ಬಯಕೆಗಳು ಸಾಕಷ್ಟು ಆದರೆ ಅವಶ್ಯಕತೆಗಳು ಕೆಲವು ಮಾತ್ರ. ಅವಶ್ಯಕತೆಗಳನ್ನ ಪೂರೈಸಿಕೊಳ್ಳಬಹುದು ಆದರೆ ಬಯಕೆಗಳನ್ನ ಪೂರ್ಣ ಮಾಡಿಕೊಳ್ಳುವುದು ಅಸಾಧ್ಯ. ಬಯಕೆಗಳನ್ನು ಪೂರೈಸಿಕೊಳ್ಳಲು ನೀವು ಹೆಚ್ಚು ಹೆಚ್ಚು ಪ್ರಯತ್ನ ಮಾಡಿದಂತೆಲ್ಲ ಬಯಕೆಗಳು ಹೆಚ್ಚಾಗುತ್ತಲೇ ಹೋಗುತ್ತವೆ… ~ ಓಶೋ ರಜನೀಶ್; ಕನ್ನಡಕ್ಕೆ; ಚಿದಂಬರ ನರೇಂದ್ರ
ಒಂದು ಸೂಫಿ ಕಥೆಯಿದೆ. ಅಲೆಕ್ಸಾಂಡರ್ ಸತ್ತು ಸ್ವರ್ಗಕ್ಕೆ ಹೋದಾಗ, ಅವನು ತನ್ನ ಜೊತೆ ತನ್ನ ರಾಜ್ಯ, ಚಿನ್ನ, ವಜ್ರ ಮುಂತಾದ ಎಲ್ಲ ಸಂಪತ್ತಿನ ಭಾರ ಹೊತ್ತಿದ್ದ. ವಾಸ್ತವದಲ್ಲಿ ಅಲ್ಲ as a idea. ಅವನು ತಾನು ಅಲೆಕ್ಸಾಂಡರ್ ಆಗಿದ್ದರ ಭಾರವನ್ನು ಹೊತ್ತುಕೊಂಡು ಹೋಗಿದ್ದ.
ಸ್ವರ್ಗದ ದ್ವಾರಪಾಲಕ ಅಲೆಕ್ಸಾಂಡರ್ ನ ನೋಡಿ ನಗುತ್ತ ಪ್ರಶ್ನೆ ಮಾಡಿದ, “ ಯಾಕೆ ಇಷ್ಟೊಂದು ಹೊರೆ ಹೊತ್ತುಕೊಂಡಿದ್ದೀಯ? “
“ ಯಾವ ಹೊರೆ ?” ಅಲೆಕ್ಸಾಂಡರ್ ಆಶ್ಚರ್ಯಚಕಿತನಾದ. ದ್ವಾರಪಾಲಕ ಅವನಿಗೊಂದು ತಕ್ಕಡಿ ಕೊಟ್ಟು, ತಕ್ಕಡಿಯ ಒಂದು ಭಾಗದಲ್ಲಿ ಒಂದು ಕಣ್ಣನ್ನಿಟ್ಟು ಇನ್ನೊಂದು ಭಾಗದಲ್ಲಿ ಅಲೆಕ್ಸಾಂಡರ್ ನಿಗೆ ತನ್ನ ಸಂಪತ್ತು, ಪ್ರಸಿದ್ಧಿ , ಮಹಾನತೆ, ಗೌರವ ಎಲ್ಲವನ್ನೂ ಇಡುವಂತೆ ಹೇಳಿದ. ಆದರೆ ಒಂದು ಕಣ್ಣಿನ ಭಾರವೇ ಅಲೆಕ್ಸಾಂಡರ್ ನ ಎಲ್ಲ ಸಂಪತ್ತಿಗಿಂತ ಹೆಚ್ಚು ತೂಗುತ್ತಿತ್ತು.
ಆಗ ದ್ವಾರಪಾಲಕ ಹೇಳಿದ, ಇದು ಮನುಷ್ಯನ ಕಣ್ಣು, ಇದು ಮನುಷ್ಯ ಬಯಕೆಗಳನ್ನು ಪ್ರತಿನಿಧಿಸುತ್ತದೆ. ನೀನು ಎಂಥ ಮಹಾನ್ ಚಕ್ರವರ್ತಿಯಾಗಿದ್ದರೂ ಎಂಥ ವೀರ ಯೋಧನಾಗಿದ್ದರೂ ಇದನ್ನು ಸರಿದೂಗಿಸುವುದು ಸಾಧ್ಯವಿಲ್ಲ. ಹೀಗೆ ಹೇಳುತ್ತ ದ್ವಾರಪಾಲಕ ಕಣ್ಣಿನ ಮೇಲೆ ಒಂದಿಷ್ಟು ಧೂಳು ಎಸೆದ. ತಕ್ಷಣ ಕಣ್ಣು ಬ್ಲಿಂಕ್ ಆಗತೊಡಗಿತು, ಅದರ ಭಾರ ಒಮ್ಮೆಲೇ ಇಳಿದು ಹೋಯಿತು.
ಬಯಕೆಯ ಕಣ್ಣಿನ ಮೇಲೆ ತಿಳುವಳಿಕೆಯ ಧೂಳು ಬೀಳುವಂತೆ ನೋಡಿಕೊಳ್ಳಬೇಕು. ಆಗ ಬಯಕೆಗಳು ಮಾಯವಾಗಿ ಕೇವಲ ಅವಶ್ಯಕತೆಗಳು ಉಳಿದುಕೊಳ್ಳುತ್ತವೆ. ಅವಶ್ಯಕತೆಗಳು ಕೆಲವೇ ಕೆಲವು ಮಾತ್ರ ಮತ್ತು ಅವು ಬಹಳ ಸುಂದರ. ಬಯಕೆಗಳು ಕುರೂಪಿಗಳು ಮತ್ತು ಅವು ಮನುಷ್ಯನನ್ನು ರಾಕ್ಷಸನನ್ನಾಗಿಸುತ್ತವೆ. ಅವು ಹುಚ್ಚುತನವನ್ನು ಹುಟ್ಟುಹಾಕುತ್ತವೆ. ಒಮ್ಮೆ ನೀವು ಸಮಾಧಾನದಿಂದ ಬದುಕುವುದನ್ನ ಕಲಿತಾಗ ನಿಮಗೆ ಇರಲು ಸಣ್ಣ ಕೋಣೆ ಸಾಕಾಗುತ್ತದೆ, ಉಣ್ಣಲು ಸ್ವಲ್ಪ ಆಹಾರ ಸಾಕಾಗುತ್ತದೆ, ಕೆಲವೇ ಕೆಲವು ಬಟ್ಟೆಗಳು ಸಾಕಾಗುತ್ತವೆ. ಆಗ ಒಬ್ಬ ಪ್ರೇಮಿಯಲ್ಲೇ ಸಾಕಷ್ಟು ಪ್ರೇಮವನ್ನು ನೀವು ಅನುಭವಿಸುತ್ತೀರಿ.
ಒಂದು ದಿನ ನಸ್ರುದ್ದೀನ್, ತನ್ನ ಗೆಳೆಯನೊಂದಿಗೆ ಗಾರ್ಡನ್ ಒಂದರಲ್ಲಿ ಮರದ ಕೆಳಗೆ ಕುಳಿತಿದ್ದ. ಹಕ್ಕಿಗಳ ಕಲರವ, ಹಿತವಾಗಿ ಬೀಸುತ್ತಿದ್ದ ತಂಪು ಗಾಳಿ ವಾತಾವರಣವನ್ನು ಅತ್ಯಂತ ಪ್ರಶಾಂತಮಯವನ್ನಾಗಿಸಿದ್ದವು.
“ ನನಗೆ ಹತ್ತು ಲಕ್ಷ ದಿನಾರ್ ಕೊಟ್ಟರೂ ನಾನು ಈ ಜಾಗ ಬಿಟ್ಟು ಹೋಗುವುದಿಲ್ಲ “
ನಸ್ರುದ್ದೀನ್ ಆ ಸುಂದರ ಜಾಗದ ಪ್ರಶಂಸೆ ಮಾಡಿದ.
“ ಐವತ್ತು ಲಕ್ಷ ದಿನಾರ್ ಕೊಟ್ಟರೆ ? “
ಗೆಳೆಯ ಪ್ರಶ್ನೆ ಮಾಡಿದ.
“ ಸಾಧ್ಯವಿಲ್ಲ, ಐವತ್ತು ಲಕ್ಷ ದಿನಾರ್ ಕೊಟ್ಟರೂ ನಾನು ಈ ಜಾಗ ಬಿಡುವುದಿಲ್ಲ “
ನಸ್ರುದ್ದೀನ್ ಖಡಾ ಖಂಡಿತವಾಗಿ ತನ್ನ ತೀರ್ಮಾನ ಪುನರುಚ್ಚರಿಸಿದ.
“ ಹೋಗಲಿ ಬೇಡು ನಸ್ರುದ್ದೀನ್, ಬಾ ಆ ಬದಿಯ ಗೇಟಲ್ಲಿ ಒಳ್ಳೆಯ ಚಹಾ ಸಿಗತ್ತೆ “
ಗೆಳೆಯ, ನಸ್ರುದ್ದೀನ್ ನನ್ನು ಆಹ್ವಾನಿಸಿದ.
“ ಈಗ ನೀನು ನಿಜವಾಗಿ ಪ್ರ್ಯಾಕ್ಟಿಕಲ್ ಆಗಿ ಮಾತನಾಡುತ್ತಿದ್ದೀಯ “
ನಸ್ರುದ್ದೀನ್ ಥಟ್ಟನೇ ಎದ್ದು ಗೆಳೆಯನನ್ನು ಹಿಂಬಾಲಿಸಿದ.
ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/22/osho-480/


[…] ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/23/osho-481/ […]
LikeLike