ಸಾಚಾತನ ( Authenticity) : ಓಶೋ 365 #Day 64

ಯಾವುದು ಹೆಚ್ಚಾಗಬಾರದು ಎಂದು ನಿಮಗನಿಸುತ್ತದೆಯೋ ಅದರೆಡೆ ಮುಖ ಮಾಡಬೇಡಿ, ಆಗ  ಅದು ತಾನೇ ನಾಶವಾಗುತ್ತದೆ ; ಹೇಗೆ ನೀರು, ಗೊಬ್ಬರ ಹಾಕದ ಸಸಿ ಬಾಡಿ ಮುದುರಿ ಹೋಗುತ್ತದೆಯೋ ಹಾಗೆ. ಯಾವುದು ನಿಮಗೆ ಸಾಚಾ ಅನಿಸುವುದಿಲ್ಲವೋ ಅದನ್ನು ಎತ್ತಿ ಪಕ್ಕಕ್ಕಿಡಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ಇನ್ನೇನು ನೀವು ನಗಬೇಕು ಆದರೆ ಯಾಕೋ ಈ ನಗು ಕೃತಕ ಎಂದು ನಿಮಗೆ ಅನಿಸಿದರೆ ತಕ್ಷಣ ಆ ನಗುವನ್ನು ಮಧ್ಯದಲ್ಲಿಯೇ ನಿಲ್ಲಿಸಿಬಿಡಿ ; ನಿಮ್ಮ ತುಟಿಗಳಿಗೊಂದಿಷ್ಟು ವಿಶ್ರಾಂತಿ ನೀಡಿ ಮತ್ತು ನಿಮ್ಮ ಎದುರು ಇರುವವರಿಗೆ ನಿಮ್ಮನ್ನು  ಕ್ಷಮಿಸಲು ಹೇಳಿ. ಹೇಳಿ ಅವರಿಗೆ ನಿಮ್ಮ ನಗೆ ಕೃತಕವಾಗಿತ್ತು ಎಂದು ಮತ್ತು ಅದಕ್ಕಾಗಿ ಕ್ಷಮಿಸಿ ಎಂದು. ನಿಮ್ಮ ನಗು ಸಾಚಾ ಆಗಿದ್ದರೆ ಆಗ ಓಕೆ ; ಅಥವಾ ನಿಮಗೆ ನಗು ಬರಲಿಲ್ಲವೆಂದರೆ ಅದು ಕೂಡ ಓಕೆ. ನೀವಾದರೂ ಏನು ಮಾಡಬಹುದಿತ್ತು? ನಗು ಹೃತ್ಪೂರ್ವಕವಾಗಿ ಬಂದರೆ ಓಕೆ, ನಗು ಬರಲಿಲ್ಲವಾದರೂ ಓಕೆ. ನಗುವಿಗೆ ಒತ್ತಾಯ ಮಾಡುವುದು ಸಾಧ್ಯವಿಲ್ಲ.

ಸಾಮಾಜಿಕ ನೀತಿ ನಿಯಮಾವಳಿಗಳನ್ನ ಎತ್ತಿ ತಿಪ್ಪೆಗೆಸೆಯಿರಿ ಎಂದು ನಾನೇನೂ ಹೇಳುತ್ತಿಲ್ಲ. ನಿಮ್ಮ ಕ್ರಿಯೆಯ ಮೇಲೆ ಗಮನವಿಡಿ ಎಂದಷ್ಟೇ ಹೇಳುತ್ತಿದ್ದೇನೆ. ನೀವು ನಕಲಿ ಮಾಡಲೇಬೇಕಾಗಿದ್ದಲ್ಲಿ ಪ್ರಜ್ಞಾಪೂರ್ವಕವಾಗಿ ಮಾಡಿ. ನಿಮ್ಮ ಬಾಸ್ ಎದುರು ನೀವು ನಗಲೇ ಬೇಕಾದರೆ ನಕ್ಕುಬಿಡಿ ಪರವಾಗಿಲ್ಲ ಆದರೆ ಆ ನಗು ಸಾಚಾ ಅಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ. ನಿಮ್ಮ ಬಾಸ್ ಬೇಕಾದರೆ ಮೋಸ ಹೋಗಲಿ, ಆದರೆ ನಿಮ್ಮ ನಗು ನಿಮಗೆ ಮೋಸ ಮಾಡದಿರಲಿ, ಅದು ನನ್ನ ಪಾಯಿಂಟ್. ನೀವು ಅಪ್ರಜ್ಞಾಪೂರ್ವಕವಾಗಿ ನಕ್ಕಾಗ ನಿಮ್ಮ ಬಾಸ್ ಮೋಸ ಹೋಗದಿರಬಹುದು ( ಬಾಸ್ ಗಳನ್ನು ಮೋಸ ಮಾಡುವುದು ಕಷ್ಟ) ಆದರೆ ಸ್ವತಃ ನೀವು ಮೋಸ ಹೋಗಬಹುದು. ಆಗ ನಾನು ಪರಿಪೂರ್ಣ ಎಂದು ನೀವು ಬೆನ್ನು ತಟ್ಟಿಕೊಳ್ಳಬಹುದು. ಒಳ್ಳೆಯ ವ್ಯಕ್ತಿ ನೀವು,  ಆದರೆ  ದಾರಿ ತಪ್ಪುತ್ತಿದ್ದೀರಿ.

ಕೆಲವೊಮ್ಮೆ ನಿಮಗೆ  ಅವಶ್ಯಕತೆ ಇದೆ ಎಂದನಿಸಿದಾಗ ( ಕೆಲವೊಮ್ಮೆ ಅವಶ್ಯಕತೆ ಇರುತ್ತದೆ ಕೂಡ) ; ಬದುಕು ಸಂಕೀರ್ಣ ಮತ್ತು ನೀವು ಒಂಟಿ ಅಲ್ಲ ಈ ಜಗತ್ತಿನಲ್ಲಿ, ಈ ನಕಲೀ ಜಗತ್ತಿನಲ್ಲಿ ನೀವು ಏನೇನೋ ಮಾಡಬೇಕಾಗಿರಬಹುದು ಆಗ ನೀವೂ ನಕಲಿ ಮಾಡಿ, ಆದರೆ ಪ್ರಜ್ಞಾಪೂರ್ವಕವಾಗಿ. ಆದರೆ ನಿಮ್ಮ ಸಂಬಂಧಗಳಲ್ಲಿ, ಎಲ್ಲಿ ನಿಮ್ಮ ಸಾಚಾತನಕ್ಕೆ ಮಹತ್ವ ಇದೆಯೋ ಅಲ್ಲಿ ನಕಲಿ ಮಾಡಬೇಡಿ.

ಸಾವನ್ನು ಎದುರು ನೋಡ್ತಾ ಇರೋ ಝೆನ್ ಮಾಸ್ಟರ್, ತನ್ನ ಶಿಷ್ಯರನ್ನು ಎದುರು ಕೂರಿಸಿಕೊಂಡು ಒಂದು ಕೊನೆಯ ಮಾತು ಹೇಳೋದು ಝೆನ್’ಲ್ಲಿ ಒಂದು ಬಹು ಮುಖ್ಯ ಸಂಪ್ರದಾಯ. ಹೀಗೆ ಝೆನ್ ಮಾಸ್ಟರ್’ಗಳು ಹೇಳಿದ ಕೊನೆಯ ಮಾತುಗಳನ್ನ, ಪದ್ಯಗಳನ್ನ, ಝೆನ್ ವಿದ್ಯಾರ್ಥಿಗಳು ತುಂಬ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ.

ಝೆನ್ ಮಾಸ್ಟರ್ ಬಾಂಕಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಶಿಷ್ಯರೆಲ್ಲ ಬಾಂಕಿಯ ಸುತ್ತ ನೆರೆದಿದ್ದರು. ಸಾವಿಗೂ ಮೊದಲು ಕೊನೆಯದಾಗಿ ಒಂದು ಜ್ಞಾನದ ಮಾತು ಹೇಳುವಂತೆ ಹಿರಿಯ ಶಿಷ್ಯ, ಮಾಸ್ಟರ್ ಬಾಂಕಿಯನ್ನು ಕೇಳಿಕೊಂಡ.

ಒಂದು ನಿಮಿಷ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಿದ ಬಾಂಕಿ ಕೊನೆಯದಾಗಿ ಮಾತನಾಡಿದ,

“ ಸಾಯಲು ನನಗೆ ಭಯವಾಗುತ್ತಿದೆ “

ಈ ಮಾತು ಹೇಳಿತ್ತಿದ್ದಂತೆಯೇ ಬಾಂಕಿ, ಕೊನೆಯ ಉಸಿರೆಳೆದ.

ಈ ಮಾತು ಕೇಳುತ್ತಿದ್ದಂತೆಯೇ ಸುತ್ತ ಸೇರಿದ್ದ ಶಿಷ್ಯರಿಗೆಲ್ಲ ಆಶ್ಚರ್ಯ, ಆಘಾತ ಆಯಿತು. ಆಗ ಅಲ್ಲಿಗೆ ಬಂದ ಇನ್ನೊಬ್ಬ ಝೆನ್ ಮಾಸ್ಟರ್ ಗೆ, ಶಿಷ್ಯರು ಪ್ರಶ್ನೆ ಮಾಡಿದರು.

“ಮಾಸ್ಟರ್ ಬಾಂಕಿಗೆ ಜ್ಞಾನೋದಯವಾಗಿದ್ದರೆ, ಅವನು ಈ ಥರ ಉತ್ತರ ಕೊಡುತ್ತಿರಲಿಲ್ಲ ಅಲ್ಲವೆ? “

ಮಾಸ್ಟರ್ ಗದ್ಗತಿತನಾಗಿ ಉತ್ತರ ಕೊಟ್ಟ.

“ ಬಾಂಕಿಯ ಉತ್ತರ ಕೇಳಿದ ಮೇಲೆ ನನಗಂತೂ ಒಂದು ವಿಷಯ ಸ್ಪಷ್ಚವಾಯಿತು, ಬಾಂಕಿಗೆ ನಿಜವಾಗಿಯೂ ಜ್ಞಾನೋದಯವಾಗಿತ್ತು. ಏಕೆಂದರೆ ಝೆನ್’ಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಠ ಜ್ಞಾನವೆಂದರೆ ಅದು ಸಾಚಾತನ “

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.