ಉಸ್ತಾದ್ ಝಾಕಿರ್ ಹುಸೇನ್ ತಮ್ಮ ತಂದೆಯ ಸಂಗೀತ ನಿಷ್ಠೆ ನೆನೆದಿದ್ದು ಹೀಗೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಹುಟ್ಟಿದ ಮಗುವನ್ನು ಮನೆಗೆ ಕರೆದುಕೊಂಡು ಬಂದು ತಂದೆ ಉಸ್ತಾದ ಅಲ್ಲಾರಖಾ ಅವರ ಕೈಯಲ್ಲಿ ಇಡಲಾಗುತ್ತದೆ. ಉಸ್ತಾದ ಅಲ್ಲಾರಖಾ ಈ ಜಗತ್ತು ಕಂಡ ಶ್ರೇಷ್ಠ ತಬಲಾ ವಾದಕರಲ್ಲಿ ಒಬ್ಬರು.
ಇಸ್ಲಾಂ ಸಂಪ್ರದಾಯದ ಪ್ರಕಾರ ತಂದೆ ಮಗುವನ್ನು ಮನೆಗೆ ಸ್ವಾಗತ ಮಾಡುತ್ತ ಮಗುವಿನ ಕಿವಿಯಲ್ಲಿ ಭಗವಂತನ ಪವಿತ್ರ ನುಡಿಗಳನ್ನ, ಪ್ರಾರ್ಥನೆಯನ್ನ ಹೇಳಬೇಕು. ಆದರೆ ನಡೆದದ್ದೇ ಬೇರೆ.
ಅಲ್ಲಾರಖಾ ಮಗುವನ್ನು ಕೈಯಲ್ಲಿ ಎತ್ತಿಕೊಂಡು, ಅದರ ಕಿವಿಗಳ ಮೇಲೆ ತುಟಿ ಇಟ್ಟು ತಬಲಾದ ಒಂದು ತಾಲ್ ಗುನುಗುತ್ತಾರೆ. ಆದರೆ ತಾಯಿಗೆ ಇದನ್ನು ಕಂಡು ವಿಚಿತ್ರ ಅನಿಸುತ್ತದೆ. “ಏನು ಮಾಡುತ್ತಿದ್ದೀರಿ ನೀವು, ಮಗುವಿನ ಕಿವಿಯಲ್ಲಿ ಮೊದಲ ಬಾರಿ ಪ್ರಾರ್ಥನೆಯನ್ನ ಹೇಳಬೇಕು ತಾನೇ” ಎಂದು ಆಕೆ ಆಕ್ಷೇಪ ಮಾಡುತ್ತಾರೆ.
“ಇದೇ ನನ್ನ ಪ್ರಾರ್ಥನೆ. ನಾನು ಪ್ರಾರ್ಥನೆ ಮಾಡೋದೇ ಹೀಗೆ. ನಾನು ತಾಯಿ ಸರಸ್ವತಿ ಮತ್ತು ಭಗವಾನ್ ಗಣೇಶರ ಭಕ್ತ. ನನ್ನ ಗುರು ಹಿರಿಯರು ನನಗೆ ಕಲಿಸಿದ್ದು ಈ ಪ್ರಾರ್ಥನೆಯನ್ನೇ. ನಾನು ಇದನ್ನೇ ಅಲ್ಲವೇ ಮಗುವಿಗೆ ಮೊದಲು ಹೇಳಬೇಕಾದದ್ದು. ಅವನು ಮುಂದುವರೆಸಬೇಕಾದದ್ದು ಇದೇ ಪ್ರಾರ್ಥನೆಯನ್ನು” ಎನ್ನುತ್ತ ಶಿಸ್ತಿನ ಮುಸ್ಲಿಂ ಆದ ತಂದೆ ಉಸ್ತಾದ ಅಲ್ಲಾರಖಾ ತಮ್ಮ ಕೈಯಲ್ಲಿದ್ದ (ಮುಂದೆ ಉಸ್ತಾದ್ ಝಾಕಿರ್ ಹುಸೇನ್ ಎಂದು ಜಗತ್ಪ್ರಸಿದ್ಧನಾದ) ಮಗುವಿಗೆ ಆಶೀರ್ವಾದ ಮಾಡುತ್ತಾರೆ.

