ಪ್ರೇಮದ ನಾಜೂಕುತನ ( Love’s Fragility) : ಓಶೋ 365 Day #25

ಪ್ರೇಮ, ಶಾಶ್ವತ ಎಂದು ತಿಳಿದುಕೊಳ್ಳಬೇಡಿ. ಅದು ತುಂಬ ನಾಜೂಕಾದದ್ದು, ಗುಲಾಬಿ ಹೂವಿನಷ್ಟು ನಾಜೂಕು. ಮುಂಜಾನೆ ಇದ್ದ ಪ್ರೇಮ ಸಂಜೆಯಾಗುವಷ್ಟರಲ್ಲಿ ಮರೆಯಾಗಿಬಿಟ್ಟಿರುತ್ತದೆ. ಯಾವುದೋ ಒಂದು ಸಣ್ಣ ಕ್ಷುಲ್ಲಕ ಸಂಗತಿ ಪ್ರೇಮವನ್ನು ಘಾಸಿ ಮಾಡಿ ಬಿಟ್ಟಿರುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಸಂಗತಿ ಎಷ್ಟು ಮಹತ್ವದ್ದಾಗಿರುತ್ತದೋ ಅಷ್ಟೇ ನಾಜೂಕಾಗಿರುತ್ತದೆ ( fragile). ಅದನ್ನು ಬಹಳ ಸೂಕ್ಷ್ಮವಾಗಿ ರಕ್ಷಿಸ ಬೇಕಾಗುತ್ತದೆ, ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಬಂಡೆಗೆ ಏನೂ ಆಗುವುದಿಲ್ಲ ಆದರೆ ಹೂವು ನಾಶವಾಗಿ ಬಿಡುತ್ತದೆ. ನೀವು ಹೂವಿಗೆ ಕಲ್ಲೆಸೆದಿರಾದರೆ, ಕಲ್ಲಿಗೆ ಏನೂ ಆಗುವುದಿಲ್ಲ, ಆದರೆ ಹೂವು ಹಾನಿಯನ್ನು ಅನುಭವಿಸ ಬೇಕಾಗುತ್ತದೆ.

ಪ್ರೇಮ ತುಂಬ ನಾಜೂಕಾದದ್ದು, ಬಹಳ ಸೂಕ್ಷ್ಮ ವಾದದ್ದು. ಪ್ರತಿಯೊಬ್ಬರೂ ಈ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು, ಕಾಳಜಿ ವಹಿಸಬೇಕು. ಹಾಗಾಗದಿದ್ದಾಗ ನೀವು ಮಾಡುವ ಹಾನಿಯಿಂದಾಗಿ ಇನ್ನೊಬ್ಬರು ಮುದುಡಿಕೊಂಡು ಬಿಡುತ್ತಾರೆ, ರಕ್ಷಣಾತ್ಮಕವಾಗಿ ಬಿಡುತ್ತಾರೆ. ನೀವು ತುಂಬ ಫೈಟ್ ಮಾಡುತ್ತಿದ್ದೀರಾದರೆ, ನಿಮ್ಮ ಸಂಗಾತಿ ನಿಮ್ಮಿಂದ ಎಸ್ಕೇಪ್ ಆಗಲು ಪ್ರಯತ್ನ ಮಾಡುತ್ತಾರೆ ; ಅವರು ಹೆಚ್ಚು ಹೆಚ್ಚು ಕೋಲ್ಡ್ ಆಗುತ್ತ ಹೋಗುತ್ತಾರೆ, ತಮ್ಮನ್ನು ತಾವು ನಿಮ್ಮಿಂದ ಕ್ಲೋಸ್ ಮಾಡಿಕೊಳ್ಳುತ್ತ ಹೋಗುತ್ತಾರೆ. ಅವರು ಹಾಗೆ ಮಾಡುವುದು ನಿಮ್ಮ ಆಕ್ರಮಣಕ್ಕೆ ಬೆದರಿ ದುರ್ಬಲರಾಗದಿರಲು. ಆಗ ಅವರ ಕೋಲ್ಡನೆಸ್ ನಿಮ್ಮನ್ನು ಇನ್ನೂ ಹೆಚ್ಚು ಕೆಣಕುತ್ತದೆ, ನೀವು ಇನ್ನೂ ಜೋರಾಗಿ ಆಕ್ರಮಣ ಮುಂದುವರೆಸುತ್ತೀರಿ. ಹೀಗೆ ಇದು ಒಂದು ವಿಷ ವೃತ್ತ ವಾಗಿ ಬಿಡುತ್ತದೆ.

ಬಹುತೇಕ ಪ್ರೇಮಿಗಳು ಪರಸ್ಪರ ದೂರಾಗುವುದು ಹೀಗೆಯೇ. ಮತ್ತು ಈ ದೂರಾಗುವಿಕೆಗೆ ಅವರು, ತಾವು ಕಾರಣ ಅಲ್ಲ, ಇನ್ನೊಬ್ಬರು ಕಾರಣ ಎಂದು ತಿಳಿದಿರುತ್ತಾರೆ. ಇನ್ನೊಬ್ಬರು ತಮಗೆ ಮೋಸ ಮಾಡಿದರು ಎನ್ನುವುದು ಅವರ ಗ್ರಹಿಕೆಯಾಗಿರುತ್ತದೆ.

ನನ್ನ ತಿಳುವಳಿಕೆಯ ಪ್ರಕಾರ ಯಾವ ನಿಜದ ಪ್ರೇಮಿಯೂ ತನ್ನ ಸಂಗಾತಿಗೆ ಮೋಸ ಮಾಡುವುದಿಲ್ಲ. ಪ್ರೇಮವನ್ನು ಸಾಯಿಸುವುದು ಅವರಿಬ್ಬರ ನಡುವಿನ ಅಜ್ಞಾನವೇ. ಇಬ್ಬರಿಗೂ ಜೊತೆಯಾಗಿ ಇರುವ ಇಚ್ಛೆಯಿತ್ತು ಆದರೆ ಯಾಕೋ ಇಬ್ಬರೂ ಈ ವಿಷಯದಲ್ಲಿ ತಿಳುವಳಿಕೆಯಿಲ್ಲದವರಾಗಿದ್ದರು. ಅವರ ಅಜ್ಞಾನವೇ ಟ್ರಿಕ್ ಮಾಡಿ ಅವರ ದೂರಾಗುವಿಕೆಯನ್ನು ಹೆಚ್ಚು ಪಟ್ಟು ಹೆಚ್ಚಿಸುತ್ತದೆ.

ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಹೊಸ ಬಾಗಿಲೊಂದು
ತೆರೆದುಕೊಳ್ಳುತ್ತದೆ ತಾನೇ ತಾನಾಗಿ .

ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ಸ್ವಾಗತಿಸು ತೋಳು ಚಾಚಿ,
ಅವನು ತನ್ನ ಜೊತೆಗೆ ತಂದ  ಯಾತನೆಗಳ
ಪಕ್ಕೆ ಹಿಂಡಿ ತಮಾಷೆ ಮಾಡು.

ದುಃಖಗಳು, 
ಚಿಂದಿ ಬಟ್ಟೆಯ ಕೌದಿಯ ಹಾಗೆ
ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.

ಈ ಕಳಚುವಿಕೆ ಮತ್ತು
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ
ಒದಗಿ ಬರುವ ಅಮೃತದ ಹನಿಗಳು

~ ರೂಮಿ


ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/11/osho-467/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ