ಅವಶ್ಯಕತೆಗಳು ( Essentials) : ಓಶೋ 365 Day#22

ಧ್ಯಾನ ಎಂದರೆ ಸ್ವಂತದಲ್ಲಿ ಒಂದಾಗುವುದು ಮತ್ತು ಪ್ರೇಮ ಎಂದರೆ ಈ ಸ್ವಂತವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು. ಧ್ಯಾನ ನಿಮಗೆ ನಿಧಿಯನ್ನು ಒದಗಿಸಿಕೊಡುತ್ತದೆ ಮತ್ತು ಪ್ರೇಮ ನಿಮಗೆ ಅದನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಈ ಎರಡು ಸಂಗತಿಗಳು ಮಾತ್ರ ಮೂಲಭೂತವಾದವುಗಳು. ಬಾಕಿ ಎಲ್ಲವೂ ನಾನ್ ಎಸೆನ್ಶಿಯಲ್… ಅನವಶ್ಯಕ ಸಂಗತಿಗಳು ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ಒಂದು ಕಥೆ ಹೀಗಿದೆ, ಮೂರು ಜನ ರೋಮ್ ಗೆ ಹೋಗಿರುತ್ತಾರೆ. ಅಲ್ಲಿ ಅವರು ಪೋಪ್ ನ ಭೇಟಿ ಮಾಡುತ್ತಾರೆ.

ಪೋಪ್, ಮೊದಲನೇಯ ವ್ಯಕ್ತಿಯನ್ನು ಕೇಳುತ್ತಾರೆ, “ ನೀವು ಎಷ್ಟು ದಿನ ಇಲ್ಲಿರುತ್ತೀರ?” ಆ ವ್ಯಕ್ತಿ ಉತ್ತರಿಸುತ್ತಾನೆ “ಮೂರು ತಿಂಗಳು”. “ ಹಾಗಾದರೆ ನೀನು ಸಾಕಷ್ಟು ರೋಮ್ ನೋಡಬಹುದು” ಪೋಪ್ ಹೇಳುತ್ತಾರೆ.

ಇನ್ನೊಬ್ಬ ಪ್ರಯಾಣಿಕ ಪೋಪ್ ರಿಗೆ ಹೇಳುತ್ತಾನೆ, “ನನಗೆ ಕೇವಲ ಆರು ವಾರ ಮಾತ್ರ ಇಲ್ಲಿ ಇರುವುದು ಸಾಧ್ಯ”. “ಹಾಗಾದರೆ ನೀನು ಮೊದಲನೇಯವನಿಗಿಂತ ಹೆಚ್ಚು ರೋಮ್ ನೋಡಬಹುದು”. ಪೋಪ್ ಉತ್ತರಿಸುತ್ತಾರೆ.

ಮೂರನೇಯ ಪ್ರಯಾಣಿಕ ಹೇಳುತ್ತಾನೆ, “ ನಾನು ಕೇವಲ ಎರಡು ವಾರ ಮಾತ್ರ ಇಲ್ಲಿರಬಲ್ಲೆ”. “ ಹಾಗಾದರೆ ನೀನು ಅದೃಷ್ಟವಂತ, ನೀನು ಪೂರ್ತಿಯಾಗಿ ರೋಮ್ ನೋಡಬಹುದು ! “ ಪೋಪ್ ಹೇಳುತ್ತಾರೆ.

ಪೋಪ್ ರ ಮಾತು ಕೇಳಿ ಆ ಮೂರೂ ಪ್ರಯಾಣಿಕರಿಗೆ ಆಶ್ಚರ್ಯವಾಗುತ್ತದೆ, ಏಕೆಂದರೆ ಅವರಿಗೆ, ಮೈಂಡ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಗೊತ್ತಿರುವುದಿಲ್ಲ. ಸುಮ್ಮನೇ ವಿಚಾರ ಮಾಡಿ, ನಿಮಗೆ ಸಾವಿರ ವರ್ಷ ಆಯಸ್ಸು ಇದ್ದರೆ, ನೀವು ಬಹಳಷ್ಟು ಸಂಗತಿಗಳನ್ನು ಮಿಸ್ ಮಾಡಿಕೊಳ್ಳುತ್ತೀರ, ಏಕೆಂದರೆ ಆಗ ನೀವು ಸಂಗತಿಗಳನ್ನು ಮುಂದೆ ಹಾಕುತ್ತ ಹೋಗುತ್ತೀರ. ಆದರೆ ಅದೇ ನಿಮ್ಮ ಆಯಸ್ಸು ತುಂಬ ಕಡಿಮೆಯಾಗಿದ್ದರೆ, ನೀವು ಸಂಗತಿಗಳನ್ನು ಪೋಸ್ಟಪೋನ್ ಮಾಡುವುದಿಲ್ಲ. ಆದರೂ ಕೆಲವರು ತಮ್ಮ ಸ್ವಂತ ರಿಸ್ಕಿನಲ್ಲಿ ಹೀಗೆ ಮಾಡುತ್ತಾರೆ.

ಕಲ್ಪನೆ ಮಾಡಿಕೊಳ್ಳಿ ಯಾರಾದರೂ ನಿಮಗೆ, ನೀವು ಒಂದು ದಿನ ಮಾತ್ರ ಬದುಕಲಿದ್ದೀರಿ ಎಂದು ಹೇಳಿದರೆ, ಆಗ ನೀವು ಏನು ಮಾಡುತ್ತೀರಿ? ಆಗ ನೀವು ಅನವಶ್ಯಕ ಸಂಗತಿಗಳ ಬಗ್ಗೆ ಯೋಚನೆ ಮಾಡುತ್ತ ಕುಳಿತುಕೊಳ್ಳುತ್ತೀರ? ಇಲ್ಲ, ನೀವು ಅವನ್ನೆಲ್ಲ ಮರೆತು ಬಿಡುತ್ತೀರ. ನೀವು ಪ್ರೇಮಿಸುತ್ತೀರ, ಪ್ರಾರ್ಥನೆ ಮಾಡುತ್ತೀರ, ಧ್ಯಾನ ಮಾಡುತ್ತೀರ. ಏಕೆಂದರೆ ಕೇವಲ ಇಪ್ಪತ್ನಾಲ್ಕು ಗಂಟೆಗಳು ಮಾತ್ರ ಬಾಕಿ ಇವೆ. ನಿಜದ ಸಂಗತಿಗಳನ್ನ, ಅವಶ್ಯಕ ಸಂಗತಿಗಳನ್ನ, ಪೋಸ್ಟಪೋನ್ ಮಾಡಲು ನೀವು ಮುಂದಾಗುವುದಿಲ್ಲ.

ಸಾವನ್ನು ಎದುರು ನೋಡ್ತಾ ಇರೋ ಝೆನ್ ಮಾಸ್ಟರ್, ತನ್ನ ಶಿಷ್ಯರನ್ನು ಎದುರು ಕೂರಿಸಿಕೊಂಡು ಒಂದು ಕೊನೆಯ ಮಾತು ಹೇಳೋದು ಝೆನ್’ಲ್ಲಿ ಒಂದು ಬಹು ಮುಖ್ಯ ಸಂಪ್ರದಾಯ. ಹೀಗೆ ಝೆನ್ ಮಾಸ್ಟರ್’ಗಳು ಹೇಳಿದ ಕೊನೆಯ ಮಾತುಗಳನ್ನ, ಪದ್ಯಗಳನ್ನ, ಝೆನ್ ವಿದ್ಯಾರ್ಥಿಗಳು ತುಂಬ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ.

ಝೆನ್ ಮಾಸ್ಟರ್ ಬಾಂಕಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಶಿಷ್ಯರೆಲ್ಲ ಬಾಂಕಿಯ ಸುತ್ತ ನೆರೆದಿದ್ದರು. ಸಾವಿಗೂ ಮೊದಲು ಕೊನೆಯದಾಗಿ ಒಂದು ಜ್ಞಾನದ ಮಾತು ಹೇಳುವಂತೆ ಹಿರಿಯ ಶಿಷ್ಯ, ಮಾಸ್ಟರ್ ಬಾಂಕಿಯನ್ನು ಕೇಳಿಕೊಂಡ.

ಒಂದು ನಿಮಿಷ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಿದ ಬಾಂಕಿ ಕೊನೆಯದಾಗಿ ಮಾತನಾಡಿದ,

“ ಸಾಯಲು ನನಗೆ ಭಯವಾಗುತ್ತಿದೆ “

ಈ ಮಾತು ಹೇಳಿತ್ತಿದ್ದಂತೆಯೇ ಬಾಂಕಿ, ಕೊನೆಯ ಉಸಿರೆಳೆದ.

ಈ ಮಾತು ಕೇಳುತ್ತಿದ್ದಂತೆಯೇ ಸುತ್ತ ಸೇರಿದ್ದ ಶಿಷ್ಯರಿಗೆಲ್ಲ ಆಶ್ಚರ್ಯ, ಆಘಾತ ಆಯಿತು. ಆಗ ಅಲ್ಲಿಗೆ ಬಂದ ಇನ್ನೊಬ್ಬ ಝೆನ್ ಮಾಸ್ಟರ್ ಗೆ, ಶಿಷ್ಯರು ಪ್ರಶ್ನೆ ಮಾಡಿದರು.

“ಮಾಸ್ಟರ್ ಬಾಂಕಿಗೆ ಜ್ಞಾನೋದಯವಾಗಿದ್ದರೆ, ಅವನು ಈ ಥರ ಉತ್ತರ ಕೊಡುತ್ತಿರಲಿಲ್ಲ ಅಲ್ಲವೆ? “

ಮಾಸ್ಟರ್ ಗದ್ಗದಿತನಾಗಿ ಉತ್ತರ ಕೊಟ್ಟ.

“ ಬಾಂಕಿಯ ಉತ್ತರ ಕೇಳಿದ ಮೇಲೆ ನನಗಂತೂ ಒಂದು ವಿಷಯ ಸ್ಪಷ್ಚವಾಯಿತು, ಬಾಂಕಿಗೆ ನಿಜವಾಗಿಯೂ ಜ್ಞಾನೋದಯವಾಗಿತ್ತು. ಏಕೆಂದರೆ ಝೆನ್’ಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಠ ಜ್ಞಾನವೆಂದರೆ ಅದು ಪ್ರಾಮಾಣಿಕತೆ “


ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/08/osho-464/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ