ನಗು ( Laughter) : ಓಶೋ 365 Day#7

ನಗಲು ಕಾರಣಗಳಿಗೋಸ್ಕರ ಯಾಕೆ ಕಾಯಬೇಕು?  ಬದುಕು ತಾನೇ ಒಂದು ಸಾಕಷ್ಟು ಕಾರಣ ನಗೆಯ ಹುಟ್ಟಿಸಲು. ಬದುಕು ಎಷ್ಟು ಅಸಂಗತ, ಎಷ್ಟು ಹಾಸ್ಯಾಸ್ಪದ. ಬದುಕು ಎಷ್ಟು ಸುಂದರ, ಎಷ್ಟು ಅದ್ಭುತ. ಬದುಕು ಎಲ್ಲವನ್ನೂ ಒಳಗೊಂಡ ಹಂದರ. ಬದುಕು ಒಂದು ಕಾಸ್ಮಿಕ್ ಜೋಕ್ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ನೀವು ಸಾಧ್ಯಮಾಡಿಕೊಟ್ಟರೆ ನಗು, ಜಗತ್ತಿನಲ್ಲಿ ಬಹಳ ಸಹಜವಾದ, ಸುಲಭವಾದ ಸಂಗತಿ ಆದರೆ ಅದು ಸಾಕಷ್ಟು ಕಠಿಣವಾಗಿ ಬಿಟ್ಟಿದೆ. ಜನ ಬಹಳ ಅಪರೂಪಕ್ಕೆ ನಗುತ್ತಾರೆ ಮತ್ತು ಅವರು ನಕ್ಕಾಗಲೂ ಬಹಳಷ್ಟು ಬಾರಿ ಅದು ನಿಜವಾದ ನಗು ಆಗಿರುವುದಿಲ್ಲ. ಜನ ಯಾರದೋ ಭಿಡೆಗೆ ಬಿದ್ದವರಂತೆ, ಯಾವದೋ ಕರ್ತವ್ಯ ಪೂರೈಸುವವರಂತೆ ನಗುತ್ತಾರೆ. ನಗು ಒಂದು ಉಲ್ಲಾಸ, ನಗು ಒಂದು ವಿನೋದ. ಯಾರದೋ ಮನ ಒಲಿಸಲು ನೀವು ನಗುತ್ತಿಲ್ಲ.

ಯಾರನ್ನೋ ಖುಷಿಪಡಿಸಲು ನೀವು ನಗಬಾರದು, ಏಕೆಂದರೆ ನೀವು ಖುಷಿಯಾಗಿರದ ಹೊರತು ಇನ್ನೊಬ್ಬರನ್ನು ಖುಶಿಪಡಿಸುವುದು ನಿಮಗೆ ಸಾಧ್ಯವಿಲ್ಲ. ನೀವು ಸುಮ್ಮನೇ ಮನಸ್ಸು ಬಿಚ್ಚಿ ನಿಮಗಾಗಿ ನಗಬೇಕು, ನಗಲು ಯಾವ ಕಾರಣಗಳಿಗೂ ಕಾಯಬಾರದು. ಯಾವುದೇ ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸುವಿರಾದರೆ, ನೀವು ನಗುವುದನ್ನು ನಿಲ್ಲಿಸುವುದೇ ಇಲ್ಲ. ಎಲ್ಲವೂ, ನಗಲು ಪರಿಪೂರ್ಣ, ನಗಲು ಯಾವ ಕೊರತೆಯೂ ಇಲ್ಲ, ಆದರೆ ನಾವು ನಗುವಿಗೆ ನಮ್ಮ ಮೂಲಕ ಅನುವು ಮಾಡಿಕೊಡುತ್ತಿಲ್ಲ.  ನಗುವಿನ ವಿಷಯದಲ್ಲಿ, ಪ್ರೀತಿಯ ವಿಷಯದಲ್ಲಿ, ಬದುಕುವ ವಿಷಯದಲ್ಲಿ  ನಾವು ಬಹಳ ಜಿಪುಣರಾಗಿದ್ದೇವೆ. ಈ ಜಿಪುಣತನವನ್ನು ಬಿಟ್ಟುಬಿಡುವುದು ಸಾಧ್ಯ ಎನ್ನುವುದು ನಿಮಗೆ ಮನವರಿಕೆಯಾಗಿಬಿಟ್ಟರೆ, ನೀವು ಒಂದು ಹೊಸ ಆಯಾಮವನ್ನು ಪ್ರವೇಶ ಮಾಡುತ್ತೀರ. ನಗು ಒಂದು ನಿಜವಾದ ಧರ್ಮ, ಬಾಕಿ ಎಲ್ಲವೂ ಕೇವಲ ಮೆಟಾಫಿಸಿಕ್ಸ್.

ಒಂದು ದಿನ ಮಾಸ್ಟರ್ ಸುಝುಕಿ ರೋಶಿ ತಮ್ಮ ಶಿಷ್ಯರನ್ನೆಲ್ಲ ಕರೆದುಕೊಂಡು ಮಾವಿನ ತೋಟಕ್ಕೆ ಹೋದರು. ಅದು ಮಾವಿನ ಹಣ್ಣಿನ ಸೀಸನ್ ಆದ್ದರಿಂದ ಮಾವಿನ ಮರಗಳ ತುಂಬ ಭರ್ತಿ ಮಾವಿನ ಹಣ್ಣುಗಳು ತುಂಬಿದ್ದವು.

ಝೆನ್ ಕಲಿಯುತ್ತಿದ್ದ ಶಿಷ್ಯರೆಲ್ಲ ಅತ್ಯಂತ ಶಿಸ್ತಿನಿಂದ, ಗಂಭೀರವಾಗಿ ಮಾವಿನ ಹಣ್ಣುಗಳನ್ನ ಕಿತ್ತು ಬಾಕ್ಸ್ ಗೆ ತುಂಬಿ ಪ್ಯಾಕ್ ಮಾಡತೊಡಗಿದರು.

ಮಾಸ್ಟರ್ ರೋಶಿ ಗೆ ಇದೆಲ್ಲ ಏನೋ ಅಸಹಜ ಅನ್ನಿಸತೊಡಗಿತು.

ಕೊನೆಗೆ ಮಾಸ್ಟರ್ ರೋಶಿ ಸ್ವತಃ ತಾವೇ ಮರ ಏರಿ, ಹಣ್ಣು ಕಿತ್ತು ಎಲ್ಲ ಶಿಷ್ಯರ ಮೇಲೆ ಎಸೆಯುತ್ತ, ಜೋರಾಗಿ ಕೇಕೆ ಹಾಕಿ ಕೂಗಾಡಲು ಶುರು ಮಾಡಿದರು.

ಅಲ್ಲಿಯ ತನಕ, ಶಿಷ್ಯರಿಗೆ, ತಾವು ಪೂರ್ತಿ ಝೆನ್ ಮರೆತದ್ದು, ಮರೆತೇ ಹೋಗಿತ್ತು.


ನೆನ್ನೆಯದು ಇಲ್ಲಿ ಓದಿ : https://aralimara.com/2025/01/24/osho-448/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ