ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಕಿಸ್ ಕಾ ರಸ್ತಾ ದೇಖೇ ಏಯ್ ದಿಲ್ ಏಯ್ ಸೌದಾಯಿ…… ಕಿಶೋರ್ ದಾ ಹಾಡಿ ಅಜರಾಮರಗೊಳಿಸಿದ ಹಾಡು.
ಅಂದು ದೇವಾನಂದ್ ರ ಜೋಶೀಲಾ ಸಿನೇಮಾದ ಹಾಡುಗಳ ಧ್ವನಿಮುದ್ರಣ ನಡೆಯುತ್ತಿತ್ತು. ಸಿಂಗರ್ಸ್ ರೂಮಿನಲ್ಲಿ ಕಿಶೋರ್ ಕುಮಾರ್ ಹಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ರೂಂ ನ ಹೊರಗೆ ನಟ ದೇವಾನಂದ್ ಮತ್ತು ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್ , ಕಿಶೋರ್ ಕುಮಾರ್ ಹಾಡು ಶುರು ಮಾಡುವುದನ್ನೇ ಕಾಯುತ್ತಿದ್ದರು.
ಬಹಳ ಹೊತ್ತಾದರೂ ಕಿಶೋರ್ ಹಾಡಲು ಸಿದ್ಧರಾಗಿಲ್ಲದಿರುವುದನ್ನ ಗಮನಿಸಿದ ದೇವಾನಂದ, “ ಪಂಚಮ್, ಕಿಶೋರ್ ಯಾಕೆ ಇಷ್ಟು ತಡ ಮಾಡುತ್ತಿದ್ದಾನೆ?” ಅಂತ ಆರ್ ಡಿ ನ ಪ್ರಶ್ನೆ ಮಾಡುತ್ತಾರೆ.
ಪಂಚಮ್, ರೂಮಿನೊಳಗೆ ಹೋಗಿ ಯಾಕೆ ಇನ್ನೂ ರೆಡಿ ಆಗಿಲ್ಲ ಅಂತ ಕಿಶೋರ್ ನ ಪ್ರಶ್ನೆ ಮಾಡುತ್ತಾರೆ.
ಕಿಶೋರ್, ಸಂಗೀತಕಾರರಿಗೆ ಸ್ಕೇಲ್ ಕೊಡಲು ಹೇಳಿ ತಮ್ಮ ಸಹಾಯಕನನ್ನು ನೋಡುತ್ತ ಹಾಡಲು ಶುರು ಮಾಡುತ್ತಾರೆ, “ ಅಬ್ದುಲ್ ಪೈಸಾ ಮಿಲಾ ಕ್ಯಾ? ಜಲ್ದಿ ಸೇ ಬತಾ ದೇ” ಅಂತ ರಿಕಾರ್ಡ್ ಮಾಡಬೇಕಾಗಿದ್ದ ಹಾಡಿನ ಧಾಟಿಯಲ್ಲೇ ತಮ್ಮ ಸಹಾಯಕ ಅಬ್ದುಲ್ ನ ಪ್ರಶ್ನೆ ಮಾಡುತ್ತಾರೆ. ಆಚೆ ಕಡೆಯಿಂದ ಅಬ್ದುಲ್ ಪೂರ್ತಿ ಹಣ ಸಿಕ್ಕಿದೆ ಅಂತ ಸಿಗ್ನಲ್ ಮಾಡುತ್ತಾನೆ.
ನಂತರವಷ್ಟೇ ಕಿಶೋರ್ ಕುಮಾರ ಹಾಡಲು ಶುರು ಮಾಡುತ್ತಾರೆ….. ಕಿಸ್ ಕಾ ರಸ್ತಾ ದೇಖೇ ಏಯ್ ದಿಲ್ ಏಯ್ ಸೌದಾಯಿ……
ತಮ್ಮ ಸಂಭಾವನೆಯ ಬಗ್ಗೆ ಕಿಶೋರ್ ದಾ ಎಷ್ಟು ಪರ್ಟಿಕ್ಯುಲರ್ ಆಗಿದ್ದರು ಎನ್ನುವುದನ್ನ ವಿವರಿಸುತ್ತ ಅವರ ಮಗ ಅಮೀತ್ ಕುಮಾರ್ ಈ ಘಟನೆಯನ್ನ ನೆನಪಿಸಿಕೊಳ್ಳುತ್ತಾರೆ.

