ಸಲೀಮ್ ಖಾನ್ (ಸಲೀಮ್ ಜಾವೇದ್ ಖ್ಯಾತಿಯ) ಹೇಳಿದ ಕಥೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಒಂದು ದಿನ ಲಕ್ಷ್ಮಿ, ಭಗವಾನ್ ವಿಷ್ಣುವಿನ ಬಳಿ ಹೋಗಿ ಬೇಡಿಕೊಳ್ಳುತ್ತಾಳೆ, “ ನಾನು ಇಷ್ಟೆಲ್ಲ ನಿನ್ನ ಸೇವೆ ಮಾಡಿದ್ದೇನೆ. ನನಗೊಂದು ವರ ಕೊಡು. ಜನ ನನ್ನಿಂದ ಏನು ಬೇಡುತ್ತಾರೋ, ನಾನು ಅದನ್ನ ಅವರಿಗೆ ಕೊಡುವಂತಾಗಬೇಕು”.
ಲಕ್ಷ್ಮಿಯ ಮಾತಿಗೆ ಒಪ್ಪಿ ವಿಷ್ಣು ಅವಳಿಗೆ ಜನ ಬೇಡಿದ್ದನ್ನು ಕೊಡುವಂಥ ವರ ಕೊಡುತ್ತಾನೆ. ಆದರೆ ವಿಷ್ಣು ಒಂದು ಕಂಡಿಷನ್ ಹಾಕುತ್ತಾನೆ, “ ನೀನು ಯಾರಿಗೆ ಬೇಕಾದರೂ ವರ ಕೊಡಬಹುದು ಆದರೆ ಅದನ್ನು ವಾಪಸ್ ತೆಗೆದುಕೊಳ್ಳುವ ಅಧಿಕಾರ ನನಗೆ ಇದೆ”. ಲಕ್ಷ್ಮಿ ಈ ಕಂಡಿಷನ್ ಗೆ ಒಪ್ಪಿ ವಿಷ್ಣುವಿನಿಂದ ವರ ಸ್ವೀಕರಿಸುತ್ತಾಳೆ.
ವಿಷ್ಣು, ಲಕ್ಷ್ಮಿಗೆ ವರ ಕೊಟ್ಟ ಸುದ್ದಿ ಅದು ಹೇಗೋ ಸರಸ್ವತಿಗೆ ಮುಟ್ಟುತ್ತದೆ. ಅವಳು, ತನಗೂ ಇಂಥ ವರ ಬೇಕೆಂದು ವಿಷ್ಣುವನ್ನು ಪ್ರಾರ್ಥಿಸುತ್ತಾಳೆ. ವಿಷ್ಣು ಅವಳ ಮಾತಿಗೆ ಒಪ್ಪಿ ಅವಳಿಗೂ ಅದೇ ವರ ಕೊಡುತ್ತಾನೆ ಆದರೆ ಇನ್ನೊಂದು ಕಂಡಿಷನ್ ಹಾಕುತ್ತಾನೆ. “ ಜನ ಕೇಳಿದ್ದನ್ನ ಕೊಡುವ ವರ ನಿನಗೆ ಕೊಡುತ್ತೇನೆ ಆದರೆ ಅದನ್ನ ವಾಪಸ್ ಪಡೆಯುವ ಅಧಿಕಾರ ನನಗೆ ಇರುವುದಿಲ್ಲ”.
ಹೀಗೆ ಸರಸ್ವತಿಯನ್ನು ಬೇಡಿ ವರ ಪಡೆದುಕೊಂಡವರು ರಫಿ, ಕಿಶೋರ್ ಕುಮಾರ್ ಮತ್ತು ಮುಕೇಶ್. ಈ ವರ ವಾಪಸ್ ಪಡೆಯುವ ಅಧಿಕಾರ ಸ್ವತಃ ಆ ದೇವರಿಗೂ ಇಲ್ಲ. ಆದರೆ ಲಕ್ಷ್ಮಿಯಿಂದ ವರ ಪಡೆದುಕೊಂಡು ಶ್ರೀಮಂತಿಕೆ ಗಳಿಸಿದ ಎಷ್ಟೋ ಜನರ ಶ್ರೀಮಂತಿಕೆಯನ್ನ ದೇವರು ವಾಪಸ್ ಪಡೆದುಕೊಂಡು ಬಿಟ್ಟಿದ್ದಾನೆ.

