ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಅವತ್ತು ಸಾಯಂಕಾಲ ಪಟ್ಟಣದ ಮಹಾದ್ವಾರದ ಹತ್ತಿರ ಇಬ್ಬರು ಪತಿತ ದೇವತೆಗಳು, (ಅಂದರೆ ದೇವತೆಗಳ ಸ್ಥಾನ ಕಳೆದುಕೊಂಡು ಸ್ವರ್ಗದಿಂದ ಬಹಿಷ್ಕಾರಕ್ಕೆ ಒಳಗಾಗಿ ಭೂಮಿಯ ಮೇಲೆ ಡ್ಯೂಟಿಗೆ ಬಂದ ದೇವತೆಗಳು) ಭೆಟ್ಟಿಯಾದರು. ಕಷ್ಟ ಸುಖ ಮಾತಾಡಿಕೊಂಡರು.
ʻನೀನೇನು ಮಾಡುತ್ತಿದ್ದೀಯ ಈಗ? ಏನು ಕೆಲಸ ಕೊಟ್ಟಿದಾರೆ ನಿನಗೆ?ʼ ಅಂತ ಒಬ್ಬ ದೇವತೆ ಕೇಳಿದ.
ʻಅಗೋ ಆ ಕಣಿವೆಯಲ್ಲಿ ಒಬ್ಬ ಪತಿತ ಇದ್ದಾನೆ. ಮಹಾ ಪಾಪಿ. ಎಲ್ಲಾ ಥರದ ಕೆಲಸ ಮಾಡಿದಾನೆ. ಅಬ್ಬಾ ಅಂಥವನನ್ನ ಕಾಪಾಡೋ ಕೆಲಸ ಬಹಳ ಕಷ್ಟದ್ದು,ʼ ಅಂದ ಇನ್ನೊಬ್ಬ ದೇವತೆ.
ಅದನ್ನು ಕೇಳಿದ ಮೊದಲ ದೇವತೆ, ʻಬಹಾಳ ಸುಲಾಭದ ಕೆಲಸ. ನಾನು ಬಹಾಳ ಜನ ಪಾಪಿಗಳನ್ನ ನೋಡಿದೇನೆ. ಎಷ್ಟೋ ಸಲಾ ಅವರ ಜವಾಬ್ದಾರಿ ಹೊತ್ತಿದೇನೆ. ನನಗೆ ಹೋಗು ಯಾರೋ ಊರಾಚೆ ಇರೋ ಕಾಡಲ್ಲಿ ವಾಸ ಮಾಡೋ ಸಂತನನ್ನ ನೋಡಿಕೋ ಅಂದಿದಾರೆ. ಸಂತರನ್ನ ನೋಡಿಕೊಳ್ಳೋದು ಎಷ್ಟು ಕಷ್ಟದ ಕೆಲಸಾ ಗೊತ್ತಾ? ಮತ್ತೆ ತುಂಬಾ ಸೂಕ್ಷ್ಮಾ ಕೂಡಾ,ʼ ಅಂದ.
ಮೊದಲನೆಯ ದೇವತೆಗೆ ಸಿಟ್ಟು ಬಂತು. ʻಸಂತರನ್ನ ನೋಡಿಕೊಳ್ಳೋದು ಏನು ಮಹಾ ಕಷ್ಟ? ಇಲ್ಲದ್ದೆಲ್ಲ ಊಹೆ ಮಾಡಿಕೊಂಡಿದೀಯ, ಅಷ್ಟೇ,ʼ ಅಂದ.
ʻಎಲಾ! ಎಷ್ಟು ಸೊಕ್ಕಿನಿಂದ ಮಾತಾಡುತ್ತೀಯಲ್ಲಾ! ನನ್ನದ ಊಹೆ ಅಲ್ಲವೇ ಅಲ್ಲ, ಸತ್ಯ ಹೇಳತಿದೀನಿ. ಪಾಪಿಗಳನ್ನ ನೋಡಿಕೊಳ್ಳೋದು ಕಷ್ಟ ಅನ್ನೋದು ನಿನ್ನ ಸುಳ್ಳು ಕಲ್ಪನೆ,ʼ ಅಂದ ಎರಡನೆಯ ದೇವತೆ.
ಇಬ್ಬರಿಗೂ ಜಗಳ ಹತ್ತಿತು. ಮಾತಿನಲ್ಲಿ ಬೈದಾಡಿದರು. ಕೈ ಕೈ ಮಿಲಾಯಿಸಿದರು. ಒಬ್ಬರು ಇನ್ನೊಬ್ಬರ ರೆಕ್ಕೆ ಹಿಡಿದು ಎಳೆದಾಡಿದರು.
ಹಾಗೆ ಜಗಳ ನಡೆದಿರುವಾಗ ದೇವತೆಗಳ ಮುಖ್ಯಸ್ಥ ಗಿಬ್ರಾಲ ಬಂದ. ಅವರನ್ನ ತಡೆದು ನಿಲ್ಲಿಸಿದ. ʻಏನಿದು ಜಗಳ? ಯಾವ ವಿಚಾರಕ್ಕೆ ಹೀಗೆ ಕಿತ್ತಾಟ? ರಕ್ಷಕ ದೇವತೆಗಳು ಹೀಗೆ ಊರ ಬಾಗಿಲಲ್ಲಿ ಕಿತ್ತಾಡುವುದು ಅವಮಾನ ಅಂತ ಗೊತ್ತಿಲ್ಲವಾ? ಏನಾಯಿತು ಹೇಳಿ,ʼ ಅಂದ.
ಇಬ್ಬರೂ ದೇವತೆಗಳು ಒಟ್ಟಿಗೆ ಮಾತಾಡುತ್ತಾ ನನಗೆ ಅತಿ ಕಷ್ಟದ ಕೆಲಸ ಕೊಟ್ಟಿದೀರಿ, ನನ್ನ ಸೀನಿಯಾರಿಟಿಗೆ ಸುಲಭದ ಕೆಲಸ ಸಿಗಬೇಕಿತ್ತು ಅನ್ನುತ್ತ ಕೂಗಾಡಿದರು.
ಗಿಬ್ರಾಲ ಸ್ವಲ್ಪ ಹೊತ್ತು ಯೋಚನೆ ಮಾಡಿದ. ಆಮೇಲೆ, ʻಗೆಳೆಯರೇ ನಿಮ್ಮಿಬ್ಬರಲ್ಲಿ ಯಾರು ಹೆಚ್ಚು ಹಿರಿಯರು, ಯಾರಿಗೆ ಸುಲಭದ ಕೆಲಸ ಕೊಡಬೇಕಿತ್ತು ತೀರ್ಮಾನ ಹೇಳಲಾರೆ. ಆದರೆ ನನಗಿರುವ ಅಧಿಕಾರ ಬಳಸಿಕೊಂಡು, ರಕ್ಷಕ ದೇವತೆಗಳ ಮರ್ಯಾದೆ ಕಾಪಾಡುವ ಕಾರಣಕ್ಕೆ ಹೀಗೆ ಮಾಡುತ್ತೇನೆ. ಇನ್ನು ಮೇಲೆ ಮೊದಲ ದೇವತೆಯ ಕೆಲಸವನ್ನು ಎರಡನೆಯ ದೇವತೆ ಎರಡನೆಯ ದೇವತೆಯ ಕೆಲಸವನ್ನು ಮೊದಲ ದೇವತೆ ಮಾಡತಕ್ಕದ್ದು, ಇನ್ನು ಕೆಲಸಕ್ಕೆ ಹೊರಡಿ,ʼ ಅಂದ.
ಇಬ್ಬರೂ ದೇವತೆಗಳು ತಮ್ಮ ದಾರಿ ಹಿಡಿದು ಹೊರಟರು. ಹೋಗುತ್ತ ಮತ್ತೂ ಹೆಚ್ಚು ಸಿಟ್ಟಿನಿಂದ ಮತ್ತೆ ಮತ್ತೆ ತಿರುಗಿ ತಿರುಗಿ ಹಿರಿಯ ದೇವತೆ ಗಿಬ್ರಾಲನನ್ನು ದುರುಗುಟ್ಟಿ ನೋಡುತ್ತಾ ಹೋದರು. ಇಬ್ಬರೂ ʻಈ ರಕ್ಷಕ ದೇವತೆಗಳ ಕೆಲಸ ಯಾರಿಗೂ ಬೇಡಪ್ಪಾ. ದಿನಾ ದಿನಾ ಹೆಚ್ಚು ಕಷ್ಟದ ಕೆಲಸಾನೇ ಕೊಡತಾರೆ,ʼ ಅಂತ ಮನಸಿನಲ್ಲೇ ಅಂದುಕೊಳ್ಳುತ್ತಿದ್ದರು.
ಗಿಬ್ರಾಲ್ ಅಲ್ಲಿ ನಿಂತುಕೊಂಡಿದ್ದವನು, ʻದೇವತೆಗಳ ಮುಖ್ಯಸ್ಥ ಆಗುವ ಪಾಡು ಯಾವನಿಗೆ ಬೇಕು. ಈ ರಕ್ಷಕ ದೇವತೆಗಳ ಮೇಲೆ ಕಣ್ಣಿಟ್ಟಿರಲೇಬೇಕಲ್ಲಾ,ʼ ಅಂದುಕೊಳ್ಳುತ್ತಿದ್ದ.

