ಸುಖದ ಪರಾಕಾಷ್ಠತೆ ( Orgasm ): ಓಶೋ 365 Day#11

ಕೆಲವು ಕ್ಷಣಗಳುರುತ್ತವೆ, ಕೆಲವೇ ಕೆಲವು ಕ್ಷಣಗಳು, ಆಗ ನೀವು ಸಂಪೂರ್ಣ ಉನ್ಮತ್ತ ಸ್ಥಿತಿಯಲ್ಲಿರುವುದರಿಂದ ಅಹಂ ಮಾಯವಾಗುತ್ತದೆ. ಕೆಲವೊಮ್ಮೆ ಪ್ರೇಮದಲ್ಲಿ ಹೀಗಾಗುತ್ತದೆ ; ಇನ್ನೂ ಕೆಲವೊಮ್ಮೆ ಸುಖದ ಪರಾಕಾಷ್ಠತೆ ಯ ಗಳಿಗೆಗಳಲ್ಲಿ (orgasm) ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ತೀವ್ರ ಸುಖದ ಪರಾಕಾಷ್ಠತೆಯ  ಗಳಿಗೆಯಲ್ಲಿ ನಿಮ್ಮ ಇತಿಹಾಸ ಮಾಯವಾಗುತ್ತದೆ, ನಿಮ್ಮ ಭೂತಕಾಲ ಹಿಂದೆ ಹೋಗಿ, ಹೋಗಿ, ಕೊನೆಗೊಮ್ಮೆ ಮಾಯವಾಗಿಬಿಡುತ್ತದೆ. ಸುಖೋತ್ಕರ್ಷದ ಗಳಿಗೆಯಲ್ಲಿ ನಿಮಗೆ ಇತಿಹಾಸವಿಲ್ಲ, ಭೂತಕಾಲವಿಲ್ಲ, ಮೈಂಡ್ ಕೂಡ ಇಲ್ಲ, ನಿಮಗೆ  ಯಾವುದೇ ಜೀವನ ಚರಿತ್ರೆಯೂ ಇಲ್ಲ. ನೀವು ಆ ಕ್ಷಣದಲ್ಲಿ ಇರುತ್ತೀರಿ ಇಡಿಯಾಗಿ. ನಿಮಗೆ, ನೀವು ಯಾರು ಎನ್ನುವುದು ಗೊತ್ತಿಲ್ಲ, ನಿಮಗೆ ಯಾವ ಐಡೆಂಟಿಟಿ ಇಲ್ಲ. ಅಂಥ ಕ್ಷಣಗಳಲ್ಲಿ ಅಹಂ ಕೆಲಸ ಮಾಡುವುದಿಲ್ಲ. ಆದ್ದರಿಂದಲೇ ನೀವು ಆ ಕ್ಷಣಗಳಲ್ಲಿ ಸುಖದ ಪರಾಕಾಷ್ಠತೆಯನ್ನು ತಲುಪುತ್ತೀರಿ, ಸುಖದ ತಾಜಾತನವನ್ನು ಅನುಭವಿಸುತ್ತೀರಿ, ಅದು ಮತ್ತೆ ಮತ್ತೆ ನೀಡುವ ಹೊಸತನವನ್ನು ಆಸ್ವಾದ ಮಾಡುತ್ತೀರಿ. ಈ ಕಾರಣವಾಗಿಯೇ ನೀವು ಆಗ ಸುಮ್ಮನಾಗಿಬಿಡುತ್ತೀರಿ, ಪ್ರಶಾಂತವಾಗಿಬಿಡುತ್ತೀರಿ, ರಿಲ್ಯಾಕ್ಸ್ ಆಗಿಬಿಡುತ್ತೀರಿ, ತೃಪ್ತರಾಗಿಬಿಡುತ್ತೀರಿ. ಆದರೆ ಮತ್ತೆ ಅಹಂ ಪ್ರವೇಶ ಮಾಡುತ್ತದೆ, ಭೂತ ಆಗಮಿಸಿ ವರ್ತಮಾನವನ್ನು ಆಕ್ರಮಿಸಿಕೊಳ್ಳುತ್ತದೆ. ಮತ್ತೆ ಇತಿಹಾಸ ತನ್ನ ಕೆಲಸ ಆರಂಭಿಸುತ್ತದೆ ಮತ್ತು ನೀವು ಕ್ರಿಯೆಯಿಂದ ವಿಮುಖರಾಗಿಬಿಡುತ್ತೀರಿ. ಅಹಂ ಎನ್ನುವುದು ನಿಮ್ಮ ಇತಿಹಾಸ, ಅದು ವಾಸ್ತವವಲ್ಲ. ಮತ್ತು ಈ ಅಹಂ ನಿಮ್ಮ ಬದ್ಧ ವೈರಿ.

ಎಲ್ಲ ಮನುಷ್ಯರೂ ತಮ್ಮ ಬದುಕಿನಲ್ಲಿ ಹಲವಾರು ಬಾರಿ ಈ ಕಾರ್ನರ್ ನ ಸುತ್ತ ಮುತ್ತ ಸುಳಿದಾಡುತ್ತಾರೆ, ಏಕೆಂದರೆ ಬದುಕು ಚಲಿಸುವುದು ವೃತ್ತಾಕಾರದಲ್ಲಿ. ಮತ್ತೆ ಮತ್ತೆ ನಾವು ಈ ಬಿಂದುವನ್ನು ಸಮೀಪಿಸುತ್ತೇವೆಯಾದರೂ ಭಯದ ಕಾರಣವಾಗಿ ದೂರ ಹೋಗಿಬಿಡುತ್ತೇವೆ. Otherwise ಈ ಅಹಂ ಎನ್ನುವುದು ಒಂದು ಮಿಥ್ಯೆ. ವಾಸ್ತವದಲ್ಲಿ ಅಹಂ ನ ಜೀವಂತವಾಗಿಡುವುದಕ್ಕಿಂತ ಸಾಯಲು ಬಿಡುವುದು ಬಹಳ ಸುಲಭ. ಆದರೆ ನಾವು ಅಹಂ ನ ಜೀವಂತವಾಗಿಟ್ಟುಕೊಂಡು ಇದೇ ಸುಲಭ ಎಂದುಕೊಂಡುಬಿಡುತ್ತೇವೆ.

ಒಮ್ಮೆ ಒಬ್ಬ ಸಾಧಕ, ಸೂಫಿ ಅನುಭಾವಿ  ಶೇಖ್ ಫರೀದ್ ನ ಬಳಿ ಬಂದು ಕೇಳಿಕೊಂಡ,

“ ನನ್ನನ್ನು ಕಟ್ಟಿಹಾಕಿರುವ ಬಂಧನಗಳಿಂದ, ಸಿದ್ಧಾಂತಗಳಿಂದ, ಪೂರ್ವಾಗ್ರಹಗಳಿಂದ, ಅಹಂ ನಿಂದ ಬಿಡಿಸಿಕೊಳ್ಳುವುದು ಹೇಗೆ? “

ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಫರೀದ್ ಓಡಿ ಹೋಗಿ ಹತ್ತಿರದ ಕಂಬವೊಂದನ್ನ ಗಟ್ಟಿಯಾಗಿ ಹಿಡಿದುಕೊಂಡು ಕೂಗತೊಡಗಿದ,

“ ಯಾರಾದರೂ ನನ್ನನ್ನ ಈ ಕಂಬದಿಂದ ಬಿಡಿಸಿ “

ಫರೀದ್ ನ ಕೂಗಾಟ ಕೇಳುತ್ತಿದ್ದಂತೆಯೇ ಸುತ್ತ ಮುತ್ತಲಿನ ಜನ ಅಲ್ಲಿ ಬಂದು ಸೇರಿದರು. ಅವರಲ್ಲಿ ಹಿರಿಯ ಮನುಷ್ಯನೊಬ್ಬ ಫರೀದ್ ನ ಗದರಿಸಿದ.

“ ಫರೀದ್, ನಿನಗೆ ಹುಚ್ಚು ಹಿಡಿದಿದೆಯಾ? ಕಂಬ ಹಿಡಿದುಕೊಂಡಿರೋದು ನೀನು, ನಿನ್ನ ಕಂಬ ಹಿಡಿದುಕೊಂಡಿಲ್ಲ, ಸುಮ್ಮನೇ ತರಲೆ ಮಾಡಬೇಡ”

“ತರಲೆ ಮಾಡುತ್ತಿರೋದು ನಾನಲ್ಲ, ಆ ಮನುಷ್ಯ”
ಫರೀದ್ ಪ್ರಶ್ನೆ ಕೇಳಿದ ಸಾಧಕನತ್ತ ಕೈ ಚಾಚಿ ತೋರಿಸಿದ.

ಫರೀದ್ ನ ಮಾತು ಕೇಳುತ್ತಿದ್ದಂತೆಯೇ ಸಾಧಕನಿಗೆ ನಾಚಿಕೆಯಾಯಿತು. ಆತ ಓಡಿ ಬಂದು ಫರೀದ್ ನ ಪಾದ ಮುಟ್ಟಿ ಕ್ಷಮೆ ಕೇಳಿದ.


ನೆನ್ನೆಯದ್ದು ಇಲ್ಲಿದೆ: https://aralimara.com/2025/01/28/osho-452/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ