ಕಾವ್ಯ ಬಹಳ ವೈಯಕ್ತಿಕವಾದದ್ದಾರೂ ಈ ಏಕಾಂತವನ್ನು ಲೋಕಾಂತಗೊಳಿಸುವ ಕವಿ, ತನ್ನ ಪ್ರಯತ್ನ ರಸಿಕ ಓದುಗರಿಗೆ ಮುಟ್ಟುವ ಬಗ್ಗೆ ಬಹಳ ಕುತೂಹಲ ಮತ್ತು ಆತಂಕದಲ್ಲಿರುತ್ತಾನೆ. ಕವಿಯ ಈ ಕಷ್ಟದ ಬಗ್ಗೆ ಲಂಕೇಶ್ ಹೀಗೆ ಹೇಳುತ್ತಾರೆ… । ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ
ಕಣ್ಣಾನ ಬೆಳಕೇನs ಮಾರ್ಯಾಗಿನ ತುಳುಕೇನ
ತುಟಿಯಾಗಿನ ಝಳಕೇನs
ಉಡುಗಿಯ ಮಾಟೇನs, ನಡಗಿಯ ಥಾಟೇನ
ಹುಡುಗಿ ಹುಡುಗಾಟೇನ !
ಇದು ಬೇಂದ್ರೆ. ಇದನ್ನು ಬೇಂದ್ರೆ ಬದುಕಿದ್ದಾಗ ಓದುತ್ತಿದ್ದರು. ಆದರೆ ವಿವರಿಸುತ್ತಿರಲಿಲ್ಲ. ಅವರು ವಿವರಿಸದಿದ್ದರೂ ಓದಿದೊಡನೆ, ಕೇಳಿದೊಡನೆ ಮುದುಕರಿಗೆ ಒಂದು ಥರ, ಹುಡುಗರಿಗೆ ಒಂದು ಥರ, ವಿರಹಿಗಳಿಗೆ ಒಂದು ಥರ, ಭಗ್ನ ಪ್ರೇಮಿಗಳಿಗೆ ಒಂದು ಥರ ಅರ್ಥ ಹೊಳೆಯುತ್ತಿತ್ತು. ವಿಮರ್ಶಕರಿಗೆ ಇವೆಲ್ಲವೂ ಒಟ್ಟಿಗೆ ಬಂದು ಎದೆ ತಟ್ಟುತ್ತಿತ್ತು.
ಯಾರಿಗೂ ತಟ್ಟದಿದ್ದಾಗ ಕವಿಗೆ ದಿಗ್ಭ್ರಮೆ ಶುರುವಾಗುತ್ತದೆ !

