ಸಾವು ಎಂದರೆ ತಪ್ಪೇನೂ ಅಲ್ಲ. ಯಾವಾಗ ಸಾವು ಸಂಭವಿಸುತ್ತದೆಯೋ, ಆಗ ಅದು ಮಹಾ ವಿಶ್ರಾಂತಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಸತ್ತ ದಿನ
ನನ್ನ ಹೆಣವನ್ನು ಸ್ಮಶಾನಕ್ಕೆ
ಹೊತ್ತುಕೊಂಡು ಹೋಗುವಾಗ
ಕಣ್ಣೀರು ಹಾಕಬೇಡಿ.
ನಮ್ಮನ್ನೆಲ್ಲ ಬಿಟ್ಟುಹೋದ
ಎಂದು ದುಃಖಿಸಬೇಡಿ.
ಬಿಟ್ಟುಹೋಗುವುದಕ್ಕೂ
ಸಾವಿಗೂ
ಯಾವುದೇ ಸಂಬಂಧವಿಲ್ಲ.
ಸಂಜೆ ಸೂರ್ಯ ಮುಳುಗುತ್ತಾನೆ
ಬೆಳೆಗಾಗುತ್ತಲೇ ಚಂದ್ರ ಮರೆಯಾಗುತ್ತಾನೆ
ಎಂದರೆ
ಅವರು ನಮ್ಮನ್ನಗಲಿದರು
ಎಂದು ಅರ್ಥವೆ?
ಸಾವು ಎಂದರೆ ಮಿಲನ.
ಗೋರಿ, ಸೆರೆಮನೆಯಂತೆ
ಹೊಸ ಹುಟ್ಟಿನ ಜಾಗ.
ಬಾವಿಯಲ್ಲಿ ಕೊಡ ಮುಳುಗಿದಂತೆ
ದೇಹ, ಮಣ್ಣಿನಲ್ಲಿ ನಾಟಿಯಾಗುತ್ತದೆ.
ಒಳಗೆ ಹೋದದ್ದೆಲ್ಲ
ಹೊಸ ಚೆಲುವಿನೊಂದಿಗೆ ಹೊರ ಬರುತ್ತದೆ.
ನಿನ್ನ ಬಾಯಿ
ಇಲ್ಲಿ ಮುಚ್ಚುತ್ತಿದ್ದಂತೆಯೇ
ಅಲ್ಲಿ ಹೊಸ ಖುಶಿಯಿಂದ ಚೀರುತ್ತದೆ.
ರೂಮಿ
ಸಾವು ಎಂದರೆ ತಪ್ಪೇನೂ ಅಲ್ಲ.
ಯಾವಾಗ ಸಾವು ಸಂಭವಿಸುತ್ತದೆಯೋ, ಆಗ ಅದು ಮಹಾ ವಿಶ್ರಾಂತಿ.
ಯಾವಾಗ ನಿಮ್ಮ ದೇಹ ಪೂರ್ಣವಾಗಿ ಖರ್ಚಾಗುತ್ತದೆಯೋ ಆಗ ನಿಮಗೆ ಬೇಕಾಗಿರುವುದು ಸಾವು ಒಂದೇ. ಆಗ ಸಾವು ಸಂಭವಿಸುತ್ತದೆ ; ಆಗ ನೀವು ಇನ್ನೊಂದು ಆವರಣವನ್ನು ಪ್ರವೇಶಿಸುತ್ತೀರ. ಮುಂದೆ ನೀವು ಮರವಾಗಬಹುದು, ಅಥವಾ ಹಕ್ಕಿಯಾಗಬಹುದು, ಅಥವಾ ಹುಲಿಯಾಗಬಹುದು ಅಥವಾ ಇನ್ನೇನೋ. ಹಳೆದು ಖರ್ಚಾದಾಗ ಅಸ್ತಿತ್ವ ನಿಮಗೆ ಹೊಸ ಆವರಣವನ್ನು ದಯಪಾಲಿಸುತ್ತದೆ
ಸಾವು ಸುಂದರ, ಆದರೆ ಅದಕ್ಕಾಗಿ ಹಂಬಲಿಸಬೇಡಿ. ಏಕೆಂದರೆ ನೀವು ಸಾವನ್ನು ಬೇಡಿಕೊಂಡಾಗ, ಸಾವಿನ ಕ್ವಾಲಿಟಿ, ಆತ್ಮಹತ್ಯೆಯತ್ತ ವಾಲುತ್ತದೆ. ಆಗ ನೀವು ಆತ್ಮಹತ್ಯೆ ಮಾಡಿಕೊಳ್ಳದಿದ್ದರೂ ನಿಮ್ಮ ಸಾವು ಆತ್ಮಹತ್ಯಾತ್ಮಕವಾಗಿರುತ್ತದೆ. ನೀವು ಜೀವಂತವಾಗಿದ್ದಾಗ, ಜೀವಂತಿಕೆಯಿಂದ ಇರಿ ; ತೀರಿಕೊಂಡಾಗ ಸಾವಿಗೆ ಶರಣಾಗಿ. ಆದರೆ ಸಾವು ಬದುಕುಗಳನ್ನು ಒಂದರ ಮೇಲೊಂದು ಎಳೆದುಕೊಂಡು ಗೊಂದಲಕ್ಕೊಳಗಾಗಬೇಡಿ. ಕೆಲವು ಜನರಿರುತ್ತಾರೆ ಸಾವಿಗೆ ಹತ್ತಿರವಾಗಿರುವಾಗಲೂ ಬದುಕಿಗೆ ಅಂಟಿಕೊಂಡಿರುತ್ತಾರೆ. ಇದು ದೊಡ್ಡ ತಪ್ಪು, ಏಕೆಂದರೆ ಸಾವು ಕರೆಯುತ್ತಿದೆಯೆಂದರೆ ನೀವು ಹೋಗಲೇ ಬೇಕು, ಮತ್ತು ಸಂಭ್ರಮದಲ್ಲಿ ಕುಣಿಯುತ್ತ ಹೋಗಬೇಕು. ನೀವು ಸಾವನ್ನು ಬಯಸುತ್ತೀರಾದರೆ, ಅದರ ಬಗ್ಗೆ ವಿಚಾರ ಮಾಡುತ್ತಿದ್ದರೂ ಕೂಡ, ಆಗ ನೀವು ಬದುಕಿರುವಾಗಲೂ ಸಾವಿನ ಐಡಿಯಾಕ್ಕೆ ಅಂಟಿಕೊಂಡಿದ್ದೀರಿ. ಸಾಯುತ್ತಿರುವಾಗಲೂ ಬದುಕಬಯಸುವುದು ಮತ್ತು ಬದುಕಿರುವಾಗಲೂ ಸಾವಿನ ಬಗ್ಗೆ ಯೋಚಿಸುವುದು ಎರಡೂ ಪ್ರಕೃತಿಗೆ ವಿರುದ್ಧ.
ಸಾವು – ಬದುಕು ಏನಿದೆಯೋ ಅದನ್ನು ಸ್ವೀಕರಿಸಿ, ಒಮ್ಮೆ ನೀವು ಯಾವ ಕರಾರುಗಳಿಲ್ಲದೆ ಇವನ್ನು ಸ್ವೀಕಾರ ಮಾಡಿದಿರಾದರೆ, ಆಗ ಎಲ್ಲವೂ ಸುಂದರ. ಆಗ ನೋವಿಗೂ ಕೂಡ ಶುದ್ಧೀಕರಣದ ಶಕ್ತಿ ( purifying effect ) ಲಭ್ಯವಾಗುವುದು. ನಿಮ್ಮ ಪಯಣದ ದಾರಿಯಲ್ಲಿ ನಿಮಗೆ ಯಾವುದು ಎದುರಾದರೂ ಅದರ ಬಗ್ಗೆ ಕೃತಜ್ಞರಾಗಿರಿ.
ಒಂದು ದಿನ ಬಾಗ್ದಾದ್ ನ ಶ್ರೀಮಂತ ವ್ಯಾಪಾರಿಯೊಬ್ಬ ತನ್ನ ಸೇವಕನನ್ನು ಕೆಲ ಅಡುಗೆಯ ಸಾಮಾನು ತರಲು ಮಾರುಕಟ್ಟೆಗೆ ಕಳುಹಿಸಿದ. ಕೆಲವೇ ಕೆಲವು ನಿಮಿಷಗಳ ನಂತರ ಆ ಸೇವಕ, ಗಾಬರಿಯಿಂದ ಏದುಸಿರು ಬಿಡುತ್ತ ಶ್ರೀಮಂತ ವ್ಯಾಪಾರಿಯ ಹತ್ತಿರ ವಾಪಸ್ ಬಂದ.
“ ಒಡೆಯ, ನಿಮ್ಮ ಲಾಯದಲ್ಲಿರುವ ಅತ್ಯಂತ ವೇಗವಾಗಿ ಓಡುವ ಬಲಶಾಲಿ ಕುದುರೆಯೊಂದನ್ನು ದಯಮಾಡಿ ನನಗೆ ತಕ್ಷಣ ಕೊಡಿ. ನನ್ನ ಜೀವ ಉಳಿಸಿಕೊಳ್ಳಲು ನಾನು ಡೆಮಾಸ್ಕಸ್ ಗೆ ತಪ್ಪಿಸಿಕೊಂಡು ಓಡಿ ಹೋಗಬೇಕು.” ಅಳುತ್ತ ವ್ಯಾಪಾರಿಯನ್ನು ಬೇಡಿಕೊಂಡ.
“ ಏನಾಯಿತು? ಯಾಕಿಷ್ಟು ಗಾಬರಿ? “ ವ್ಯಾಪಾರಿ ವಿಚಾರಿಸಿದ.
“ ನಾನು ಅಡುಗೆ ಸಾಮಾನು ತರಲು ಮಾರುಕಟ್ಟೆಗೆ ಹೋದಾಗ, ಅಲ್ಲಿ ಸಾವು ನನಗಾಗಿ ಕಾದು ನಿಂತಿರುವುದನ್ನ ಕಂಡೆ, ನನ್ನನ್ನು ನೋಡಿದೊಡನೆ ಸಾವು, ವಿಚಿತ್ರ ರೀತಿಯ ಸನ್ನೆ ಮಾಡುತ್ತ ನನ್ನ ಹತ್ತಿರ ನಡೆಯಲು ಶುರು ಮಾಡಿತು. ದಯಮಾಡಿ ನನಗೆ ಕುದುರೆ ಕೊಡಿ ನಾನು ಡೆಮಾಸ್ಕಸ್ ಗೆ ಓಡಿ ಹೋಗಿಬಿಡುತ್ತೇನೆ. “
ವ್ಯಾಪಾರಿಗೆ ಸೇವಕನ ಮೇಲೆ ಕರುಣೆ ಬಂತು. ತನ್ನ ಬಳಿಯಿದ್ದ ಅತ್ಯುತ್ತಮ ಕುದುರೆಯನ್ನು ಸೇವಕನಿಗೆ ನೀಡಿ ಅವನನ್ನು ಡೆಮಾಸ್ಕಸ್ ಗೆ ಬೀಳ್ಕೊಟ್ಟ.
ನಂತರ ಸೇವಕ ವಿವರಿಸಿದ ಘಟನೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ವ್ಯಾಪಾರಿ ಸ್ವತಃ ತಾನೇ ಮಾರುಕಟ್ಟೆಗೆ ಬಂದ. ಅಲ್ಲಿ ಸೇವಕ ಹೇಳಿದಂತೆ ಸಾವು ಕಾದು ನಿಂತಿರುವುದನ್ನ ಕಂಡ.
“ ಯಾಕೆ ನೀನು ನನ್ನ ಸೇವಕನನ್ನು ನೋಡಿ ವಿಚಿತ್ರ ಸನ್ನೆ ಮಾಡಿದೆ? “ ವ್ಯಾಪಾರಿ ಸಾವನ್ನು ಮಾತನಾಡಿಸಿದ.
“ ಹಾಗೇನು ಮಾಡಲಿಲ್ಲವಲ್ಲ, ಬದಲಾಗಿ ಅವನನ್ನು ಇಲ್ಲಿ ಕಂಡು ನನಗೆ ಆಶ್ಚರ್ಯವಾಯಿತು. ಏಕೆಂದರೆ ಇವತ್ತು ಸಂಜೆ ಡೆಮಾಸ್ಕಸ್ ನಲ್ಲಿ ನನಗೆ ಅವನೊಂದಿಗೆ ಭೇಟಿ ನಿರ್ಧಾರವಾಗಿದೆ.

