ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಅದು ಒಂದು ಪ್ರಸಿದ್ಧ ಸಂಗೀತ ಸಮಾರಂಭ. ವೇದಿಕೆಯ ಮೇಲೆ ಹಿಂದೂಸ್ತಾನಿ ಸಂಗೀತದ ದಿಗ್ಗಜ ಸಂಗೀತಕಾರರೊಬ್ಬರು ಹಾಡುತ್ತಿದ್ದಾರೆ. ಸಭಿಕರೆಲ್ಲ ತನ್ಮಯರಾಗಿ ಗಾಯನ ಕೇಳುತ್ತಿದ್ದಾರೆ. ಗಾಯಕ ಮನದುಂಬಿ ಹಾಡುತ್ತಿದ್ದಾರೆ….. ಪಚೀಸ ಲಕ್ಷ್ಮೀ ಪರಕ ಕಲನಿ ಪುಣ್ಯ ಮಹರಾ…..
ಗಾಯನ ಕಾರ್ಯಕ್ರಮ ಮುಗಿದ ಮೇಲೆ ಗಾಯಕರೊಡನೆ ವೇದಿಕೆಯ ಮೇಲಿದ್ದ ತರುಣನೊಬ್ಬ ಅವರನ್ನು ಪ್ರಶ್ನೆ ಮಾಡುತ್ತಾನೆ, “ಇವತ್ತು ನೀವು ಹಾಡಿದ ಬಂದಿಶ್ ನ ಅರ್ಥ ಏನು?”
“ಅದೆಲ್ಲ ನಿನಗೆ ಅರ್ಥ ಆದೋದಿಲ್ಲ, ಸುಮ್ಮನಿರು” ಗಾಯಕರು ತರುಣನ ಮೇಲೆ ರೇಗಿ ಅವನನ್ನು ಸುಮ್ಮನಾಗಿಸುವ ಪ್ರಯತ್ನ ಮಾಡುತ್ತಾರೆ. “ ಇಲ್ಲ, ದಯವಿಟ್ಟು ಹೇಳಿ, ಈ ಸಾಲನ್ನ ನಿಮ್ಮ ಗಾಯಕಿಯಲ್ಲಿ ನಾನು ಯಾವತ್ತೂ ಕೇಳಿಲ್ಲ” ತರುಣ ಒತ್ತಾಯ ಮಾಡಿದಾಗ, ಗಾಯಕರು ಆ ಸಾಲಿನ ಅರ್ಥ ವಿವರಿಸುತ್ತಾರೆ…….
“ ಇವತ್ತು ನನಗೆ ಬಂದಿಶ್ ನ ಸಾಲು ಮರೆತು ಹೋಗಿತ್ತು ಹಾಗಾಗಿ ನಾನು ನನ್ನ ಮನೆಯ ವಿಳಾಸವನ್ನು ಹಾಡುತ್ತಿದ್ದೆ….. ಪಚ್ಚೀಸ್, ಲಕ್ಷ್ಮಿ ಪಾರ್ಕ್ ಕಾಲನಿ, ಪುಣೆ, ಮಹಾರಾಷ್ಟ್ರ”
ಹೀಗೆ ತಮ್ಮ ಮನೆಯ ವಿಳಾಸವನ್ನು ಬಂದಿಶ್ ಆಗಿ ಹಾಡಿದವರು ಹಿಂದೂಸ್ತಾನಿ ಸಂಗೀತದ ಮೇರು ಗಾಯಕ ಪಂಡಿತ್ ಭೀಮಸೇನ್ ಜೋಷಿ. ಅವರನ್ನು ಪ್ರಶ್ನೆ ಮಾಡಿದ ತರುಣ, ಇಂದಿನ ವಿಖ್ಯಾತ ಸಿತಾರ್ ವಾದಕ ಮತ್ತು ಜಗತ್ಪ್ರಸಿದ್ಧ ಸಿತಾರ್ ವಾದಕ ಉಸ್ತಾದ ವಿಲಾಯತ್ ಖಾನ್ ಅವರ ಮಗ ಉಸ್ತಾದ್ ಶುಜಾತ್ ಖಾನ್.

