ಬುದ್ಧ ಹೇಳುತ್ತಾನೆ, “ಉತ್ತರಿಸುವುದು ಎನ್ನುವುದು ಆಲೋಚನೆ ಮಾಡಿ ಕಂಡುಕೊಳ್ಳುವ ವಿಷಯ ಅಲ್ಲ. ನೀವು ಪ್ರಶ್ನೆ ಕೇಳಿದಾಗ ನಾನು ಸುಮ್ಮನೇ ಆ ಪ್ರಶ್ನೆಯನ್ನು ಗಮನಿಸುತ್ತೇನೆ. ಮತ್ತು ಆಗ ಸತ್ಯ ಏನಿದೆಯೋ ಅದು ತಾನಾಗಿಯೇ ಅನಾವರಣಗೊಳ್ಳುತ್ತದೆ” ಎಂದು… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
“ನಿಮ್ಮ ಬಳಿ ಏನಾದರೂ ಪ್ರಶ್ನೆಗಳಿವೆಯಾ?” ಪ್ರೈಮರಿ ಸ್ಕೂಲ್ ಮೇಡಂ ಒಬ್ಬರು ಮಕ್ಕಳನ್ನು ಕೇಳಿದರು. ಒಬ್ಬ ಪುಟ್ಟ ಹುಡುಗ ಎದ್ದು ನಿಂತ ಕೇಳಿದ, “ಯಾವಾಗ ನೀವು ಈ ಮಾತು ಹೇಳ್ತಿರೋ ಅಂತ ನಾನು ಕಾಯ್ತಾ ಇದ್ದೆ. ನನ್ನದೊಂದು ಪ್ರಶ್ನೆ ಇದೆ. ಈ ಭೂಮಿಯ ಭಾರ ಎಷ್ಟು?”
ಹುಡುಗನ ಪ್ರಶ್ನೆ ಕೇಳಿ ಮೇಡಂ ಗೆ ದಿಗಿಲಾಯಿತು ಏಕೆಂದರೆ ಅವರು ಈ ಬಗ್ಗೆ ಯಾವತ್ತೂ ಯೋಚಿಸಿಯೇ ಇರಲಿಲ್ಲ ಮತ್ತು ಈ ಕುರಿತು ಓದಿಕೊಂಡೂ ಇರಲಿಲ್ಲ. ಭೂಮಿಯ ಭಾರ ಎಷ್ಟು ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರ ಇರಲಿಲ್ಲ. ಆಗ ಅವರೊಂದು ಟ್ರಿಕ್ ಮಾಡಿದರು, ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು, “ ಈ ಪ್ರಶ್ನೆ ಬಹಳ ಮುಖ್ಯವಾದದ್ದು. ನಾಳೆ ಈ ಪ್ರಶ್ನೆಗೆ ಯಾರು ಸರಿಯಾದ ಉತ್ತರ ಹೇಳ್ತೀರೋ ಅವರಿಗೊಂದು ಬಹುಮಾನ ಕೊಡ್ತೀನಿ”. ಮೇಡಂ ಗೆ ಉತ್ತರ ಕಂಡುಹಿಡಿಯಲು ಸ್ವಲ್ಪ ಸಮಯ ಬೇಕಾಗಿತ್ತು.
ಮಕ್ಕಳು ಈ ಪ್ರಶ್ನೆಗೆ ಉತ್ತರವನ್ನು ಎಲ್ಲ ಕಡೆ ಹುಡುಕಿದರು ಆದರೆ ಯರಿಗೂ ಉತ್ತರ ಸಿಗಲಿಲ್ಲ. ಮೇಡಂ ಲೈಬ್ರರಿಗೆ ಧಾವಿಸಿ ಉತ್ತರ ಹುಡುಕಲು ಶುರು ಮಾಡಿದರು. ಇಡಿ ರಾತ್ರಿ ಅವರು ಉತ್ತರಕ್ಕಾಗಿ ಎಲ್ಲ ಪುಸ್ತಕಗಳನ್ನು ಹುಡುಕಿದರು. ಆದರೆ ಕೊನೆಗೆ ಮುಂಜಾನೆಯ ಹೊತ್ತಿಗೆ ಅವರಿಗೆ ಒಂದು ಪುಸ್ತಕದಲ್ಲಿ ಸರಿ ಉತ್ತರ ಸಿಕ್ಕಿತು. ಅವರಿಗೆ ತುಂಬ ಖುಶಿಯಾಯಿತು. ಸ್ಕೂಲಿಗೆ ಬಂದು ಮೇಡಂ ಮಕ್ಕಳಿಗೆ ಉತ್ತರದ ಬಗ್ಗೆ ಕೇಳಿದಾಗ ಮಕ್ಕಳು, “ಇಲ್ಲ ಮೇಡಂ ಉತ್ತರ ಗೊತ್ತಾಗಲಿಲ್ಲ, ನಮ್ಮ ಅಮ್ಮ ಅಪ್ಪ ಎಲ್ಲರನ್ನೂ ಕೇಳಿದೆವು ಯಾರಿಗೂ ಸರಿ ಉತ್ತರ ಗೊತ್ತಿಲ್ಲ”. ಮಕ್ಕಳು ನಿರಾಶೆಯಿಂದ ಉತ್ತರಿಸಿದವು.
ಮೇಡಂ ನಗು ನಗುತ್ತ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು, “ ನನಗೆ ಉತ್ತರ ಗೊತ್ತಿತ್ತು, ಆದರೆ ನೀವು ಉತ್ತರ ಹುಡುಕಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಭೂಮಿಯ ಭಾರ……….” ಮೇಡಂ ಮಕ್ಕಳಿಗೆ ಉತ್ತರ ಹೇಳಿದರು. ಆದರೆ ಕೂಡಲೇ ನಿನ್ನೆ ಈ ಪ್ರಶ್ನೆ ಕೇಳಿದ ಹುಡುಗ ಎದ್ದು ನಿಂತು ಮತ್ತೆ ಪ್ರಶ್ನೆ ಮಾಡಿದ, “ ಮೇಡಂ, ನೀವು ಹೇಳಿದ ಉತ್ತರ ಭೂಮಿಯ ಮೇಲಿನ ಜನರನ್ನ ಸೇರಿಸಿಯಾ ಅಥವಾ ಬಿಟ್ಟಾ”. ಮೇಡಂ ಗೆ ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಮತ್ತೆ ಪ್ರಶ್ನೆ ಮುಂದುವರೆಯಿತು.
ಆದ್ದರಿಂದ ಬುದ್ಧ ಹೇಳುತ್ತಾನೆ, “ಉತ್ತರಿಸುವುದು ಎನ್ನುವುದು ಆಲೋಚನೆ ಮಾಡಿ ಕಂಡುಕೊಳ್ಳುವ ವಿಷಯ ಅಲ್ಲ. ನೀವು ಪ್ರಶ್ನೆ ಕೇಳಿದಾಗ ನಾನು ಸುಮ್ಮನೇ ಆ ಪ್ರಶ್ನೆಯನ್ನು ಗಮನಿಸುತ್ತೇನೆ. ಮತ್ತು ಆಗ ಸತ್ಯ ಏನಿದೆಯೋ ಅದು ತಾನಾಗಿಯೇ ಅನಾವರಣಗೊಳ್ಳುತ್ತದೆ. ಉತ್ತರಿಸುವುದೆಂದರೆ ಯೋಚಿಸುವ ಮತ್ತು ಗಹನವಾಗಿ ಆಲೋಚನೆ ಮಾಡುವ ಸಂಗತಿ ಅಲ್ಲ. ಉತ್ತರ ಹೊರಬರುತ್ತಿರುವುದು ಯಾವುದಾದರೊಂದು ತಾರ್ಕಿಕ ಮೆಥಡ್ ನ ಮೂಲಕ ಅಲ್ಲ. ಉತ್ತರಿಸುವುದು ಎಂದರೆ ಸರಿಯಾದ ಕೇಂದ್ರದ ಮೇಲೆ ಫೋಕಸ್ ಮಾಡುವುದು ಅಷ್ಟೇ.
ಬುದ್ಧ ಟಾರ್ಚ್ ಇದ್ದ ಹಾಗೆ. ಯಾವಾಗ ಆ ಟಾರ್ಚ್ ಮೂವ್ ಆಗುತ್ತದೆಯೋ ಆಗ ಉತ್ತರಗಳು ಕಾಣಿಸುತ್ತ ಹೋಗುತ್ತವೆ. ಪ್ರಶ್ನೆ ಏನೇ ಇರಲಿ, ಅದು ಪಾಯಿಂಟ್ ಅಲ್ಲ. ಬುದ್ಧನ ಬೆಳಕು ಆ ಪ್ರಶ್ನೆಯ ಮೇಲೆ ಬಿದ್ದಾಗ ಉತ್ತರ ತೆರೆದುಕೊಳ್ಳುತ್ತದೆ. ಉತ್ತರ ಅನಾವರಣವಾಗೋದು ಆ ಬೆಳಕಿನ ಕಾರಣವಾಗಿ. ಇದು ಬಹಳ ಸರಳವಾದ ಪ್ರಕ್ರಿಯೆ.
ಯಾರಾದರೂ ನಿಮ್ಮನ್ನು ಪ್ರಶ್ನೆ ಮಾಡಿದಾಗ, ಉತ್ತರಿಸಲು ನೀವು ಥಿಂಕ್ ಮಾಡಬೇಕಾಗುತ್ತದೆ. ಆದರೆ ನಿಮ್ಮ ಬಳಿ ಉತ್ತರವಿರದಿದ್ದಾಗ ನೀವು ಏನೂಂತ ಥಿಂಕ್ ಮಾಡ್ತೀರಿ? ಉತ್ತರ ನಿಮಗೆ ಗೊತ್ತಿದ್ದರೆ, ನಿಮಗೆ ಥಿಂಕ್ ಮಾಡುವ ಅವಶ್ಯಕತೆ ಇಲ್ಲ, ಗೊತ್ತಿಲ್ಲದಿದ್ದರೆ ಯಾವುದರ ಬಗ್ಗೆ ಥಿಂಕ್ ಮಾಡುತ್ತೀರಿ? ನೀವು ನಿಮ್ಮ ನೆನಪಿನ ಕೋಶದಲ್ಲಿ ಹುಡುಕಾಡುತ್ತೀರಿ. ಅಲ್ಲಿ ನಿಮಗೆ ಹಲವು ಸುಳಿವುಗಳು ಸಿಗುತ್ತವೆ. ಆ ಸುಳಿವುಗಳು ಪ್ರಶ್ನೆಗೆ ತಾಳೆಯಾಗುತ್ತವೆಯಾ ಎಂದು ಗೊತ್ತುಮಾಡಿಕೊಂಡು ನೀವು ಉತ್ತರಕ್ಕೆ ಜೋಡಿಸುವ ಪ್ರಯತ್ನ ಮಾಡುತ್ತೀರಿ. ಅಕಸ್ಮಾತ್ ನಿಮಗೆ ಸರಿ ಉತ್ತರ ಗೊತ್ತಿದ್ದರೆ ನೀವು ಥಟ್ ಅಂತ ಉತ್ತರಿಸುತ್ತಿದ್ದೀರಿ.
SOurce : Osho / Yoga : Alpha & the Omega

