ಪಾತ್ರಾಭಿನಯ ( Playing Role): ಓಶೋ 365 Day

ಅಭಿನಯಿಸಿ, ಆದರೆ ಎಚ್ಚರಿಕೆಯ, ತಿಳುವಳಿಕೆಯ ಸ್ಥಿತಿಯಲ್ಲಿ ಅಭಿನಯಿಸಿ. ನಿಮ್ಮ ಹಳೆಯ ಅಪೂರ್ಣ ಬಯಕೆಗಳು,  ಅವು ಏನೇ ಇದ್ದರೂ ಅಭಿನಯಿಸಿಬಿಡಿ ; ಹತ್ತಿಕ್ಕಲು ಹೋಗಬೇಡಿ. ಎಷ್ಟು ಸಾಧ್ಯವೋ ಅಷ್ಟು ಪರಿಪೂರ್ಣವಾಗಿ ಅಭಿನಯಿಸಿ, ಆದರೆ ಎಚ್ಚರಿಕೆಯನ್ನು ಕಳೆದುಕೊಳ್ಳಬೇಡಿ. ಆನಂದಿಸಿ, ಆಗ ಬಾಕಿ ಎಲ್ಲರು ಕೂಡ ಅದನ್ನು ಆನಂದಿಸುತ್ತಾರೆ ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ಯಾವಾಗ ಒಬ್ಬ ವ್ಯಕ್ತಿ ಒಂದು ಪಾತ್ರವನ್ನು ಅಭಿನಯಿಸುತ್ತಿರುತ್ತಾನೋ ಆಗ ಅದಕ್ಕೆ ಒಂದು ಕಾರಣವಿರುತ್ತದೆ. ಆ ಪಾತ್ರ ಆ ವ್ಯಕ್ತಿಗೆ ಯಾವುದೋ ಒಂದು ರೀತಿಯಲ್ಲಿ ಮಹತ್ವದ್ದಾಗಿರುತ್ತದೆ. ಅಭಿನಯ ಪರಿಪೂರ್ಣವಾಗಿದ್ದರೆ, ಪ್ರಜ್ಞೆಯಲ್ಲಿಲ್ಲದ (unconscious) ಅವರೊಳಗಿನ ಏನೋ ಒಂದು ಮಾಯವಾಗುತ್ತದೆ, ಆವಿಯಾಗುತ್ತದೆ ಮತ್ತು ವ್ಯಕ್ತಿ ಆ ಹೊರೆಯಿಂದ ಮುಕ್ತನಾಗುತ್ತಾನೆ.

ಉದಾಹರಣೆಗೆ, ನೀವು ಮಗುವಿನಂತೆ ಆಡ ಬಯಸುತ್ತಿದ್ದೀರಾದರೆ, ನಿಮ್ಮ ಬಾಲ್ಯದ ಯಾವುದೋ ಒಂದು ಭಾಗ ಅಪೂರ್ಣವಾಗಿದೆ ಎಂದರ್ಥ. ನೀವು ಬಯಸಿದ ಮಗುವಿನಂತೆ ಇರುವುದು ನಿಮಗೆ ಆಗ ಸಾಧ್ಯವಾಗಿಲ್ಲ, ಯಾರೋ ನಿಮ್ಮನ್ನು ತಡೆದಿದ್ದಾರೆ. ಜನ ನಿಮ್ಮನ್ನು ಗಂಬೀರವಾಗಿ ಇರುವಂತೆ, ಆಗ ನೀವು ಇದ್ದುದಕ್ಕಿಂತ ಹೆಚ್ಚು ಪ್ರಬುದ್ಧ, ಹೆಚ್ಚು ವಯಸ್ಕ ರಾಗಿರುವುಂತೆ ಒತ್ತಾಯ ಮಾಡಿದ್ದಾರೆ. ಆ ಒಂದು ಅಪೂರ್ಣತೆ, ಪೂರ್ಣಗೊಳ್ಳಲು ನಿಮ್ಮನ್ನು ಸದಾ ಕಾಡುತ್ತಿರುತ್ತದೆ. ಆದ್ದರಿಂದ ಅದನ್ನು ಪೂರ್ಣಗೊಳಿಸಿ. ಇದರಲ್ಲಿ ಯಾವ ತಪ್ಪೂ ಇಲ್ಲ. ಆ ಸಮಯದಲ್ಲಿ ನಿಮಗೆ ಮಗುವಿನ ಹಾಗೆ ಇರುವುದು ಸಾಧ್ಯವಾಗಿಲ್ಲ, ಈಗ ನಿಮಗೆ ಅದು ಸಾಧ್ಯ. ಒಮ್ಮೆ ನೀವು ನಿಮ್ಮ ಈ ಅಪೂರ್ಣ ಬಯಕೆಯನ್ನು ಪೂರ್ಣಗೊಳಿಸಿದಿರೆಂದರೆ, ಅದು ಮತ್ತೆ ಎಂದೂ ಮರುಕಳಿಸದು.

ಒಮ್ಮೆ, ತನ್ನ ನೂರು ವರ್ಷದ ತಂದೆಯನ್ನ ನರ್ಸಿಂಗ್ ಹೋಂ ಗೆ ಕರೆದುಕೊಂಡು ಬಂದಿದ್ದ ಎಪ್ಪತೈದು ವರ್ಷ ವಯಸ್ಸಿನ ನಸ್ರುದ್ದೀನ್.

“ ಡಾಕ್ಟರ್, ನನ್ನ ಅಪ್ಪ ಯಾಕೋ ಇತ್ತೀಚಿಗೆ ಹುಚ್ಚುಚ್ಚಾಗಿ ಆಡುತ್ತಾನೆ. ಕಳೆದ ಹದೈನೈದು ದಿನಗಳಿಂದ ಬಾತ್ ಟಬ್ ನಲ್ಲಿ ರಬ್ಬರ್ ಡೋನಾಲ್ಡ್ ಡಕ್ ಜೊತೆ ಆಟ ಆಡುತ್ತ ಕೂತು ಬಿಡುತ್ತಿದ್ದಾನೆ. ದಯವಿಟ್ಟು ಇವನನ್ನು ನಿಮ್ಮ ಆಸ್ಪತ್ರೆಗೆ ಸೇರಿಸಿಕೊಳ್ಳಿ “

“ಬಹುಶಃ, ಇದು ವಯೋಸಹಜ ನೆನಪಿನ ಸಮಸ್ಯೆ. ಅವನ ವರ್ತನೆಯಿಂದ ಯಾರಿಗೂ ತೊಂದರೆ ಇಲ್ಲ ತಾನೆ? ಮನೆಯಲ್ಲಿಯೇ ಆರೈಕೆ ಮಾಡು “

ಮನೋವೈದ್ಯರು ನಸ್ರುದ್ದೀನ್ ಗೆ ತಿಳಿಹೇಳಿದರು.

“ಆದರೆ, ಅದು ನನ್ನ ಡೋನಾಲ್ಡ್ ಡಕ್ “

ನಸ್ರುದ್ದೀನ್ ನಿಧಾನಕ್ಕೆ ತನ್ನ ಸಮಸ್ಯೆ ಹೇಳಿಕೊಂಡ.


ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/12/osho-468/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ