ಯಾವಾಗಲೂ ಹೊಸ ವಿಚಾರಗಳಿಗೆ ತೆರೆದುಕೊಂಡಿರಿ ಮತ್ತು ಪ್ರಯೋಗಶೀಲರಾಗಿರಿ, ಯಾವ ದಾರಿಯಲ್ಲಿ ನೀವು ಎಂದೂ ಪ್ರಯಾಣ ಮಾಡಿಯೇ ಇಲ್ಲವೋ ಆ ದಾರಿಯಲ್ಲಿ ನಡೆಯಲು ಸದಾ ಸಿದ್ಧರಾಗಿರಿ. ಯಾರಿಗೆ ಗೊತ್ತು ? ಈ ಪ್ರಯಾಣ ವಿಫಲವಾದರೂ, ಒಂದು ಅನುಭವವಂತೂ ನಿಮ್ಮ ಪಾಲಾಗುವುದು ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ
ಎಡಿಸನ್ ಏನೋ ಒಂದು ಪ್ರಯೋಗ ಮಾಡುತ್ತಿದ್ದ ಮತ್ತು ಮೂರು ವರ್ಷಗಳ ಕಾಲ ಅವನು ಏಳು ನೂರು ಪ್ರಯತ್ನಗಳನ್ನು ಮಾಡಿ ವಿಫಲನಾಗಿದ್ದ. ಅವನ ಸಹೋದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಇದರಿಂದಾಗಿ ತಲೆ ಕೆಟ್ಟು ಹೋಗಿತ್ತು. ಪ್ರತಿದಿನ ಎಡಿಸನ್ ಹೊಸ ಉತ್ಸಾಹದಲ್ಲಿ, ಖುಶಿಯಲ್ಲಿ ತನ್ನ ಪ್ರಯೋಗಶಾಲೆ ಗೆ ಬರುತ್ತಿದ್ದ ಮತ್ತೆ ಹೊಸ ಪ್ರಯತ್ನ ಮಾಡಲು. ಮೂರು ವರ್ಷ, ಏಳು ನೂರು ಪ್ರಯತ್ನಗಳು ವ್ಯರ್ಥ ಆದರೂ ಎಡಿಸನ್ ತನ್ನ ಉತ್ಸಾಹ ಕಳೆದುಕೊಳ್ಳದಿರುವುದು ಬೇರೆಯವರಿಗೆಲ್ಲ ಅತೀ ಎನಿಸುತ್ತಿತ್ತು. ಅಲ್ಲಿನ ಪ್ರತಿಯೊಬ್ಬರಿಗೂ ಈ ಪ್ರಯೋಗದಿಂದ ಏನೂ ಸಾಧ್ಯವಾಗುವುದಿಲ್ಲ ಎನ್ನುವುದರ ಬಗ್ಗೆ ಖಾತ್ರಿ ಇತ್ತು. ಈ ಎಲ್ಲವೂ ವ್ಯರ್ಥ, ಹುಚ್ಚಾಟ ಎನ್ನುವುದು ಅವರ ಅನಿಸಿಕೆಯಾಗಿತ್ತು.
ಒಂದು ದಿನ ಎಲ್ಲರೂ ಸೇರಿ ಎಡಿಸನ್ ಗೆ ಹೇಳಿದರು, “ ನಾವು ೭೦೦ ಬಾರಿ ವಿಫಲರಾಗಿದ್ದೇವೆ, ನಮ್ಮಿಂದ ಏನನ್ನೂ ಸಾಧಿಸುವುದು ಸಾಧ್ಯವಾಗಿಲ್ಲ. ಇನ್ನೂ ನಾವು ಈ ಪ್ರಯತ್ನಗಳನ್ನು ನಿಲ್ಲಿಸಬೇಕು.” ಎಡಿಸನ್ ಜೋರಾಗಿ ನಗುತ್ತ ಉತ್ತರಿಸಿದ, “ ನೀವು ಯಾವುದರ ಬಗ್ಗೆ ಮಾತನಾಡುತ್ತಿದ್ದೀರ, ಯಾವುದು ವ್ಯರ್ಥ? ಈ 700 ಪ್ರಯತ್ನದ ದಾರಿಗಳು ನಮ್ಮ ಗುರಿ ಮುಟ್ಟಲು ಯೋಗ್ಯ ದಾರಿಗಳಲ್ಲ ಎನ್ನುವುದನ್ನು ಕಂಡುಕೊಳ್ಳಲು ನಾವು ಯಶಸ್ವಿಯಾಗಿದ್ದೇವೆ. ಸತ್ಯಕ್ಕೆ ನಾವು ಪ್ರತಿದಿನ ಹತ್ತಿರವಾಗುತ್ತಿದ್ದೇವೆ. ನಾವು ಆ 700 ಬಾಗಿಲುಗಳನ್ನು ತಟ್ಟದೇ ಹೋಗಿದ್ದರೆ, ಆ ಬಾಗಿಲುಗಳು ತಪ್ಪು ಬಾಗಿಲುಗಳು ಎನ್ನುವುದು ನಮಗೆ ಗೊತ್ತೇ ಆಗುತ್ತಿರಲಿಲ್ಲ. ಖಂಡಿತ ಇದು ದೊಡ್ಡ ಯಶಸ್ಸು !”
ಇದು ನಿಜವಾದ ಮೂಲಭೂತ ವೈಜ್ಞಾನಿಕ ದೃಷ್ಟಿಕೋನ. ಯಾವುದೋ ಒಂದು ದಾರಿ ತಪ್ಪು ದಾರಿ ಎಂದು ನಿಮಗೆ ಗೊತ್ತಾದರೂ ನೀವು ಸತ್ಯಕ್ಕೆ ಒಂದಿಷ್ಟು ಹತ್ತಿರವಾಗಿದ್ದೀರಿ. ನೀವು ನೇರವಾಗಿ ಹೋಗಿ ಕೊಂಡುಕೊಳ್ಳಲು ಸತ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸತ್ಯ ನಿಮಗೆ ಎಲ್ಲೂ ರೆಡಿಮೇಡ್ ಆಗಿ ಸಿಗುವುದಿಲ್ಲ. ಸತ್ಯವನ್ನು ದೊರಕಿಸಿಕೊಳ್ಳಲು ನಿಮಗೆ ಪ್ರಯೋಗದ ಹೊರತಾಗಿ ಬೇರೆ ದಾರಿಯೇ ಇಲ್ಲ. ಆದ್ದರಿಂದ ಯಾವಾಗಲೂ ಪ್ರಯೋಗಶೀಲರಾಗಿರಿ, ಅಹಂಕಾರವನ್ನು ಬೆಳೆಸಿಕೊಳ್ಳಬೇಡಿ, ನೀವು ಮಾಡುತ್ತಿರುವುದೆಲ್ಲ ಪರಫೆಕ್ಟ್ ಎಂದುಕೊಳ್ಳಬೇಡಿ. ಯಾವುದೂ ಪರಿಪೂರ್ಣವಲ್ಲ, ಅದನ್ನು ಇಂಪ್ರೂವ್ ಮಾಡುವ, ಹೆಚ್ಚು ಪರಿಪೂರ್ಣ ಮಾಡುವ ಸಾಧ್ಯತೆ ಯಾವಾಗಲೂ ಇರುತ್ತದೆ.


[…] ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/18/osho-475/ […]
LikeLike