ಪ್ರತಿಧ್ವನಿಯ ಜಾಗ ( An Echoing place) : ಓಶೋ 365 Day#4

ಈ ಜಗತ್ತು ಒಂದು ಪ್ರತಿಧ್ವನಿಯ ಜಾಗ. ನಾವು ಕೋಪವನ್ನು ಹೊರಹಾಕಿದಾಗ. ನಮ್ಮನ್ನು ವಾಪಸ್ ಬಂದು ತಲುಪುವುದು ಕೋಪವೇ ; ನಾವು ಪ್ರೀತಿಯನ್ನು ಹಂಚಿಕೊಂಡಾಗ, ಪ್ರೀತಿ ವಾಪಸ್ ಬಂದು ನಮ್ಮನ್ನು ಆವರಿಸಿಕೊಳ್ಳುತ್ತದೆ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರೀತಿ ಯಾವ ಬೇಡಿಕೆಯನ್ನೂ ಮುಂದಿಡಬಾರದು ಇಲ್ಲವಾದರೆ ಅದು ತನ್ನ ರೆಕ್ಕೆಗಳನ್ನು ಕಳೆದುಕೊಂಡುಬಿಡುತ್ತದೆ, ಆಗ ಪ್ರೀತಿಗೆ ಹಾರುವುದು ಸಾಧ್ಯವಾಗುವುದಿಲ್ಲ. ಆಗ ಅದು ನೆಲದೊಳಗೆ ಸಿಕ್ಕಿಹಾಕಿಕೊಂಡು ಕಾಮದ ಸ್ವಭಾವವನ್ನು ಧರಿಸಿ ಬದುಕಿಗೆ ಅಪಾರ ಸಂಕಟವನ್ನೂ, ದುಗುಡವನ್ನೂ ತಂದುಕೊಡುತ್ತದೆ. ಪ್ರೀತಿ ಎಲ್ಲ ಕಂಡಿಷನ್ ಗಳಿಂದ ಹೊರತಾದದ್ದು, ಯಾರೂ ಪ್ರೀತಿಯಿಂದ ಏನನ್ನೂ ಬಯಸಬಾರದು. ಪ್ರೀತಿ  ಇರುವುದು ಪ್ರೀತಿಯನ್ನು ಹರಡುವುದಕ್ಕಾಗಿಯೇ ಹೊರತು  ಯಾವ ಬಹುಮಾನಕ್ಕಾಗಿ ಅಲ್ಲ, ಯಾವ ಫಲಿತಾಂಶವನ್ನೂ ಲಭ್ಯ ಮಾಡುವುದಕ್ಕಾಗಿ ಅಲ್ಲ. ಪ್ರೀತಿ ಯಾವುದಾದರೂ ಉದ್ದೇಶವನ್ನೂ ಹೊಂದಿದ್ದರೆ, ಆಗ ಅದು ಆಕಾಶವಾಗಿ ಉಳಿಯುವುದಿಲ್ಲ. ಆಗ ಪ್ರೀತಿ, ಉದ್ದೇಶಕ್ಕೆ ಬದ್ಧವಾಗಿರಬೇಕಾಗುತ್ತದೆ, ಆಗ ಉದ್ದೇಶವೇ ಪ್ರೀತಿಯ ವ್ಯಾಖ್ಯಾನವಾಗುತ್ತದೆ, ಉದ್ದೇಶವೇ ಪ್ರೀತಿಯ ಮಿತಿಯಾಗುತ್ತದೆ. ಉದ್ದೇಶರಹಿತ ಪ್ರೀತಿಗೆ ಯಾವ ಗಡಿಗಳೂ ಇಲ್ಲ : ಆಗ ಅದು ಶುದ್ಧ ಉಲ್ಲಾಸ, ಶುದ್ಧ ಸಮೃದ್ಧಿ, ಹೃದಯದ ಶುದ್ಧ  ಪರಿಮಳ.

ಪ್ರೀತಿಯಲ್ಲಿ, ಫಲಿತಾಂಶದ ಕುರಿತ ಬಯಕೆಗಳು ಇರಬಾರದು ಎಂದ ಮಾತ್ರಕ್ಕೆ, ಪ್ರೀತಿಯಲ್ಲಿ ಫಲಿತಾಂಶಗಳು ಇರುವುದಿಲ್ಲ ಎಂಬರ್ಥವಲ್ಲ ; ಖಂಡಿತವಾಗಿ ರಿಸಲ್ಟಗಳು ಸಾಧ್ಯ, ಸಾವಿರ ಪಟ್ಟು ರಿಸಲ್ಟಗಳು ಸಾಧ್ಯ, ಏಕೆಂದರೆ ನಾವು ಜಗತ್ತಿಗೆ ಏನು ಕೊಡುತ್ತೇವೆಯೋ ಅದು ಹಲವು ಪಟ್ಟು ಹೆಚ್ಚಾಗಿ ರಿಬೌಂಡ್ ಆಗಿ ಬಂದು ನಮ್ಮನ್ನು ತಲುಪುತ್ತದೆ. ಈ ಜಗತ್ತು ಒಂದು ಪ್ರತಿಧ್ವನಿಯ ಜಾಗ. ನಾವು ಕೋಪವನ್ನು ಹೊರಹಾಕಿದಾಗ, ನಮ್ಮನ್ನು ವಾಪಸ್ ಬಂದು ತಲುಪುವುದು ಕೋಪವೇ ; ನಾವು ಪ್ರೀತಿಯನ್ನು ಹಂಚಿಕೊಂಡಾಗ, ಪ್ರೀತಿ ವಾಪಸ್ ಬಂದು ನಮ್ಮನ್ನು ಆವರಿಸಿಕೊಳ್ಳುತ್ತದೆ. ಆದರೆ ಇದು ಸಹಜ ವಿದ್ಯಮಾನ ; ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಇದನ್ನು ಪೂರ್ತಿಯಾಗಿ ನಂಬಬಹುದು, ಇದು ತನ್ನಿಂದ ತಾನೇ ಘಟಿಸುವ ವಿದ್ಯಮಾನ. ಇದು ನಿಯತಿಯ ನಿಯಮ : ನೀವು ಏನನ್ನ ಬಿತ್ತುವಿರೋ ಅದನ್ನೇ ಬೆಳೆಯುವಿರಿ; ನೀವು ಏನನ್ನ ಕೊಡುವಿರೋ ಅದನ್ನೇ ಪಡೆಯುವಿರಿ. ಆದ್ದರಿಂದ ಈ ಕುರಿತು ಹೆಚ್ಚು ವಿಚಾರ ಮಾಡುವ ಅಗತ್ಯವಿಲ್ಲ, ಇದು ಸ್ವಯಂಚಾಲಿತ. ದ್ವೇಷ ಮಾಡುವಿರಾದರೆ, ನೀವು ದ್ವೇಷವನ್ನೇ ವಾಪಸ್ ಪಡೆಯುವಿರಿ. ಪ್ರೀತಿ ಮಾಡುವಿರಾದರೆ, ಪ್ರೀತಿಯೇ ವಾಪಸ್ ಬಂದು ನಿಮ್ಮನ್ನು ತಲುಪುವುದು.


ನೆನ್ನೆಯ ಕಂತು ಇಲ್ಲಿ ಓದಿ : https://aralimara.com/2025/01/21/osho-445/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ