ನಂಬಿಕೆ ( Trust ) : ಓಶೋ365 #Day 29

ನೆನಪಿರಲಿ, ಯಾವ ಕಾರಣಕ್ಕೂ, ಅದೇನೇ ಒತ್ತಡವಿದ್ದರೂ ಅಪನಂಬಿಕೆಗೆ ಪಾತ್ರರಾಗಬೇಡಿ. ನಿಮ್ಮ ನಂಬಿಕೆಯ ಕಾರಣವಾಗಿ ನೀವು ಇತರರಿಂದ ಮೋಸಕ್ಕೊಳಗಾಗುತ್ತಿದ್ದರೂ ಇದು, ನೀವು ನಂಬಿಕೆಯನ್ನು ಕಳೆದುಕೊಳ್ಳುವುದಕ್ಕಿಂತ ಒಳ್ಳೆಯದು ~ ಓಶೋ ರಜನೀಶ್ ,ಕನ್ನಡಕ್ಕೆ ಚಿದಂಬರ ನರೇಂದ್ರ

ಎಲ್ಲರೂ ನಿಮ್ಮನ್ನು ಪ್ರೀತಿಸುತ್ತಿರುವಾಗ, ಯಾರೂ ನಿಮ್ಮನ್ನು ಮೋಸಮಾಡದಿರುವಾಗ,  ನಂಬುವುದು, ನಂಬಿಕೆಯನ್ನು ಉಳಿಸಿಕೊಳ್ಳುವುದು ಬಹಳ ಸುಲಭ. ಆದರೆ ಇಡೀ ಜಗತ್ತು ಮೋಸಮಯವಾಗಿದ್ದರೂ, ನೀವು ಅವರನ್ನು ನಂಬುತ್ತಿರುವಾಗಲೂ ಜನ ನಿಮಗೆ ಮೋಸ ಮಾಡುತ್ತಿರುವ ಪ್ರಸಂಗಗಳಲ್ಲೂ ನೀವು ನಂಬಿಕೆಯನ್ನು ಕಳೆದುಕೊಳ್ಳಬೇಡಿ, ನಿಮ್ಮ ನಂಬಿಕೆಯನ್ನು ಮುಂದುವರೆಸಿ.  ನಂಬಿಕೆಯಲ್ಲಿ ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಖಂಡಿತ ನಿಮಗೆ ಯಾವ ಹಾನಿ ಆಗುವುದಿಲ್ಲ ಏಕೆಂದರೆ ನಂಬಿಕೆ ಎಲ್ಲಕ್ಕಿಂತಲೂ ದೊಡ್ಡದು. ನಂಬಿಕೆ ಬೇರೆ ಯಾವುದಕ್ಕೂ  means ಅಲ್ಲ, ಅದು ತನ್ನದೇ ಆದ ಮೌಲ್ಯವನ್ನು ಹೊಂದಿರುವಂಥದದು.

ನೀವು ನಂಬುವಿರಾದರೆ, ನಂಬಿಕೆಯನ್ನು ಉಳಿಸಿಕೊಳ್ಳುವಿರಾದರೆ, ನೀವು ಯಾವಾಗಲೂ ತೆರೆದುಕೊಂಡಿರುತ್ತೀರಿ. ಜನ ತಮ್ಮನ್ನು ತಾವು ಕ್ಲೋಸ್ ಮಾಡಿಕೊಂಡಿರುವುದು ತಮ್ಮ ರಕ್ಷಣೆಯ ಸಲುವಾಗಿ, ಯಾರೂ ತಮ್ಮನ್ನು ಮೋಸ ಮಾಡಬಾರದೆಂಬ ಉದ್ದೇಶದಿಂದ ಅಥವಾ ಯಾರೂ ತಮ್ಮನ್ನು ಬಳಸಿಕೊಳ್ಳಬಾರದೆಂದು. ಅವರು ಬೇಕಾದರೆ ನಿಮ್ಮನ್ನು ಬಳಸಿಕೊಳ್ಳಲಿ ! ನೀವು ನಿಮ್ಮ ನಂಬಿಕೆಯನ್ನು ಮುಂದುವರೆಸಲು ಧೃಡ ಸಂಕಲ್ಪ ಮಾಡಿರುವಿರಾದರೆ, ಆಗ ಒಂದು ಸುಂದರ ಅರಳುವಿಕೆಗೆ ಅವಕಾಶವಿದೆ ಏಕೆಂದರೆ, ಅಲ್ಲಿ ಭಯ ಗೈರುಹಾಜರಾಗಿದೆ.

ಜನ ಮೋಸ ಮಾಡುತ್ತಾರೆ ಎನ್ನುವ ಸಂಗತಿಯನ್ನು ನೀವು ಒಮ್ಮೆ ಒಪ್ಪಿಕೊಂಡುಬಿಟ್ಟರೆ ಆಗ ಯಾವ ಭಯಕ್ಕೂ ಜಾಗವಿಲ್ಲ. ಆಗ ನಿಮ್ಮ ತೆರೆದುಕೊಳ್ಳುವಿಕೆಗೆ ಯಾವ ಅಡಚಣೆಯೂ ಇಲ್ಲ. ಯಾರಾದರೂ ನಿಮಗೆ ಮಾಡಬಹುದಾದ ಮೋಸಕ್ಕಿಂತ ನಿಮ್ಮ ಈ ಕುರಿತಾದ ಭಯ ಹೆಚ್ಚು ಅಪಾಯಕಾರಿ. ಈ ಭಯ ನಿಮ್ಮ ಇಡೀ ಬದುಕನ್ನು ವಿಷಮಯವಾಗಿಸುತ್ತದೆ. ಆದ್ದರಿಂದ ಯಾವಾಗಲೂ ಓಪನ್ ಆಗಿರಿ, ಮುಗ್ಧತೆಯಿಂದ ನಂಬಿಕೆಯನ್ನು ಮುಂದುವರೆಸಿ, ಯಾವ ಕಂಡಿಷನ್ ಗಳನ್ನು ಹಾಕದಂತೆ.

ಆಗ ನೀವು ಅರಳುವುದಷ್ಟೇ ಅಲ್ಲ, ಇತರರ ಅರಳುವಿಕೆಗೂ ನೀವು ಕಾರಣರಾಗುತ್ತೀರಿ, ಏಕೆಂದರೆ ಈಗ ಅವರಿಗೆ ಗೊತ್ತಾಗುತ್ತಿದೆ ಅವರು ನಿಮಗೆ ಮೋಸ ಮಾಡುತ್ತಿಲ್ಲ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು. ನೀವು ನಿಮ್ಮನ್ನು ನಂಬುತ್ತಿರುವ ಮನುಷ್ಯನನ್ನು ನಿರಂತರವಾಗಿ ಮೋಸ ಮಾಡುವುದು ಸಾಧ್ಯವಿಲ್ಲ. ಅವರ ನಂಬಿಕೆ ನಿಮ್ಮನ್ನು ಮತ್ತೆ ಮತ್ತೆ ಕೆಣಕುತ್ತ ಎಚ್ಚರಿಸುತ್ತಿರುತ್ತದೆ.

ಒಬ್ಬ ರೈತ ತಾನು ಹುಟ್ಟಿದ ಹಳ್ಳಿ ಬಿಟ್ಟು ಹತ್ತಿರದ ಇನ್ನೊಂದು ಊರಿಗೆ ಗಂಟು ಮೂಟೆ ಕಟ್ಟಿಕೊಂಡು ವಲಸೆ ಹೋದ. ಹೊಸ ಊರು ಹೇಗೋ ಏನೋ ಎಂದು ಚಿಂತೆಗೊಳಗಾದ ಆ ಮನುಷ್ಯ, ಈ ಬಗ್ಗೆ ವಿಚಾರಿಸಲು ಅಲ್ಲೇ ವಾಸವಾಗಿದ್ದ ಝೆನ್ ಮಾಸ್ಟರ್ ಬಳಿ ಹೋದ.

ರೈತ : ಮಾಸ್ಟರ್ ಈ ಊರಿನ ಜನ ಹೇಗೆ?  ಈ ಊರು ನನಗೆ ಇಷ್ಟ ಆಗಬಹುದಾ?

ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?

ರೈತ : ತುಂಬ ಕೆಟ್ಚ ಜನ ಮಾಸ್ಟರ್, ಹೊಟ್ಟೆ ಕಿಚ್ಚಿನವರು, ಮೋಸಗಾರರು, ಕಳ್ಳರು.

ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.

ಕೆಲ ದಿನಗಳ ನಂತರ ಇನ್ನೊಬ್ಬ ರೈತ, ಇನ್ನೊಂದು ಊರಿನಿಂದ ಅದೇ ಊರಿಗೆ ಬಂದು, ಝೆನ್ ಮಾಸ್ಟರ್ ಗೆ ಅದೇ ಪ್ರಶ್ನೆ ಕೇಳಿದ.

ರೈತ : ಮಾಸ್ಟರ್ ಈ ಊರಿನ ಜನ ಹೇಗೆ?  ಈ ಊರು ನನಗೆ ಇಷ್ಟ ಆಗಬಹುದಾ?

ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?

ರೈತ : ತುಂಬ ಒಳ್ಳೆ ಜನ ಮಾಸ್ಟರ್, ಒಬ್ಬರಿಗೊಬ್ಬರು ಬಹಳ ಸಹಾಯ ಮಾಡುತ್ತಾರೆ, ಸದಾ ತಮ್ಮ ತಮ್ಮ ಕೆಲಸ ಮಾಡುತ್ತ, ಹಾಡುತ್ತ, ಕುಣಿಯುತ್ತ ಖುಷಿಯಾಗಿರ್ತಾರೆ.

ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.


ನೆನ್ನೆಯ ಕಂತು ಇಲ್ಲಿ ಓದಿ: https://aralimara.com/2025/02/15/osho-471/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ