ಸಮಸ್ಯೆಗಳು ( Problems ) : ಓಶೋ 365 #Day 32

ನಿಮಗೆ ಸಮಸ್ಯೆಗಳೇ ಇಲ್ಲ ಎಂದು ನೀವು ಧೃಡವಾಗಿ ನಂಬುವಿರಾದರೆ, ನಿಮಗೆ ಸಮಸ್ಯೆಗಳೇ ಇಲ್ಲದಿರುವುದು ಅನುಭವಕ್ಕೆ ಬರುತ್ತದೆ ! ಬಹುತೇಕ ಸಮಸ್ಯೆಗಳು ಕಟ್ಟು ನಂಬಿಕೆಗಳು ( make believe) ; ನೀವು ಅವನ್ನು ನಂಬುತ್ತೀರಾದ್ದರಿಂದ, ಅವು ನಿಮ್ಮೊಳಗೆ ಇವೆ  ~ ಓಶೋ ರಜನೀಶ್ , ಕನ್ನಡಕ್ಕೆ: ಚಿದಂಬರ ನರೇಂದ್ರ

    ಇದು ಒಂದು ಬಗೆಯ ಸ್ವ- ಸಮ್ಮೋಹಿನಿ ( autohypnosis), ನಾನು ಇರುವುದು ಹಾಗೆ – ಹೀಗೆ, ನಾನು ಅಸಮರ್ಥ, ನಾನು ಅಸಮರ್ಪಕ ಎಂದು ನೀವು ನಿರಂತರವಾಗಿ ಹೇಳುತ್ತ ಹೋಗುತ್ತೀರಿ. ಮತ್ತೆ ಮತ್ತೆ ನೀವು ಇದನ್ನು ರಿಪೀಟ್ ಮಾಡುತ್ತೀರಿ, ಆಗ ಇದು ನಿಮ್ಮ ಮಂತ್ರವಾಗುತ್ತದೆ; ನಿಮ್ಮ ಹೃದಯದ ಆಳಕ್ಕಿಳಿಯುತ್ತದೆ ಮತ್ತು ವಾಸ್ತವಗೊಳ್ಳುತ್ತ ಹೋಗುತ್ತದೆ.

    ನಿಮಗೆ ಯಾವ ಸಮಸ್ಯೆಯೂ ಇಲ್ಲವೆಂಬಂತೆ ಸುಮ್ಮನೇ ವ್ಯವಹರಿಸುತ್ತ ಹೋಗಿ, ಆಗ ಥಟ್ಟನೇ ನಿಮ್ಮ ಕ್ವಾಲಿಟಿ ಸಂಪೂರ್ಣವಾಗಿ ವಿಭಿನ್ನವಾಗಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ : ನಿಮ್ಮ ಎಲ್ಲ ಸಮಸ್ಯೆಗಳೂ ಮಾಯವಾಗುತ್ತವೆ. ನಂತರದ್ದು ಏನಿದ್ದರೂ ನಿಮ್ಮ ಮೇಲೆ ಡಿಪೆಂಡ್ ಆಗಿರುವಂಥದು, ನೀವು ಮತ್ತೆ ಆ ಸಮಸ್ಯೆಯನ್ನು ಅಪ್ಪಿಕೊಳ್ಳಬಹುದು ಅಥವಾ ಸಂಪೂರ್ಣವಾಗಿ ಡ್ರಾಪ್ ಮಾಡಿಬಿಡಬಹುದು. ಆ ಸಮಸ್ಯೆಯನ್ನು ಅಪ್ಪಿಕೊಂಡಿರುವುದು ನೀವು, ಸಮಸ್ಯೆ ನಿಮ್ಮನ್ನು ಹಿಡಿದುಕೊಂಡಿಲ್ಲ ಎನ್ನುವುದು ನಿಮಗೆ ಗೊತ್ತಾಗಿಬಿಟ್ಟರೆ, ಅದನ್ನು ಡ್ರಾಪ್ ಮಾಡುವುದು ಬಹಳ ಸುಲಭ. ಆದರೆ ನಮಗೆ ಸಮಸ್ಯೆಗಳಿಲ್ಲದೇ ಬದುಕುವುದು ನಿರಸ ಆದ್ದರಿಂದ ನಾವು ಸಮಸ್ಯೆಗಳನ್ನು ಸೃಷ್ಟಿಮಾಡಿಕೊಳ್ಳುತ್ತ ಹೋಗುತ್ತೇವೆ. ಸಮಸ್ಯೆಗಳಿಲ್ಲದೇ ಹೋದರೆ ನಮಗೆ ಒಂಟಿತನ ಕಾಡುತ್ತದೆ, ಮಾಡಲು ಏನೂ ಇಲ್ಲವಲ್ಲ ಎನ್ನುವ ಬೇಸರ ಕಾಡುತ್ತದೆ. ಆದರೆ ಸಮಸ್ಯೆಗಳಿದ್ದರೆ ನಮಗೆ ಏನೋ ಖುಶಿ, ಸಮಸ್ಯೆ ಪರಿಹರಿಸಿಕೊಳ್ಳುವ ಕೆಲಸವೊಂದು ಸಿಕ್ಕಿತಲ್ಲ ಎನ್ನುವ ಸಮಾಧಾನ, ಏನೋ busy ಆಗಿರುವ ತೃಪ್ತಿ.

    ನಾನು ಅಸಮರ್ಪಕ, ಅಸಮರ್ಥ ಎನ್ನುವ ಯೋಚನೆ ಮೂಲಭೂತವಾಗಿ ಸೃಷ್ಟಿಯಾಗಿರುವುದು ನಿಮ್ಮ ಅಹಂ ಕಾರಣವಾಗಿ. ನಿಮಗೆ ನೀವು ತುಂಬ ಸಮರ್ಪಕ ( adequate) ಆಗ ಬಯಸುವ ಆಸೆ, ಆದರೆ ಯಾಕೆ? ನಿಮಗೆ ನೀವು ತುಂಬ ಸಮರ್ಥರಾಗುವ ( capable) ಬಯಕೆ, ಆದರೆ ಯಾಕೆ? ಯಾಕೆ ನೀವು ನಿಮ್ಮಅಸಮರ್ಥತೆಗಳು ಮತ್ತು ಮಿತಿಗಳ ಕುರಿತು ತೃಪ್ತರಾಗಿಲ್ಲ? ಒಮ್ಮೆ ನೀವು ನಿಮ್ಮ ಅಸಮರ್ಥತೆಗಳನ್ನ, ಮತ್ತು ಮಿತಿಗಳನ್ನ ಒಪ್ಪಿಕೊಂಡುಬಿಟ್ಟರೆ, ನೀವು ಅತ್ಯಂತ ಸರಾಗವಾಗಿ ಹರಿಯುತ್ತಿರುವ ಅನುಭವ ನಿಮ್ಮದಾಗುತ್ತದೆ.

    ಒಂದು ದಿನ ಒಬ್ಬ ಸಾಧಕ, ಸೂಫಿ ಅನುಭಾವಿ ಶೇಖ್ ಫರೀದ್ ನ ಬಳಿ ಬಂದು ಕೇಳಿಕೊಂಡ,

    “ ನನ್ನನ್ನು ಕಟ್ಟಿಹಾಕಿರುವ ಬಂಧನಗಳಿಂದ, ಸಿದ್ಧಾಂತಗಳಿಂದ, ಪೂರ್ವಾಗ್ರಹಗಳಿಂದ ಬಿಡಿಸಿಕೊಳ್ಳುವುದು ಹೇಗೆ? “

    ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಫರೀದ್ ಓಡಿ ಹೋಗಿ ಹತ್ತಿರದ ಕಂಬವೊಂದನ್ನ ಗಟ್ಟಿಯಾಗಿ ಹಿಡಿದುಕೊಂಡು ಕೂಗತೊಡಗಿದ,

    “ ಯಾರಾದರೂ ನನ್ನನ್ನ ಈ ಕಂಬದಿಂದ ಬಿಡಿಸಿ “

    ಫರೀದ್ ನ ಕೂಗಾಟ ಕೇಳುತ್ತಿದ್ದಂತೆಯೇ ಸುತ್ತ ಮುತ್ತಲಿನ ಜನ ಅಲ್ಲಿ ಬಂದು ಸೇರಿದರು. ಅವರಲ್ಲಿ ಹಿರಿಯ ಮನುಷ್ಯನೊಬ್ಬ ಫರೀದ್ ನ ಗದರಿಸಿದ.

    “ ಫರೀದ್, ನಿನಗೆ ಹುಚ್ಚು ಹಿಡಿದಿದೆಯಾ? ಕಂಬ ಹಿಡಿದುಕೊಂಡಿರೋದು ನೀನು, ಕಂಬ ನಿನ್ನ ಹಿಡಿದುಕೊಂಡಿಲ್ಲ, ಸುಮ್ಮನೇ ತರಲೆ ಮಾಡಬೇಡ”

    “ತರಲೆ ಮಾಡುತ್ತಿರೋದು ನಾನಲ್ಲ, ಆ ಮನುಷ್ಯ” ಫರೀದ್ ಪ್ರಶ್ನೆ ಕೇಳಿದ ಸಾಧಕನತ್ತ ಕೈ ಚಾಚಿ ತೋರಿಸಿದ.

    ಫರೀದ್ ನ ಮಾತು ಕೇಳುತ್ತಿದ್ದಂತೆಯೇ ಸಾಧಕನಿಗೆ ನಾಚಿಕೆಯಾಯಿತು. ಆತ ಓಡಿ ಬಂದು ಫರೀದ್ ನ ಪಾದ ಮುಟ್ಟಿ ಕ್ಷಮೆ ಕೇಳಿದ.


    ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/18/osho-475/

    Unknown's avatar

    About ಅರಳಿ ಮರ

    ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ