ಖಲೀಲ್ ಗಿಬ್ರಾನನ ಕತೆಗಳು#37: ಮರುಳ

ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ

ಹುಚ್ಚರು, ಮರುಳರನ್ನೆಲ್ಲ ಇರಿಸಿದ್ದ ಮನೆಯ ಮುಂದಿನ ಉದ್ಯಾನದಲ್ಲಿ ನನಗೊಬ್ಬ ಯುವಕ ಕಂಡ. ಮುಖ ಬಿಳಿಚಿತ್ತು. ಮುಖ ಚೆಲುವಾಗಿತ್ತು. ಅವನ ಕಣ್ಣಿನಲ್ಲಿ ಬೆರಗಿತ್ತು. ಅವನ ಪಕ್ಕದಲ್ಲಿ ಕೂತೆ. ಮಾತಾಡಿಸುತ್ತಾ, ʻನೀನು ಯಾಕೆ ಇಲ್ಲಿದ್ದೀಯಾ?ʼ ಅಂತ ಕೇಳಿದೆ.

ಆಶ್ಚರ್ಯಪಡುತ್ತಾ ನನ್ನ ನೋಡಿದ. ʻಇದು ಕೇಳಬೇಕಾದ ಪ್ರಶ್ನೆಯೇ ಅಲ್ಲ. ಆದರೂ ಹೇಳತೇನೆ ಕೇಳು. ನಮ್ಮಪ್ಪ ಇದ್ದಾರಲ್ಲಾ ಅವರು ನಾನು ಥೇಟ್‌ ಅವರ ಥರವೇ ಆಗಬೇಕು ಅಂತ ಆಸೆಪಟ್ಟರು. ಚಿಕ್ಕಪ್ಪನಿಗೆ ನಾನು ಅವರಂತೆ ಆಗಬೇಕು ಅನ್ನುವ ಬಯಕೆ. ತನ್ನ ಗಂಡನ ಹಾಗೆ ನಾನು ಕಡಲಮೇಲೆ ಸಾಗುವ ವ್ಯಾಪಾರಿ ಆಗುವುದೇ ನನ್ನ ಬದುಕಿನ ಮಹಾ ಸಾಧನೆ ಅಂತ ಅಮ್ಮ ಹೇಳುತ್ತಿದ್ದರು. ನಮ್ಮಣ್ಣನೂ ನಾನು ಅವನ ಹಾಗೇ ಬೆಳೆದು ದೃಢವಾದ ಮೈಕಟ್ಟಿನ ಕ್ರೀಡಾಪಟು ಆಗಬೇಕೆಂದು ಹೇಳುತ್ತಿದ್ದ. ಪಾಠ ಹೇಳುವ ಮೇಷ್ಟರು, ತತ್ವ ಹೇಳುವ ವಿದ್ವಾಂಸರು, ಸಂಗೀತ ಕಲಿಸುವವರು, ತರ್ಕ ಹೇಳಿಕೊಡುವವರು ಎಲ್ಲರೂ ನಾನು ಅವರವರ ಹಾಗೆ, ಕನ್ನಡಿಯಲ್ಲಿ ಕಾಣುವ ಅವರ ಮುಖದ ಥರ ಇರುವವನಾಗಬೇಕು ಅನ್ನುತ್ತಿದ್ದರು. ಅವರೆಲ್ಲ ಹುಚ್ಚರು ಅನ್ನಿಸಿ ಇಲ್ಲಿಗೆ ಬಂದೆ. ಇಲ್ಲಿರುವ ಜನ ಸ್ವಸ್ಥವಾಗಿದ್ದಾರೆ. ಇಲ್ಲಿ ನಾನು ನಾನಾಗಿ ಇರಬಹುದು,ʼ ಅಂದ.
ಆಮೇಲೆ ತಟ್ಟನೆ ನನ್ನ ಕೈ ಹಿಡಿದು, ʻನೀನು ಯಾಕೆ ಬಂದೆ ಇಲ್ಲಿಗೆ? ಅವರು ಕೊಡುವ ಶಿಕ್ಷಣ, ಅವರು ಮಾಡುವ ಬೋಧನೆ ನಿನ್ನನ್ನೂ ಓಡಿಸಿಬಿಟ್ಟಿತಾ ಇಲ್ಲಿಗೆ!ʼ ಎಂದು ಕೇಳಿದ.

ʻಇಲ್ಲ, ಸುಮ್ಮನೆ ಈ ಜಾಗ ನೋಡಿ ಹೋಗಲು ಬಂದೆ,ʼ ಎಂದು ಹೇಳಿದೆ.
ಆಗ ಯುವಕ, ʻಓಹೋ, ಹಾಗಾದರೆ ನೀನು ಈ ಕಾಂಪೌಂಡಿನ ಆಚೆ ದೊಡ್ಡ ಹುಚ್ಚಾಸ್ಪತ್ರೆ ಇದೆಯಲ್ಲಾ ಅಲ್ಲಿಂದ ಬಂದಿದ್ದೀಯಾ?ʼ ಅಂತ ಕೇಳಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.