ಬದುಕಿನ ಬಗ್ಗೆ ಯಾವ ತಕರಾರುಗಳನ್ನೂ ಮಾಡದೇ ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುತ್ತ ಬದುಕಿನ ಹೊಸ ದಾರಿಗಳನ್ನು ಕಂಡುಕೊಳ್ಳುವ ಬಗ್ಗೆ ಮಾತನಾಡುತ್ತ ಪ್ರಸಿದ್ಧ ಕ್ರಿಕೆಟ್ ಕಾಮೆಂಟ್ರೇಟರ್ ಹರ್ಷ ಭೋಗ್ಲೆ, ಟೈಗರ್ ಪಟೌಡಿ ಜೊತೆಗಿನ ತಮ್ಮ ಮಾತುಕತೆಯನ್ನು ನೆನಪಿಸಿಕೊಂಡಿದ್ದು ಹೀಗೆ… । ಚಿದಂಬರ ನರೇಂದ್ರ .
ಭಾರತ ಕಂಡ ಅತ್ಯುತ್ತಮ ಕ್ಯಾಪ್ಟನ್ ಗಳಲ್ಲಿ ಒಬ್ಬರಾದ ಟೈಗರ್ ಪಟೌಡಿ ಅವರ ಜೀವ ಮಾನದ ಸರಾಸರಿ ಕೇವಲ 35. ಈಗಿನ ಮಹಾನ ಕ್ರಿಕೆಟ್ ಆಟಗಾರರಿಗೆ ಹೋಲಿಸಿದರೆ ಇದು ತೀರ ಸಾಮಾನ್ಯ. ಪಟೌಡಿ ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಅದ್ಭುತವಾಗಿ ಆಡುತ್ತ ಕ್ರಿಕೆಟ್ ಅಭಿಮಾನಿಗಳ ಡಾರ್ಲಿಂಗ್ ಆಗಿದ್ದಾಗ ಅಪಘಾತವೊಂದರಲ್ಲಿ ತಮ್ಮ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಾರೆ.
ಇನ್ನೆನು ಅವರ ಕ್ರಿಕೆಟ್ ಜೀವನ ಮುಗಿದು ಹೋಯ್ತು ಎಂದು ಎಲ್ಲರೂ ತಿಳಿದುಕೊಂಡಿದ್ದಾಗ, ಪಟೌಡಿ ಗಾಜಿನ ಕಣ್ಣು ಅಳವಡಿಸಿಕೊಂಡು ಮೈದಾನಕ್ಕೆ ಇಳಿಯುತ್ತಾರೆ. ಮೊದ ಮೊದಲು ತೀರ ಸಮತಟ್ಟಾದ ಪಿಚ್ ಗಳಲ್ಲಿ ವೇಗವಾಗಿ ಬಾಲ್ ಅವರೆಡೆಗೆ ಬರುತ್ತಿದ್ದಾಗ, ಅವರ ಕಣ್ಣುಗಳಿಗೆ ಎರಡೆರಡು ಬಾಲ್ ಗಳು ಕಾಣುತ್ತಿರುತ್ತವೆ. ನಿರಂತರ ಪ್ರಾಕ್ಟೀಸ್ ಮುಖಾಂತರ ಅವರು ಕಂಡುಕೊಳ್ಳುವುದೇನೆಂದರೆ, ಆ ಎರಡು ಬಾಲ್ ಗಳಲ್ಲಿ ಕೆಳಗೆ ಇರುವ ಬಾಲ್ ನಿಜವಾದ ಬಾಲ್ ಎನ್ನುವುದನ್ನ. ಇಂಥ ಪರಿಸ್ಥಿತಿಯಲ್ಲಿ ಹೊಸ ದೃಷ್ಟಿಗೆ ಹೊಂದಿಕೊಂಡು ಮುಂದೆ ಅರ್ಧ ಶತಕ ಬಾರಿಸಿದ ಟೈಗರ್ ಪಟೌಡಿಯವರ ಸಹನೆ, ಧೃಡ ಸಂಕಲ್ಪ ಎಲ್ಲರಿಗೂ ಮಾದರಿಯಾಗುವಂಥದು.

