ಹೊಂದಿಕೊಳ್ಳುವಿಕೆ ( Flexibility ) :ಓಶೋ 365 Day#13

ಖುಶಿಯಾಗಿದ್ದಾಗ ನೀವು ವಿಸ್ತಾರ ಗೊಳ್ಳುತ್ತೀರಿ (expand), ಭಯಗ್ರಸ್ತರಾದಾಗ ಮುದುಡಿಕೊಳ್ಳುತ್ತೀರಿ (shrink), ನಿಮ್ಮ ಚಿಪ್ಪಿನೊಳಗೆ ಸೇರಿಕೊಂಡುಬಿಡುತ್ತೀರಿ, ಏಕೆಂದರೆ ಹೊರಗೆ ಹೋದರೆ ಯಾವದೋ ಅಪಾಯ ಎದುರಾಗಬಹುದು ಎಂದು ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ

ನಿಮ್ಮ ಹರೆಯ ನೀವು ಎಷ್ಟು ಫ್ಲೆಕ್ಸಿಬಲ್ ಎನ್ನುವುದರ ಮೇಲೆ ನಿರ್ಧರಿತವಾಗಿರುತ್ತದೆ. ಚಿಕ್ಕ ಮಗು ವನ್ನು ಗಮನಿಸಿ, ಅದು ಎಷ್ಟು ಮೃದುವಾಗಿರುತ್ತದೆ, ಎಷ್ಟು ಕೋಮಲವಾಗಿರುತ್ತದೆ ಮತ್ತು ಎಷ್ಟು ಫ್ಲೆಕ್ಸಿಬಲ್ ಆಗಿರುತ್ತದೆ. ನಿಮಗೆ ವಯಸ್ಸಾಗುತ್ತ ಹೋದಂತೆ ಎಲ್ಲವೂ ಬಿಗಿದುಕೊಳ್ಳಲು ಶುರು ಆಗುತ್ತವೆ, ಬಿರುಸಾಗುತ್ತವೆ, ಮತ್ತು ತಮ್ಮ ಫ್ಲೆಕ್ಸಿಬಲಿಟಿಯನ್ನ ಕಳೆದುಕೊಳ್ಳುತ್ತವೆ. ಆದರೆ ನೀವು ನಿಮ್ಮ ಫ್ಲೆಕ್ಸಿಬಲಿಟಿಯನ್ನ ಉಳಿಸಿಕೊಳ್ಳಬಲ್ಲಿರಾದರೆ ಸಾಯುವ ಕ್ಷಣದ ವರೆಗೂ ಹರೆಯದವರಾಗಿ ಇರಬಹುದು.

ಖುಶಿಯಾಗಿದ್ದಾಗ ನೀವು ವಿಸ್ತಾರ ಗೊಳ್ಳುತ್ತೀರಿ (expand), ಭಯಗ್ರಸ್ತರಾದಾಗ ಮುದುಡಿಕೊಳ್ಳುತ್ತೀರಿ (shrink), ನಿಮ್ಮ ಚಿಪ್ಪಿನೊಳಗೆ ಸೇರಿಕೊಂಡುಬಿಡುತ್ತೀರಿ, ಏಕೆಂದರೆ ಹೊರಗೆ ಹೋದರೆ ಯಾವದೋ ಅಪಾಯ ಎದುರಾಗಬಹುದು ಎಂದು. ನೀವು ಪ್ರತೀ ರೀತಿಯಲ್ಲಿ ಮುದುಡಿಕೊಳ್ಳುತ್ತೀರಿ ; ಪ್ರೀತಿಯಲ್ಲಿ, ಸಂಬಂಧಗಳಲ್ಲಿ, ಧ್ಯಾನದಲ್ಲಿ, ಪ್ರತಿಯೊಂದು ವಿಧದಲ್ಲಿ. ನೀವು ಆಮೆಯಂತೆ ನಿಮ್ಮ ಚಿಪ್ಪಿನೊಳಗೆ ಸೇರಿಕೊಂಡುಬಿಡುತ್ತೀರಿ. ಬಹುತೇಕ ಜನ ಬದುಕುತ್ತಿರುವಂತೆ ನೀವು ನಿರಂತರವಾಗಿ ಭಯದಲ್ಲಿ ಬದುಕುತ್ತಿದ್ದರೆ ನೀವು ನಿಮ್ಮ ಶಕ್ತಿಯ ಹಿಗ್ಗುವ ಸಾಮರ್ಥ್ಯವನ್ನು ಕಳೆದುಕೊಂಡುಬಿಡುತ್ತೀರಿ. ನಿಮ್ಮ ಹರಿವನ್ನು ಕಳೆದುಕೊಂಡು ನಿಂತ ನೀರಾಗಿಬಿಡುತ್ತೀರಿ, ನಿಮ್ಮ ನದಿ ಗುಣ ಮಾಯವಾಗಿಬಿಡುತ್ತದೆ. ಆಗ ನೀವು ಪ್ರತಿದಿನ ಹೆಚ್ಚು ಹೆಚ್ಚು ಸಾಯುತ್ತಿರುವ ಭಾವ ವನ್ನು ಅನುಭವಿಸುತ್ತೀರಿ.

ಆದರೆ ಭಯದ ಸಹಜ ಉಪಯೋಗವೂ ಇದೆ. ಮನೆಗೆ ಬೆಂಕಿ ಹೊತ್ತಿಕೊಂಡಾಗ ನೀವು ಪಾರಾಗಿ ಓಡಿ ಹೋಗಲೇ ಬೇಕು. ಆಗ ನೀವು ಭಯವಿಲ್ಲದವರಂತೆ ಇರುವುದು ಸಾಧ್ಯವಿಲ್ಲ, ಅದು ಮೂರ್ಖತನವಾಗುತ್ತದೆ. ಮನುಷ್ಯರಿಗೆ ಮುದುಡಿಕೊಳ್ಳುವ ಸಾಮರ್ಥ್ಯವೂ ಇರಬೇಕಾಗುತ್ತದೆ. ಏಕೆಂದರೆ ನಿಮ್ಮ ಹರಿವನ್ನು ನಿಲ್ಲಿಸುವ ಕ್ಷಣಗಳು ಎದುರಾಗಬಹುದು. ವಿಸ್ತಾರಗೊಳ್ಳುವ ಮುದುಡಿಕೊಳ್ಳುವ, ವಿಸ್ತಾರಗೊಳ್ಳುವ ಮುದುಡಿಕೊಳ್ಳುವ ಫ್ಲೆಕ್ಸಿಬಿಲಿಟಿ ಬಹಳ ಮಹತ್ವದ್ದು. ಇದು ಸಹಜ ಉಸಿರಾಟದಂತೆ. ಭಯಗ್ರಸ್ತ ಜನ, ದೀರ್ಘವಾಗಿ ಉಸಿರಾಡುವುದಿಲ್ಲ, ಆ ವಿಸ್ತಾರವೂ ಅವರಿಗೆ ಭಯ ಉಂಟು ಮಾಡುತ್ತದೆ. ಆಗ ಅವರ ಎದೆ ಮುದುಡಿಕೊಳ್ಳುತ್ತದೆ.

ಆದ್ದರಿಂದ ನಿಮ್ಮ ಎನರ್ಜಿಯ ಚಲನೆಗೆ ಬೇಕಾಗುವ ರೀತಿಗಳನ್ನು ಗುರುತಿಸಿಕೊಳ್ಳಿ. ಕೆಲವೊಮ್ಮೆ ಕೋಪ ಕೂಡ ಒಳ್ಳೆಯದು. ಕೊನೆಪಕ್ಷ ಅದು ನಿಮ್ಮ ಎನರ್ಜಿಯ ಚಲನೆಗೆ ಸಹಾಯ ಮಾಡುತ್ತದೆ. ಭಯ ಮತ್ತು ಕೋಪ ಇವುಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾದರೆ, ಕೋಪವನ್ನು ಆಯ್ಕೆ ಮಾಡಿಕೊಳ್ಳಿ. ಆದರೆ ಕೋಪದ ಇನ್ನೊಂದು ತುದಿಯನ್ನು ತಲುಪಿಬಿಡಬೇಡಿ. ವಿಸ್ತಾರಗೊಳ್ಳುವುದು (expansion) ಒಳ್ಳೆಯದು ಆದರೆ ಅದು ನಿಮಗೆ ಗೀಳು ಆಗಬಾರದು. ನೀವು ನೆನಪಿಟ್ಟುಕೊಳ್ಳಲೇ ಬೇಕಾದ ಸಂಗತಿಯೆಂದರೆ ಫ್ಲೆಕ್ಸಿಬಿಲಿಟಿ. ಒಂದು ಮತ್ತು ಇನ್ನೊಂದರ ನಡುವೆ ಸುಲಭವಾಗಿ ಮೂವ್ ಆಗುವ ಸಾಮರ್ಥ್ಯ.

ಮನುಷ್ಯ ಹುಟ್ಟಾ ಮೃದು
ಸತ್ತಾಗ ಮಾತ್ರ, ಬಿರುಸು, ಗಡಸು.
ಗಿಡ,ಮರ,ಹೂ,ಬಳ್ಳಿಗಳೂ ಹಾಗೇ, ಕೋಮಲ, ನಮ್ರ
ಬಾಡಿದಾಗ, ಬರಡಾದಾಗ ಮಾತ್ರ, ಒರಟು, ಪೆಡಸು.

ಅಂತೆಯೇ, ಸೆಟೆದವರು, ಬಾಗದವರು
ಸಾವಿನ ಹರಿಕಾರರು,
ನಮ್ರರು, ಒಗ್ಗಿಕೊಳ್ಳುವವರು
ಬದುಕಿನ ವಾರಸುದಾರರು.

ಸೆಟೆದವು, ಒಣಗಿದವನ್ನ ಮುರಿಯುವುದು ಸುಲಭ
ಬಾಗುವವು, ಹಸಿರಾದವು ಬಾಳುತ್ತವೆ ಬಹುಕಾಲ.

~ ಲಾವೋತ್ಸೇ


ನೆನ್ನೆಯ ಕಂತು ಇಲ್ಲಿದೆ: https://aralimara.com/2025/01/30/osho-455/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ