ಎಲ್ಲ ಸಂಬಂಧಗಳೂ ಕಾಲ್ಪನಿಕ ಏಕೆಂದರೆ, ನಿಮ್ಮಿಂದ ನೀವು ಎಲ್ಲಿಗಾದರೂ ಹೊರಗೆ ಹೋಗುತ್ತೀರಾದರೆ ಅದು ಕಲ್ಪನೆಯ ಬಾಗಿಲ ಮೂಲಕ. ಈ ಬಾಗಿಲನ್ನು ಬಿಟ್ಚರೆ ಇನ್ನೊಂದು ಬಾಗಿಲು ಇಲ್ಲ. – ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಗೆಳೆಯ ಮತ್ತು ವೈರಿ : ಇಬ್ಬರೂ ನಿಮ್ಮ ಕಲ್ಪನೆಯ ಭಾಗ. ಯಾವಾಗ ನೀವು ಕಲ್ಪಿಸಿಕೊಳ್ಳುವುದನ್ನ ನಿಲ್ಲಿಸುತ್ತೀರೋ ಆಗ ಒಂಟಿಯಾಗುತ್ತೀರ, ಸಂಪೂರ್ಣವಾಗಿ ಏಕಾಂಗಿ. ಒಮ್ಮೆ ನಿಮಗೆ ಬದುಕು ಮತ್ತು ಅದರ ಎಲ್ಲ ಸಂಬಂಧಗಳು ಕಲ್ಪನೆ ಎನ್ನುವುದು ಅರ್ಥವಾಯಿತೆಂದರೆ, ಆಗ ನೀವು ಬದುಕಿನ ವಿರುದ್ಧ ಹೋಗುವುದಿಲ್ಲ, ಆದರೆ ಈ ತಿಳುವಳಿಕೆ ನಿಮ್ಮ ಕಲ್ಪನೆಯನ್ನು ಶ್ರೀಮಂತಗೊಳಿಸಿಕೊಳ್ಳಲು ಸಹಾಯಮಾಡುತ್ತದೆ. ಎಲ್ಲ ಸಂಬಂಧಗಳೂ ಕಲ್ಪನೆ ಎನ್ನುವುದು ಈಗ ನಿಮಗೆ ಅರ್ಥವಾಗಿರುವಾಗ, ಯಾಕೆ ಈ ಸಂಬಂಧಗಳಲ್ಲಿ ಇನ್ನಷ್ಟು ಕಲ್ಪನೆಗಳನ್ನು ಸೇರಿಸಬಾರದು? ಯಾಕೆ ಈ ಸಂಬಂಧಗಳನ್ನು ಇನ್ನಷ್ಟು ಆಳವಾಗಿ ಆನಂದಿಸಬಾರದು? ಯಾವಾಗ ಹೂವು ಎನ್ನುವುದು ನಿಮ್ಮ ಕಲ್ಪನೆಯೋ, ಆಗ ಯಾಕೆ ಇನ್ನಷ್ಟು ಸುಂದರವಾದ ಹೂವನ್ನು ಕಲ್ಪನೆ ಮಾಡಿಕೊಳ್ಳಬಾರದು? ಯಾಕೆ ಸಾಧಾರಣವಾದ ಹೂವಿಗೆ ನಮ್ಮ ಕಲ್ಪನೆಯನ್ನು ಸೀಮಿತಗೊಳಿಸಿಕೊಳ್ಳಬೇಕು? ಮುತ್ತು, ರತ್ನ, ವಜ್ರ ಖಚಿತ ಹೂವನ್ನು ಯಾಕೆ ಕಲ್ಪಿಸಿಕೊಳ್ಳಬಾರದು?
ನಿಮ್ಮ ಕಲ್ಪನೆ ಏನಿದೆಯೋ ಹಾಗೇ ಇರಲಿ. ಕಲ್ಪನೆ ಪಾಪ ಅಲ್ಲ, ಅದು ಒಂದು ಸಾಮರ್ಥ್ಯ. ಅದು ಒಂದು ಸೇತುವೆ. ಹೇಗೆ ಸೇತುವೆ ಎರಡು ದಂಡೆಗಳ ನಡುವಿನ ಕೊಂಡಿಯಾಗಿದೆಯೋ, ಹಾಗೆಯೇ ಕಲ್ಪನೆ ಇಬ್ಬರು ಮನುಷ್ಯರ ನಡುವಿನ ಸೇತುವೆ. ಇಬ್ಬರು ಮನುಷ್ಯರು ಈ ಸೇತುವೆಯನ್ನು ಕಲ್ಪಿಸಿಕೊಂಡು ಅದನ್ನು ಪ್ರೀತಿ ಎನ್ನುತ್ತಾರೆ, ನಂಬಿಕೆ ಎನ್ನುತ್ತಾರೆ, ಆದರೆ ಇದು ಶುದ್ಧ ಕಲ್ಪನೆ. ಕಲ್ಪನೆಯೊಂದೇ ಮನುಷ್ಯನೊಳಗಿರುವ ಸೃಜನಶೀಲ ಸಾಮಗ್ರಿ, ಆದ್ದರಿಂದ ಯಾವುದೆಲ್ಲ ಸೃಜನಶೀಲವೋ ಅದೆಲ್ಲವೂ ಕಲ್ಪನೆಯ ಭಾಗ. ಆದ್ದರಿಂದ ಈ ಕಲ್ಪನೆಯನ್ನು ಆನಂದಿಸಿ, ಇನ್ನಷ್ಟು ಮತ್ತಷ್ಟು ಸುಂದರವಾಗಿಸಿಕೊಳ್ಳಿ. ಆಗ ನೀವು ಒಂದು ಪಾಯಿಂಟ್ ತಲುಪುತ್ತೀರಿ, ಅಲ್ಲಿ ನಿಮಗೆ ಸಂಬಂಧಗಳ ಮೇಲೆ ಅವಲಂಬನೆ ಬೇಕಾಗುವುದಿಲ್ಲ. ಆಗ ನೀವು ಹಂಚಿಕೊಳ್ಳುತ್ತೀರಿ. ಆಗ ನಿಮ್ಮ ಬಳಿ ಇರುವುದನ್ನ ಇನ್ನೊಬ್ಬರ ಜೊತೆ ತೃಪ್ತಿಯಿಂದ ಹಂಚಿಕೊಳ್ಳುತ್ತೀರಿ. ಎಲ್ಲ ಪ್ರೇಮವೂ ಇಮ್ಯಾಜಿನೇಷನ್, ಅದನ್ನು ನಾನು ಜಗತ್ತು ಸಾಧಾರಣವಾಗಿ ಹೇಳುವ ಋಣಾತ್ಮಕ ಅರ್ಥದಲ್ಲಿ ಹೇಳುತ್ತಿಲ್ಲ. ಕಲ್ಪನೆ ಒಂದು ದೈವಿಕ ಶಕ್ತಿ ಎನ್ನುವ ಅರ್ಥದಲ್ಲಿ ಹೇಳುತ್ತಿದ್ದೇನೆ.
ಒಂದು ದಿನ ನಸ್ರುದ್ದೀನ್ ಗೆಳೆಯನಿಗೆ ತನ್ನ ಆಸೆಯನ್ನು ಹೇಳಿದ.
“ಮತ್ತೊಮ್ಮೆ ಸುಲ್ತಾನನ ಮಗಳಿಗೆ ಕಿಸ್ ಮಾಡಬೇಕು ಅನಿಸ್ತಾ ಇದೆ. “
“ಏನು, ರಾಜಕುಮಾರಿಗೆ ಮೂದಲೂ ಒಮ್ಮೆ ಕಿಸ್ ಮಾಡಿದ್ಯಾ ? “. ಗೆಳೆಯನಿಗೆ ಆಶ್ಚರ್ಯ
“ಇಲ್ಲ ಮೂದಲೂ ಒಮ್ಮೆ ರಾಜಕುಮಾರಿಗೆ ಕಿಸ್ ಕೊಡಬೇಕು ಅಂತ ಅನಿಸಿತ್ತು. “
ನಸ್ರುದ್ದೀನ್ ವಿಷಯ ತಿಳಿಸಿದ.
********************************

