ನೀವು ನಿಮ್ಮ ಇರುವಿಕೆಯ ಭಾಷೆಯನ್ನ ಮರೆತುಬಿಟ್ಟಿದ್ದೀರಿ. ನಾನು ಈ ಭಾಷೆಯನ್ನು ಗುರುತಿಸಿದ್ದೇನೆ, ನಾನು ಈ ಭಾಷೆಯನ್ನು ನೆನಪುಮಾಡಿಕೊಂಡಿದ್ದೇನೆ. ಮತ್ತು ಈ ಭಾಷೆ ನನಪಾದಾಗಿನಿಂದ ನಾನು ಒಂದು ವಿಚಿತ್ರ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀವೇ ಬುದ್ಧ, ನೀವೇ ದೇವರು ಎಂದು ನಾನು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ. ನಿಮಗೆ ಇದು ನಂಬಲು ಬಹಳ ಕಷ್ಟಕರವಾದ ವಿಷಯ. ಪಾಪಿಗಳೆನಿಸಿಕೊಳ್ಳುವುದು ನಿಮಗೆ ಸಮಾಧಾನಕಾರಕ, ಅಪರಾಧಿ ಭಾವ ನಿಮ್ಮ ತೃಪ್ತಿಗೆ ಕಾರಣ. ನರಕಕ್ಕೆ ಹೋಗುವುದು ಎಂದರೆ ನಿಮಗೆ ಭಯವಾಗುವುದಿಲ್ಲ. ಆದರೆ ನೀವು ಬುದ್ಧ ಎಂದು ನಾನು ನಿಮಗೆ ಹೇಳಿದರೆ ನಿಮಗೆ ಭಯವಾಗುತ್ತದೆ. ನಿಮ್ಮೊಳಗೆ ಬುದ್ಧಪ್ರಜ್ಞೆ ಇದೆ ಎಂದು ನಾನು ಹೇಳಿದರೆ ನಿಮಗೆ ಭಯವಾಗುತ್ತದೆ. ಏಕೆಂದರೆ ಬುದ್ಧನಿಗೆ ಯಾವ ಸಮಸ್ಯೆಗಳೂ ಇಲ್ಲ. ಸಮಸ್ಯಗಳು ಇಲ್ಲವೆಂದ ಮೇಲೆ ನೀವು ಇಲ್ಲವಾಗಲು ಶುರುಮಾಡುತ್ತೀರಿ. ಇದು ನಿಮ್ಮ ಭಯ. ಆದರೆ ಈ ಇಡಿ ಸಮಸ್ತದಲ್ಲಿ ಕರಗಿ ಹೋಗುವುದು ಒಂದೇ ಮಹತ್ವದ ವಿಷಯ, ಇದೊಂದು ಮಾತ್ರಕ್ಕೇ ಬೆಲೆ ಇರುವುದು.
ನಾನು ನಿಮಗೆ ಪಾಠ ಹೇಳುತ್ತಿಲ್ಲ. ಈ ಜಾಗ ಕೇವಲ ನೆಲ ಅಲ್ಲ ಇದು ಸಾಧನ, ಇದು ಬುದ್ಧ ಫೀಲ್ಡ್. ನಿಮ್ಮೊಳಗೆ ಇರದೇ ಇರುವುದನ್ನ ನಾನು ತೆಗೆದು ಹೊರಗೆ ಹಾಕಬೇಕು ಮತ್ತು ನಿಮ್ಮೊಳಗೆ ಈಗಾಗಲೇ ಇರುವುದನ್ನ ನಾನು ನಿಮಗೆ ಕೊಡಬೇಕು. ಇದಕ್ಕಾಗಿ ನೀವು ನನಗೆ ಕೃತಜ್ಞರಾಗಿರಬೇಕಿಲ್ಲ. ಏಕೆಂದರೆ ನಾನು ನಿಮಗೆ ಹೊಸದನ್ನೇನೂ ಕೊಡುತ್ತಿಲ್ಲ. ನಿಮ್ಮೊಳಗೆ ಈಗಾಗಲೇ ಇರುವುದರ ಕುರಿತು ನೆನಪಿಸುತ್ತಿದ್ದೆನೆ ಅಷ್ಟೇ.
ನೀವು ನಿಮ್ಮ ಇರುವಿಕೆಯ ಭಾಷೆಯನ್ನ ಮರೆತುಬಿಟ್ಟಿದ್ದೀರಿ. ನಾನು ಈ ಭಾಷೆಯನ್ನು ಗುರುತಿಸಿದ್ದೇನೆ, ನಾನು ಈ ಭಾಷೆಯನ್ನು ನೆನಪುಮಾಡಿಕೊಂಡಿದ್ದೇನೆ. ಮತ್ತು ಈ ಭಾಷೆ ನನಪಾದಾಗಿನಿಂದ ನಾನು ಒಂದು ವಿಚಿತ್ರ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ನನಗೆ ನಿಮ್ಮ ಬಗ್ಗೆ ಅಂತಃಕರಣ ಇದೆಯೆನೋ ಸರಿ ಆದರೆ ನಿಮ್ಮನ್ನು ನೋಡಿ ನಾನು ಒಳಗೊಳಗೇ ನಗುತ್ತೇನೆ. ಅಕೆಂದರೆ ನೀವು ಯಾವ ತೊಂದರೆಯಲ್ಲೂ ಇಲ್ಲ. ನಿಮಗೆ ಯಾವ ಕಾರುಣ್ಯದ ಅವಶ್ಯಕತೆಯೂ ಇಲ್ಲ. ಯಾರಾದರೂ ನಿಮ್ಮ ತಲೆಯ ಮೇಲೆ ಜೋರಾಗಿ ಹೊಡೆಯಬೇಕು ಮಾತ್ರ. ನಿಮ್ಮ ಸಂಕಟಗಳು ಬೋಗಸ್, ಆನಂದ ನಿಮ್ಮ ಸಹಜ ಸ್ಥಿತಿ.
ನೀವು ಸತ್ಯ, ನೀವು ಪ್ರೇಮ
ನೀವು ಆನಂದ, ನೀವು ಸ್ವಾತಂತ್ರ್ಯ
ಒಮ್ಮೆ ಒಬ್ಬ ಯುವ ಸನ್ಯಾಸಿ ತನ್ನ ವಿದ್ಯಾಭ್ಯಾಸ ಮುಗಿಸಿ ವಾಪಸ್ ಊರಿಗೆ ಹೊರಟಿದ್ದ. ದಾರಿಯಲ್ಲಿ ಅವನಿಗೆ ತುಂಬಿ ಹರಿಯುತ್ತಿದ್ದ ನದಿ ಎದುರಾಯಿತು. ಭೋರ್ಗರೆಯುತ್ತಾ ಹರಿಯುತ್ತಿದ್ದ ನದಿಯನ್ನು ಹೇಗೆ ದಾಟುವುದು ಎಂದು ಅವ ಚಿಂತಾಕ್ರಾಂತನಾದ. ಗಂಟೆಗಟ್ಟಲೆ ಯೋಚಿಸಿದ ಮೇಲೂ ಯಾವ ಉಪಾಯ ಹೊಳೆಯದಿದ್ದಾಗ ವಾಪಸ್ ಹೋಗಲು ನಿರ್ಧರಿಸಿದ.
ಅಷ್ಟರಲ್ಲಿ ಅವನಿಗೆ ನದಿಯ ಆಚೆ ದಡದಲ್ಲಿ ಒಬ್ಬ ಹಿರಿಯ ಸನ್ಯಾಸಿ ಕಾಣಿಸಿದ. ಅವನ ಹತ್ತಿರ ನದಿ ದಾಟುವ ಉಪಾಯ ಕೇಳಬೇಕೆಂದು ಯುವ ಸನ್ಯಾಸಿ ಕೂಗಿದ
“ ಮಾಸ್ಟರ್, ಆಚೆ ದಡ ಸೇರುವ ಉಪಾಯ ಹೇಳ್ತೀರಾ? “
ಹಿರಿಯ ಸನ್ಯಾಸಿ ಒಂದು ಕ್ಷಣ ಧ್ಯಾನಿಸಿ ಉತ್ತರಿಸಿದ
“ ಹುಡುಗಾ, ನೀನು ಆಚೆ ದಡದಲ್ಲೇ ಇರೋದು “

