಮೈಂಡ್ ನ ಕೆಲಸ ನಿಮ್ಮ ಮತ್ತು ಲೌಕಿಕ ಜಗತ್ತಿನ ನಡುವೆ ಸೇತುವೆಯನ್ನು ನಿರ್ಮಿಸುವುದು. ಆದರೆ ಹೃದಯದ ಕೆಲಸ ನಿಮ್ಮ ಮತ್ತು ನಿಮ್ಮ ಸೆಲ್ಪ್ ನ ನಡುವೆ ಸೇತುವೆ ಕಟ್ಟುವುದು.
ನಾನು ಯಾವ ಮೌನದ ಬಗ್ಗೆ ಮಾತನಾಡುತ್ತಿದ್ದೆನೆಂದರೆ, ಅದು ಹೃದಯದ ಮೌನ. ಈ ಹೃದಯದ ಮೌನ ತನ್ನಷ್ಟಕ್ಕೆ ತಾನೇ ಒಂದು ಹಾಡು, ಇಲ್ಲಿ ಯಾವ ಪದಗಳಿಲ್ಲ, ಯಾವ ಸೌಂಡ್ ಗೂ ಜಾಗ ಇಲ್ಲ. ಪ್ರೇಮದ ಹೂವುಗಳು ಅರಳುವುದು ಈ ಮೌನದ ಒಳಗಿನಿಂದಲೇ. ಈ ಮೌನವೇ ಗಾರ್ಡನ್ ಆಫ್ ಈಡನ್. ಧ್ಯಾನ, ಕೇವಲ ಧ್ಯಾನ ಮಾತ್ರ ಈ ಗಾರ್ಡನ್ ನ ಬೀಗ ತೆರೆಯುವ ಕೀಲಿಕೈ.
ಚೈನಾ ದೇಶದಲ್ಲಿ ಒಬ್ಬ ಮುದುಕಿಯಿದ್ದಳು. ಸುಮಾರು ಇಪ್ಪತ್ತು ವರ್ಷಗಳಿಂದ ಆಕೆ ಸನ್ಯಾಸಿಯೊಬ್ಬನ ಯೋಗಕ್ಶೇಮ ನೋಡಿಕೊಳ್ಳುತ್ತಿದ್ದಳು. ಅವನಿಗಾಗಿ ಒಂದು ಗುಡಿಸಲು ಕಟ್ಚಿಸಿ ಕೊಟ್ಟಿದ್ದಳು. ಅವನು ಧ್ಯಾನ ಮಾಡುವಾಗ ಅವನ ಸಕಲ ಬೇಕು ಬೇಡಗಳ ಬಗ್ಗೆ ನಿಗಾ ವಹಿಸುತ್ತಿದ್ದಳು.
ಹೀಗಿರುವಾಗ ಮುದುಕಿಗೆ ಸನ್ಯಾಸಿಯನ್ನು ಅವನ ಧ್ಯಾನ, ಅಧ್ಯಾತ್ಮದ ವಿಷಯವಾಗಿ ಪರೀಕ್ಷಿಸುವ ಮನಸ್ಸಾಯಿತು. ಆಕೆ ಒಬ್ಬ ಸುಂದರ ಯುವತಿಯನ್ನು ಕರೆಸಿ, ಸನ್ಯಾಸಿಯನ್ನು ಅಪ್ಪಿಕೊಂಡು, ಉತ್ತೇಜಿಸುವಂತೆ ಮನವಿ ಮಾಡಿದಳು.
ಯುವತಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಅವನನನ್ನು ಅಪ್ಪಿಕೊಂಡು “ ಮುಂದೇನು “ ಎಂದು ಕೇಳಿದಳು.
“ ಚಳಿಗಾಲದ ಕೊರೆಯುವ ಬಂಡೆಯ ಮೇಲೆ, ಹಳೆಯ ಮರವೊಂದು ಮತ್ತೆ ಚಿಗಿತು ಕೊಳ್ಳುತ್ತದೆ. ಎಲ್ಲೂ ಅನ್ಯೋನ್ಯತೆಗೆ ಜಾಗವಿಲ್ಲ”
ಸನ್ಯಾಸಿ ಕಾವ್ಯಮಯವಾಗಿ ಉತ್ತರಿಸಿದ.
ಯುವತಿ ನಡೆದ ಸಂಗತಿಯನ್ನೆಲ್ಲ ಮುದುಕಿಗೆ ವಿವರಿಸಿದಳು. ಮುದುಕಿಗೆ ಭಯಂಕರ ಸಿಟ್ಟು ಬಂತು. “ ನಿನ್ನ ಬಯಕೆಗಳ ಬಗ್ಗೆ, ಅಗತ್ಯದ ಬಗ್ಗೆ ಅವನು ವಿಚಾರ ಮಾಡಲಿಲ್ಲ, ನಿನ್ನ ಸ್ಥಿತಿಯ ಬಗ್ಗೆ ಕಾರಣ ಕೇಳಲಿಲ್ಲ. ಅವನು ನಿನ್ನ ಉತ್ತೇಜನಕ್ಕೆ ಪ್ರತಿಕ್ರಿಯಿಸಬೇಕಿರಲಿಲ್ಲ ಆದರೆ ನಿನ್ನ ಬಗ್ಗೆ , ನಿನ್ನ ಸ್ಥಿತಿಯ ಬಗ್ಗೆ ಸಹಾನೂಭೂತಿಯಿಂದ ವರ್ತಿಸಬೇಕಿತ್ತು”
ಎನ್ನುತ್ತಾ ಮುದುಕಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಗುಡಿಸಲಿಗೆ ಬೆಂಕಿ ಹಚ್ಚಿಬಿಟ್ಟಳು.
Source ~ Osho / The Golden Future / Chapter: 1

