ಝೆನ್ ಮನುಷ್ಯ ನೆಲದ ಮೇಲೆ ಬಿದ್ದಾಗ, ಆಕಾಶದಲ್ಲಿ ಹಾರುತ್ತಿರುವ ಎಲೆಗಳಿಗಿಂತ ತಾನು ಅಸಮರ್ಥ ಎಂದು ತಿಳಿದುಕೊಳ್ಳುವುದಿಲ್ಲ. ಅವನು ಯಾವತ್ತೂ ಸೋಲುವುದಿಲ್ಲ, ಯಾವತ್ತೂ ಹತಾಶನಾಗಿವುದಿಲ್ಲ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
‘ಚೆಲುವು’ ಎಂದು ತೀರ್ಮಾನಿಸಿದಾಗಲೇ
ಹುಟ್ಟಿಕೊಂಡದ್ದು ಕುರೂಪ.
‘ಒಳ್ಳೆಯದು’ ಎಂದು ಹೆಸರಿಟ್ಟಾಗಲೇ
ಕೆಡುಕಿನ ನಾಮಕರಣ ಕೂಡ.
ಇರುವುದು ಮತ್ತು ಇರದಿರುವುದು
ಹುಟ್ಟಿಸುತ್ತವೆ ಒಂದನ್ನೊಂದು.
ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು.
ದೂರ – ಸಮೀಪ
ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು.
ಆಳ ಮತ್ತು ಎತ್ತರ
ಸವಾರಿ ಮಾಡುತ್ತವೆ, ಒಂದರ ಮೇಲೊಂದು.
ಭೂತ ಮತ್ತು ಭವಿಷ್ಯ
ಹಿಂಬಾಲಿಸುತ್ತವೆ, ಒಂದನ್ನೊಂದು.
ಆದ್ದರಿಂದಲೇ ಸಂತನ ಕೆಲಸದಲ್ಲಿ
ದುಡಿಮೆ ಇಲ್ಲ,
ಕಲಿಸುವಿಕೆಯಲ್ಲಿ ಮಾತಿಲ್ಲ.
ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ
ಹೆಣ ಹೊರುವಲ್ಲಿಯೂ,
ತಾಯಿಯಾಗಲೊಲ್ಲ, ಕವಿಯಾಗಲೊಲ್ಲ,
ಬೀಜ ಬಿತ್ತಿ, ಪಾತಿ ಮಾಡಿ, ನೀರು ಉಣಿಸಿ
ಸುಮ್ಮನಾಗುತ್ತಾನೆ.
ಅಂತೆಯೇ ತಾವೋ ಅನನ್ಯ, ಅವಿನಾಶಿ.
~ ಲಾವೋತ್ಸೇ
ಝೆನ್ ಮನುಷ್ಯ ಅಲೆಮಾರಿ, ಗೊತ್ತು ಗುರಿಯಿಲ್ಲದವನು, ಯಾವುದೇ ಭವಿಷ್ಯದ ಹಂಗು ಇಲ್ಲದವನು. ಮೈಂಡ್ ನ ಸಹಾಯವಿಲ್ಲದೆ ಕ್ಷಣದಿಂದ ಕ್ಷಣಕ್ಕೆ ಬದುಕುವವನು; ಥೇಟ್ ಒಣಗಿದ ಎಲೆಯಂತೆ ತನ್ನನ್ನು ತಾನು ಗಾಳಿಗೆ ಸಮರ್ಪಿಸಿಕೊಂಡವನು. ಅವನು ಗಾಳಿಗೆ ಹೇಳುತ್ತಾನೆ, “ನೀನು ಕರೆದುಕೊಂಡು ಹೋದಲ್ಲಿ ನಾನು ಬರುತ್ತೇನೆ”. ಅವನು ಗಾಳಿಯಲ್ಲಿ ಮೇಲೆ ಆಕಾಶದಲ್ಲಿ ಹಾರುವಾಗ, ನೆಲದ ಮೇಲೆ ಬಿದ್ದಿರುವ ಎಲೆಗಳಿಗಿಂತ ನಾನು ಸುಪೀರಿಯರ್ ಎಂದು ಭಾವಿಸುವುದಿಲ್ಲ.
ಅವನು ನೆಲದ ಮೇಲೆ ಬಿದ್ದಾಗ, ಆಕಾಶದಲ್ಲಿ ಹಾರುತ್ತಿರುವ ಎಲೆಗಳಿಗಿಂತ ತಾನು ಅಸಮರ್ಥ ಎಂದು ತಿಳಿದುಕೊಳ್ಳುವುದಿಲ್ಲ. ಅವನು ಯಾವತ್ತೂ ಸೋಲುವುದಿಲ್ಲ, ಯಾವತ್ತೂ ಹತಾಶನಾಗಿವುದಿಲ್ಲ. ಗುರಿಯೇ ಇಲ್ಲದಿರುವಾಗ ಸೋಲುವ ಮಾತು ಎಲ್ಲಿಂದ ಬಂತು? ಯಾವ ನಿರ್ದಿಷ್ಟ ಜಾಗಕ್ಕೂ ನಿಮಗೆ ಹೋಗುವುದು ಇಲ್ಲದಿರುವಾದ ನೀವು ಹೇಗೆ ಹತಾಶರಾಗುವುದು ಸಾಧ್ಯ? ನಿರೀಕ್ಷೆಗಳು ಹತಾಶೆಯನ್ನು ಹೊತ್ತು ತರುತ್ತವೆ. ಖಾಸಗಿ ಮಹತ್ವಾಕಾಂಕ್ಷೆಗಳು ಸೋಲಿನ ರುಚಿ ಉಣ್ಣಿಸುತ್ತವೆ.
ಝೆನ್ ಮನುಷ್ಯ ಯಾವಾಗಲೂ ವಿಜಯಶಾಲಿ, ಸೋಲಿನಲ್ಲು ಕೂಡ.
ಜುವಾಂಗ್-ತ್ಸೆ ಒಂದು ಕತೆ ಹೇಳುತ್ತಾನೆ.
ಸಂತನೊಬ್ಬ ಶಿಷ್ಯನೊಂದಿಗೆ ತನ್ನ ದೋಣಿಯಲ್ಲಿ ನದಿ ದಾಟುತ್ತಿದ್ದ. ನದಿಯ ನಡುವೆ ಬರುತ್ತಿದ್ದಂತೆಯೇ ಇನ್ನೊಂದು ಖಾಲಿ ದೋಣಿ ಇವರ ದೋಣಿಗೆ ಡಿಕ್ಕಿ ಹೊಡೆಯಿತು
ಶಿಷ್ಯನಿಗೆ ಭಾರಿ ಸಿಟ್ಟು, ಆದರೆ ಯಾರಿಗೆ ಬಯ್ಯುತ್ತಾನೆ?
“ಅಕಸ್ಮಾತ್ ದೋಣಿಯಲ್ಲಿ ಯಾರಾದರೂ ಇದ್ದರೆ, ಏನು ಮಾಡುತ್ತಿದ್ದೆ? “ ಸಂತನ ಪ್ರಶ್ನೆ.
“ಬಾಯಿಗೆ ಬಂದಹಾಗೆ ಬಯ್ಯುತ್ತಿದ್ದೆ, ಒಂದು ಸಾರಿಯಲ್ಲ, ಹತ್ತು ಸಾರಿ ಶಾಪ ಹಾಕುತ್ತಿದ್ದೆ “ ಹೇಳುದ ಶಿಷ್ಯ.
“ನೋಡು ಹಾಗಾದರೆ ಖಾಲಿ ದೋಣಿಯಲ್ಲಿ ಪ್ರಯಾಣ ಮಾಡೋದು ಎಷ್ಟು ಒಳ್ಳೆಯದು.ಬಯ್ಯೋರೂ ಇಲ್ಲ, ಹೊಡೆಯೋರೂ ಇಲ್ಲ”
ನಗುತ್ತ ಅಂದಿನ ಪಾಠ ಮುಗಿಸಿದ ಸಂತ.
Source: Öshö / Ah This / Chapter:1

