ನಾನು ಅಜ್ಞಾನ ಎನ್ನುವ ಪದವನ್ನು ಬಳಸುವಾಗ ಅದನ್ನು ಅದರ ಋಣಾತ್ಮಕ ಅರ್ಥದಲ್ಲಿ ಬಳಸುವುದಿಲ್ಲ. ಜ್ಞಾನದ ಗೈರುಹಾಜರಿ ಎನ್ನುವ ಅರ್ಥದಲ್ಲಿ ಬಳಸುವುದಿಲ್ಲ. ನನ್ನ ಅರ್ಥದಲ್ಲಿ ಅದು ಬಹಳ ಮೂಲಭೂತ, present, ಬಹಳ ಧನಾತ್ಮಕ. ನಾವು ಇರುವ ಹಾಗೆ. ಅದು ಅಸ್ತಿತ್ವದ ಸಹಜ ಸ್ವಭಾವದಂತೆ, ಅತ್ಯಂತ ರಹಸ್ಯಾತ್ಮಕ. ಆದ್ದರಿಂದಲೇ ಬಹಳ ಸುಂದರ ಕೂಡ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಎಲ್ಲ ಜ್ಞಾನವು ಅತಿಯಾಗಿರುವುಂಥದು, ಅನವಶ್ಯಕವಾದದ್ದು. ಹಾಗೆ ನೋಡಿದರೆ ಜ್ಞಾನವೇ superfluous. ಜ್ಞಾನ, ನಮಗೆ ಎಲ್ಲ ಗೊತ್ತು ಎನ್ನುವ ಭ್ರಮೆಯನ್ನು ಸೃಷ್ಟಿ ಮಾಡುತ್ತದೆ, ಆದರೆ ನಮಗೆ ನಿಜದಲ್ಲಿ ಏನೂ ಗೊತ್ತಿರುವುದಿಲ್ಲ. ನೀವು ಒಬ್ಬರ ಜೊತೆ ಇಡೀ ಆಯುಷ್ಯ ಬದುಕಿ ಅವರ ಬಗ್ಗೆ ನನಗೆ ಎಲ್ಲ ಗೊತ್ತು ಎನ್ನಬಹುದು, ಆದರೆ ನಿಮಗೆ ಅವರ ಬಗ್ಗೆ ಏನೂ ಗೊತ್ತಿರುವುದಿಲ್ಲ. ನಿಮಗೆ ಹುಟ್ಚಿದ ಮಗುವಿನ ಬಗ್ಗೆ ನಿಮಗೆ ಎಲ್ಲ ಗೊತ್ತು ಎಂದನಿಸಬಹುದು ಆದರೆ ನಿಮಗೆ ಏನೂ ಗೊತ್ತಿರುವುದಿಲ್ಲ.
ನಮಗೆ ಏನೇಲ್ಲವೂ ಗೊತ್ತು ಎಂದು ನಾವು ತಿಳಿದುಕೊಳ್ಳುತ್ತೇವೆಯೋ ಅದೆಲ್ಲವೂ ಭ್ರಮಾತ್ಮಕ. ಯಾರೋ ಕೇಳುತ್ತಾರೆ ನೀರು ಎಂದರೇನು? ನೀವು ತೀಕ್ಷ್ಣ ವಿಜ್ಞಾನ ಬುದ್ಧಿಯವರಾಗಿ ಉತ್ತರಿಸುತ್ತೀರಿ H2O ಎಂದು. ಹೀಗೆ ಉತ್ತರಿಸುವ ಮೂಲಕ ನೀವು ಸುಮ್ಮನೇ ಒಂದು ಆಟ ಆಡುತ್ತಿದ್ದೀರಿ. H ಎಂದರೆ, O ಎಂದರೆ ಏನು ಎನ್ನುವುದು ನಿಮಗೆ ಗೊತ್ತಿಲ್ಲ, ನೀವು ಸುಮ್ಮನೇ ಲೇಬಲ್ ಮಾಡುತ್ತಿದ್ದೀರಿ. H ಎಂದರೇನು ಎಂದು ಯಾರಾದರೂ ಪ್ರಶ್ನೆ ಮಾಡಿದಾಗ, ಅದು ಹೈಡ್ರೋಜನ್ ಎಂದು, ಅಣು, ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್ ಎಂದೆಲ್ಲ ಉತ್ತರಿಸುತ್ತೀರಿ, ಮತ್ತೆ ಲೇಬಲ್ ಅಂಟಿಸುವ ಕೆಲಸ ಮುಂದುವರೆಸುತ್ತೀರಿ. ರಹಸ್ಯವನ್ನು ಇನ್ನೂ ಬೇಧಿಸಲಾಗಿಲ್ಲ, ಅದನ್ನು ಮುಂದೂಡಲಾಗಿದೆ ಅಷ್ಟೇ. ಇಷ್ಟಾಗಿಯೂ ಕೊನೆಗೆ ಸಾಕಷ್ಟು ಅಜ್ಞಾನ ಉಳಿದುಕೊಂಡಿದೆ. ಮೊದಲು ನಮಗೆ ನೀರು ಎಂದರೇನು ಎನ್ನುವುದು ಗೊತ್ತಿರಲಿಲ್ಲ, ಈಗ ನಮಗೆ ಎಲೆಕ್ಟ್ರಾನ್ ಎನ್ನುವುದು ಏನೆಂದು ಗೊತ್ತಿಲ್ಲ. ಆದ್ದರಿಂದ ನಮ್ಮ ಅಜ್ಞಾನ ಮುಂದುವರೆದಿದೆ.
ನಾವು ಹೆಸರಿಡುವ, ಭಾಗ ಮಾಡುವ, ಲೇಬಲ್ ಅಂಟಿಸುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ, ಆದರೆ ಬದುಕು ಇನ್ನೂ ರಹಸ್ಯಮಯವಾಗಿಯೇ ಉಳಿದಿದೆ. ಅಜ್ಞಾನ ಎನ್ನುವುದು ಎಷ್ಟು profound, ಎಷ್ಟು ultimate ಎಂದರೆ, ಅದನ್ನು ನಾಶ ಮಾಡುವುದು ಸಾಧ್ಯವಿಲ್ಲ. ಒಮ್ಮೆ ಇದು ನಿಮಗೆ ಗೊತ್ತಾಗಿಬಿಟ್ಟಿತೆಂದರೆ ನೀವು ಅಲ್ಲಿಯೇ ರೆಸ್ಟ್ ಮಾಡಬಹುದು. ಅದು ಅಷ್ಚು ಸುಂದರ, ಅಷ್ಟು ರಿಲ್ಯಾಕ್ಸಿಂಗ್… ಏಕೆಂದರೆ ನಮಗೆ ಮುಂದೆ ಎಲ್ಲಿಗೂ ಹೋಗುವುದಿಲ್ಲ. ನಾವು ತಿಳಿದುಕೊಳ್ಳುವುದು ಏನೂ ಇಲ್ಲ, ನಮಗೆ ಯಾವುದೂ ಗೊತ್ತಾಗುವುದಿಲ್ಲ ಕೂಡ. ಏಕೆಂದರೆ ಅಜ್ಞಾನ ಎನ್ನುವುದು ಆತ್ಯಂತಿಕ, ಪ್ರಚಂಡ, ಮತ್ತು ಅಗಾಧ.
ಒಮ್ಮೆ ವಯಸ್ಸಾಗಿದ್ದ ಝೆನ್ ಮಾಸ್ಟರ್ ತೀರಿಕೊಂಡಿದ್ದ. ಅವನ ಕೆಲವು ಶಿಷ್ಯರು ಮಾಸ್ಟರ್ ನ ಅವಗುಣಗಳ ಬಗ್ಗೆ , ಅವನಿಗೆ ಹೆಂಗಸರ ಚಟ ಇತ್ತು, ಕುಡಿಯುತ್ತಿದ್ದ, ಸೇದುತ್ತಿದ್ದ ಹೀಗೆಲ್ಲ ಗಾಸಿಪ್ ಮಾಡುತ್ತಿದ್ದರು.
ಒಂದು ದಿನ ತುಂಬಾ ಜ್ಞಾನಿ ಎಂದು ಖ್ಯಾತಳಾಗಿದ್ದ ಒಬ್ಬಳು ಝೆನ್ ಮಾಸ್ಟರ್ ಆ ಆಶ್ರಮಕ್ಕೆ ಬಂದಳು. ಅವಳೆದುರು ಶಿಷ್ಯರು ತೀರಿಹೋಗಿದ್ದ ತಮ್ಮ ಮಾಸ್ಟರ್ ನ ಅವಗುಣಗಳನ್ನು ಬಣ್ಣಿಸಿ ಹೇಳಿದರು.
“ ಹೌದಾ? ಆದರೆ ಅವನಿಗೆ ಜ್ಞಾನೋದಯವಾಗಿದ್ದು ನಿಮಗೆ ಗೊತ್ತಾ? “ ಆಕೆ ಶಿಷ್ಯರನ್ನು ಕೇಳಿದಳು.
“ ಇಲ್ಲ, ಗೊತ್ತಿಲ್ಲ. ನಿಮಗೆ ಹೇಗೆ ಗೊತ್ತು? “ ಶಿಷ್ಯರು ಅವಳನ್ನು ಪ್ರಶ್ನೆ ಮಾಡಿದರು.
“ ನಿಮ್ಮ ನಡುವೆ ಅವನು ಬದುಕಿದ್ದ ಎಂದರೆ ಬೇರೆ ಯಾವ ಸಾಧ್ಯತೆಯನ್ನೂ ನನಗೆ ಊಹಿಸಲಿಕ್ಕೆ ಆಗದು” ಆಕೆ ಉತ್ತರಿಸಿದಳು.
ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/03/osho-459/


[…] ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/04/osho-460/ […]
LikeLike