ಸೆಲ್ಫ್ ಇಂಪ್ರೂವ್ಮೆಂಟ್ ಎನ್ನುವುದು ನರಕದ ಹಾದಿ. ಆದರ್ಶದ ಬೆನ್ನು ಹತ್ತಿ ನಿಮ್ಮನ್ನು ನೀವು ಇಂಪ್ರೂವ್ ಮಾಡಿಕೊಳ್ಳುವ ಪ್ರಯತ್ನಗಳೆಲ್ಲ ಹುಚ್ಚುತನ. ಆದರ್ಶಗಳು, ಹುಚ್ಚುತನದ ಕಾರಣಗಳು ಮತ್ತು ಸಮಸ್ತ ಮಾನವತೆ ಮಾನಸಿಕ ತೊಂದರೆಯಿಂದ ಬಳಲುತ್ತಿರುವುದು, ಅದು ಆದರ್ಶಗಳ ಬೆನ್ನುಹತ್ತಿರುವ ಕಾರಣವಾಗಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರಾಣಿಗಳು ಮಾನಸಿಕ ರೋಗಿಗಳಲ್ಲ ಏಕೆಂದರೆ ಅವುಗಳಿಗೆ ಯಾವ ಮಾದರಿ, ಯಾವ ಆದರ್ಶವೂ ಇಲ್ಲ. ಗಿಡ ಮರಗಳು ಮಾನಸಿಕ ರೋಗಿಗಳಲ್ಲ ಏಕೆಂದರೆ ಅವುಗಳಿಗೆ ಕೂಡ ಯಾವ ಮಾದರಿ ಇಲ್ಲ. ಅವು ಇನ್ನೊಂದರ ಥರ ಆಗುವ ಪ್ರಯತ್ನ ಮಾಡುತ್ತಿಲ್ಲ. ಅವು ಸುಮ್ಮನೇ ತಾವು ಈಗ ಇರುವ ತಮ್ಮತನವನ್ನು ಆನಂದಿಸುತ್ತಿವೆ.
ನೀವು ನಿಮ್ಮ ಹಾಗೆ ( You are you). ಆದರೆ ನಿಮ್ಮ ಅಂತರಾಳದಲ್ಲೆಲ್ಲೋ ನೀವು ಬುದ್ಧ ಆಗಲು ಬಯಸುತ್ತಿದ್ದೀರಿ, ಜೀಸಸ್ ಆಗುವ ಆಸೆ ಇಟ್ಟುಕೊಂಡಿದ್ದೀರಿ. ಆಗ ನೀವು ಎಲ್ಲೂ ಕೊನೆಯಾಗದ ವಿಷವೃತ್ತವೊಂದರ ಭಾಗವಾಗುತ್ತೀರಿ. “ನೀವು ನಿಮ್ಮ ಹಾಗೆ” ಎನ್ನುವ ಮಾತಿನ ಮಹತ್ವವನ್ನು ಗಮನಿಸಿ. ಇಡೀ ಅಸ್ತಿತ್ವ, ಇಡೀ ಸಮಸ್ತ, ನೀವು ನಿಮ್ಮ ಹಾಗಿರಬೇಕು ಎಂದು ಬಯಸುತ್ತದೆ. ಆ ಕಾರಣವಾಗಿಯೇ ಅಸ್ತಿತ್ವ ನಿಮ್ಮನ್ನು ಸೃಷ್ಟಿಸಿರುವುದು, ಇಲ್ಲವಾದರೆ ಅದು ತನಗೆ ಬೇಕಾದಂಥ ಇನ್ನೊಂದು ಮಾದರಿಯನ್ನು ಸೃಷ್ಟಿ ಮಾಡುತ್ತಿತ್ತು. ಅಸ್ತಿತ್ವ, ಈ ಕ್ಷಣದಲ್ಲಿ ನೀವು, ನೀವಾಗಿಯೇ ಇರಬೇಕೆಂದು ಬಯಸುತ್ತದೆ. ನಿಮ್ಮ ಜಾಗದಲ್ಲಿ ಅದು ಜೀಸಸ್ ನ ಕಾಣಲು ಬಯಸುವುದಿಲ್ಲ. ಬದುಕಿಗೆ ಯಾವುದು ಒಳ್ಳೆಯದು ಎನ್ನುವುದು ಅಸ್ತಿತ್ವಕ್ಕೆ ಚೆನ್ನಾಗಿ ಗೊತ್ತು. ಸಮಗ್ರ ಕ್ಕೆ ಯಾವಾಗಲೂ ಬಿಡಿ ಭಾಗಕ್ಕಿಂತ ವಿಷಯ ಚೆನ್ನಾಗಿ ಗೊತ್ತು.
ಆದ್ದರಿಂದ ನೀವು ನಿಮ್ಮನ್ನು, ಇರುವ ಹಾಗೆ ಸ್ವೀಕಾರ ಮಾಡಿ. ನೀವು ನಿಮ್ಮನ್ನು ಇರುವ ಹಾಗೆ ಸ್ವೀಕರಿಸುವುರಾದರೆ, ಬದುಕಿನ ರಹಸ್ಯವೊಂದನ್ನು ನೀವು ಅರ್ಥ ಮಾಡಿಕೊಂಡಿದ್ದೀರ, ಮತ್ತು ಮುಂದಿನದೆಲ್ಲ ತಾನೇ ತಾನಾಗಿ ಸಂಭವಿಸುತ್ತದೆ. ನೀವು ಸುಮ್ಮನೇ ನಿಮ್ಮ ಹಾಗೆ ಇರಿ. ನಿಮ್ಮನ್ನು ಸುಧಾರಿಸಿಕೊಳ್ಳುವ ಯಾವ ಅವಶ್ಯಕತೆಯೂ ಇಲ್ಲ. ನೀವು ಇನ್ನೊಂದು ಮುಖವನ್ನು ಹೊಂದುವ ಯಾವ ಅಗತ್ಯವೂ ಇಲ್ಲ. ನೀವು ಸಮ್ಮನೇ ನಿಮ್ಮ ಹಾಗೆ ಇರಿ ಮತ್ತು ಇಂಥ ಇರುವಿಕೆಯನ್ನು ಆಳದಲ್ಲಿ ಮುಕ್ತವಾಗಿ ಸ್ವೀಕಾರ ಮಾಡಿ. ಆಗ ಒಂದು ಅರಳುವಿಕೆ ನಿಮ್ಮೊಳಗೆ ಸಂಭವಿಸುತ್ತದೆ ಮತ್ತು ನೀವು ಹೆಚ್ಚು ಹೆಚ್ಚು ನಿಮ್ಮ ಹಾಗೆ ಆಗುತ್ತ ಹೋಗುತ್ತೀರಿ.
ಒಮ್ಮೆ ನೀವು ಇನ್ನೊಬ್ಬರ ಹಾಗೆ ಆಗುವ ಐಡಿಯಾವನ್ನು ಡ್ರಾಪ್ ಮಾಡಿಬಿಟ್ಟರೆ, ಆಗ ನಿಮ್ಮೊಳಗೆ ಯಾವ ಒತ್ತಡವೂ ಇರುವುದಿಲ್ಲ. ಥಟ್ಟನೇ ನಿಮ್ಮೊಳಗಿನ ಎಲ್ಲ ಒತ್ತಡವೂ ಮಾಯವಾಗಿಬಿಡುತ್ತದೆ. ಆಗ ನೀವು, ಇನ್ನಷ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುವುವಿರಿ. ಆಗ ನೀವು ಮಾಡುವುದು ಏನೂ ಇರುವುದಿಲ್ಲ, ಸಂಭ್ರಮಿಸುವುದರ ಹೊರತಾಗಿ.
ಸೂಫೀ ಅನುಭಾವಿ ಝೂಸಿಯಾ ಸಾವಿನ ಹಾಸಿಗೆಯಲ್ಲಿದ್ದ. ಒಂದು ಮುಂಜಾನೆ ಆತ ಭಗವಂತನನ್ನು ಪ್ರಾರ್ಥಿಸತೊಡಗಿದ. ಅವನ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಆತ ಕಂಪಿಸುತ್ತಿದ್ದ.
ಈ ದೃಶ್ಯವನ್ನು ನೋಡಿದ ಶಿಷ್ಯನೊಬ್ಬ ಪ್ರಶ್ನೆ ಮಾಡಿದ.
“ ಯಾಕೆ? ಏನಾಯ್ತು ? ಯಾಕಿಷ್ಟು ತೀವ್ರವಾಗಿ ಕಂಪಿಸುತ್ತಿದ್ದೀರಿ? “
ಝೂಸಿಯಾ ಉತ್ತರಿಸಿದ.
“ ನನ್ನ ಈ ಪರಿಸ್ಥಿತಿಗೆ ಕಾರಣವಿದೆ, ನಾನು ಸಾವಿಗೆ ಹತ್ತಿರವಾಗಿದ್ದೇನೆ. ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ನಾನು ಸಾಯಬಹುದು. ನಾನು ಸತ್ತು, ಭಗವಂತನ ಮುಂದೆ ಹೋಗಿ ನಿಂತಾಗ ಅವ, “ ಯಾಕೆ ಝೂಸಿಯಾ, ನೀನು ಮೋಸೆಸ್ ಹಾಗೆ ಬದುಕಲಿಲ್ಲ ? “ ಅಂತ ಪ್ರಶ್ನೆ ಕೇಳಿದರೆ, ನನ್ನ ಹತ್ತಿರ ಉತ್ತರವಿದೆ.
“ ಭಗವಂತಾ, ನೀನು ನನಗೆ ಮೋಸೆಸ್ ನ ಗುಣ ವಿಶೇಷಣಗಳನ್ನು ದಯಪಾಲಿಸಲಿಲ್ಲ” ಎಂದು ಉತ್ತರಿಸುತ್ತೇನೆ.
ಅಕಸ್ಮಾತ್ ಭಗವಂತ “ ಯಾಕೆ ನೀನು ಅಕೀಬಾನ ಥರ ಬಾಳಲಿಲ್ಲ ? “ ಎಂದರೆ ಅದಕ್ಕೂ ನನ್ನ ಹತ್ತಿರ ಉತ್ತರವಿದೆ. ಭಗವಂತ ನನಗೆ ಅಕೀಬಾನ ಸ್ವಭಾವಗಳನ್ನೂ ದಯಪಾಲಿಸಿಲ್ಲ.
ಆದರೆ ಅವನೇನಾದರೂ ನನಗೆ “ ಝೂಸಿಯಾ, ಯಾಕೆ ನೀನು ಝೂಸಿಯಾನ ಹಾಗೆ ಬದುಕಲಿಲ್ಲ” ಎಂದು ಕೇಳಿದರೆ, ಏನು ಉತ್ತರ ಕೊಡಲಿ? ಅದಕ್ಕೇ ನನ್ನ ಕಣ್ಣಲ್ಲಿ ನೀರು, ಅದಕ್ಕೇ ನಾನು ನಡಗುತ್ತಿದ್ದೇನೆ. ನನ್ನ ಜೀವನವಿಡೀ ನಾನು ಮೋಸೆಸ್ ಥರ, ಅಕೀಬಾ ಥರ ಬದುಕಲು ಪ್ರಯತ್ನ ಮಾಡಿದೆ. ಆದರೆ ಭಗವಂತ ನನ್ನನ್ನು ಝೂಸಿಯಾ ಥರ ಬಾಳಲು ಹುಟ್ಟಿಸಿದ್ದಾನೆ, ಝೂಸಿಯಾನ ಎಲ್ಲ ಗುಣ ವಿಶೇಷಣಗಳನ್ನೂ ದಯಪಾಲಿಸಿ ಆಶೀರ್ವದಿಸಿದ್ದಾನೆ ಎನ್ನುವುದು ಮರೆತೇ ಹೋಗಿತ್ತು. ಹೇಗೆ ಅವನ ಮುಂದೆ ಹೋಗಿ ನಿಲ್ಲಲಿ? ಹೇಗೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ? ಭಯವಾಗುತ್ತಿದೆ ನನಗೆ.”

