ನೀವು ಹೆಚ್ಚು ಹೆಚ್ಚು ನಿಮ್ಮ ಒಳಗಲ್ಲಿ ನೆಲೆಯಾಗುತ್ತಿದ್ದಂತೆಯೇ ಹೆಚ್ಚು ಹೆಚ್ಚು ನಿರಾಳತೆಯನ್ನು ಅನುಭವಿಸುತ್ತೀರಿ, ಸಂಬಂಧಗಳಲ್ಲಿ ಆಳವಾಗಿ ಪ್ರವೇಶಿಸುವ ಅವಕಾಶಗಳನ್ನು ಪಡೆದುಕೊಳ್ಳುತ್ತೀರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸಂಬಂಧಗಳನ್ನು ಪ್ರವೇಶಿಸುವವರು ಸ್ವತಃ ನೀವಾಗಿದ್ದೀರಿ. ನಿಮ್ಮೊಳಗೆ ನೀವು ಇಲ್ಲದಿರುವಾಗ, ನೀವು ಒತ್ತಡದಲ್ಲಿರುವಾಗ, ನೀವು ಚಿಂತಿತರಾಗಿರುವಾಗ, ನೀವು ಡ್ಯಾಮೇಜ್ ಆಗಿರುವಾಗ, ಮತ್ತು ಒಡೆದು ಚೂರಾಗಿರುವಾಗ, ಸಂಬಂಧವನ್ನು ಪ್ರವೇಶಿಸುವವರು ಯಾರು? ನಾವು ಒಡೆದು ಚೂರಾಗಿರುವ ಕಾರಣದಿಂದ ಸಂಬಂಧಗಳ ಆಳ ಪದರುಗಳನ್ನು ಪ್ರವೇಶಿಸಲು ನಾವು ನಿಜವಾಗಿ ಭಯಪಡುತ್ತೇವೆ, ಎಲ್ಲಿ ನಮ್ಮ ವಾಸ್ತವ ಅನಾವರಣಗೊಳ್ಳುತ್ತದೋ ಎನ್ನುವ ಅಂಜಿಕೆ ನಮಗೆ. ನಮ್ಮ ಹೃದಯವನ್ನು ತೆರೆದಿಡಬೇಕಾಗಿರುವುದರಿಂದ ನಮ್ಮ ಒಡೆದ ಹೃದಯ ಕಾಣಿಸಿಕೊಳ್ಳಬಹುದು ಎನ್ನುವ ಮುಜುಗರ ನಮಗೆ. ನಮ್ಮ ಹೃದಯದಲ್ಲಿರುವುದು ಸಮಾಧಾನವಲ್ಲ ಗದ್ದಲ ಎನ್ನುವುದು ಗೊತ್ತಾಗಬಹುದು ಎನ್ನುವ ಭಯ. ನೀವು ನಿಜವಾಗಿ ಇನ್ನೊಬ್ಬರನ್ನು ಪ್ರೀತಿಸುತ್ತಿದ್ದು, ಅವರ ಎದುರು ನಿಮ್ಮ ಹೃದಯವನ್ನು ತೆರೆದಿಟ್ಟಾಗ, ಎಲ್ಲಿ ಅವರು ನಿಮ್ಮನ್ನು ಪರ್ಸನ್ ಅಲ್ಲ, ಪಬ್ಲಿಕ್ ಎಂದುಕೊಳ್ಳುವರೋ ಎನ್ನುವ ಗಾಬರಿ ನಿಮಗೆ.
ಆದ್ದರಿಂದಲೇ ಜನ ಹಗುರಾದ ಸಂಬಂಧಗಳನ್ನು ಬಯಸುತ್ತಾರೆ. ಅವರು ಸಂಬಂಧಗಳನ್ನು ಆಳವಾಗಿ ಪ್ರವೇಶಿಸಲು ಹೆದರುತ್ತಾರೆ, ಕೇವಲ ಹಿಟ್ ಆ್ಯಂಡ್ ರನ್, ಕೇವಲ ಪ್ರೀತಿಯ ಹೊರ ಪದರನ್ನು ಮುಟ್ಟಿ, ಸಂಬಂಧ commitment ಆಗುವ ಮೊದಲು ತಪ್ಪಿಸಿಕೊಂಡು ಓಡಿಹೋಗಲು ಬಯಸುತ್ತಾರೆ. ಅವರಿಗೆ ಕೇವಲ ಸೆಕ್ಸ್ ನಲ್ಲಿ ಆಸಕ್ತಿ, ಅದೂ ಕೂಡ ತುಂಬ ದುರ್ಬಲ, ತುಂಬ ಮೇಲು ಮೇಲಿನ ರೀತಿಯದು. ಕೇವಲ ಗಡಿಗಳನ್ನು ಮಾತ್ರ ಮುಟ್ಟಲಾಗಿದೆ, ಆದರೆ ಇದು ಪ್ರೇಮವಲ್ಲ ; ಇದು ದೈಹಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಒಂದು ರೀತಿಯಾಗಬಹುದೇ ಹೊರತು ಇದಕ್ಕಿಂತ ಖಂಡಿತ ಒಂದು ಚೂರೂ ಹೆಚ್ಚಿನದಲ್ಲ.
ಸಂಬಂಧ ಇಂಟಿಮೇಟ್ ಆಗಿರದೇ ಇರುವಾಗ ನೀವು ನಿಮ್ಮ ಮುಖವಾಡಗಳನ್ನು ಧರಿಸಿಕೊಂಡೇ ಇರಬಹುದು. ಆಗ ನೀವು ನಗುವಾಗ, ಸ್ವತಃ ನಿಮಗೆ ನಗುವ ಅವಶ್ಯಕತೆ ಇಲ್ಲ, ನಿಮ್ಮ ಮುಖವಾಡ ಆ ಕೆಲಸ ಮಾಡುತ್ತದೆ. ನೀವು ನಿಜವಾಗಿ ಸಂಬಂಧಗಳ ಆಳವನ್ನು ಪ್ರವೇಶಿಸಬಯಸುತ್ತೀರಾದರೆ, ಕೆಲವೊಂದು ಅಪಾಯಗಳಿವೆ. ನೀವು ಬೆತ್ತಲಾಗಬೇಕಾಗುತ್ತದೆ, ಬೆತ್ತಲಾಗುವುದೆಂದರೆ ನಿಮ್ಮೊಳಗಿನ ಎಲ್ಲ ದೌರ್ಬಲ್ಯಗಳನ್ನ ಎದುರು ಇರುವವರಿಗೆ ಗೊತ್ತಾಗುವಂತೆ ಮಾಡುವುದು.
ಒಂದು ದಿನ ನಸ್ರುದ್ದೀನ್ ತಾನು ಪ್ರೀತಿಸಿದ ಹುಡುಗಿಯ ಜೊತೆಗಿನ ತನ್ನ ಮದುವೆ ಮುರಿದ ಬಿದ್ದ ವಿಷಯವನ್ನು ತನ್ನ ಗೆಳೆಯನಿಗೆ ಹೇಳುತ್ತಿದ್ದ.
“ ತನ್ನನ್ನು ಮದುವೆಯಾಗಬೇಕಾದರೆ, ನಾನು ಕುಡಿತ, ತಂಬಾಕು ಮತ್ತು ಜೂಜು ಬಿಟ್ಟುಬಿಡಬೇಕೆಂದು ಆಕೆ ಕರಾರು ಹಾಕಿದ್ದಳು “
“ ಮತ್ತೆ ಯಾಕೆ ಮದುವೆ ಮುರಿದು ಬಿತ್ತು, ನಿನ್ನಿಂದ ಕುಡಿತ, ತಂಬಾಕು, ಜೂಜು ಬಿಡಲು ಸಾಧ್ಯವಾಗಲಿಲ್ಲವಾ? “
ಗೆಳೆಯ ಪ್ರಶ್ನೆ ಮಾಡಿದ.
“ ಕುಡಿತ, ತಂಬಾಕು ಮತ್ತು ಜೂಜು ಬಿಟ್ಟ ಮೇಲೆ ನನಗೆ ಇನ್ನೂ ಸುಖಿಯಾಗಿರಬೇಕು ಎನ್ನುವ ಆಸೆಯಾಯಿತು. ನಾನೇ ಮದುವೆ ಬೇಡ ಎಂದೆ “
ನಸ್ರುದ್ದೀನ್ ತನ್ನ ಮದುವೆ ಮುರಿದುಬಿದ್ದ ಕಾರಣ ವಿವರಿಸಿ ಹೇಳಿದ.

