ಬಹಳಷ್ಟು ಬಾರಿ ನಿರ್ವಾಣ, ಬೆಳಕು ಗಳ ಮಿಣುಕು ದರ್ಶನವಾದರೂ ಅವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಇವನ್ನು ಬಹಳಷ್ಟು ಹಿಡಿದಿಟ್ಟುಕೊಳ್ಳಲು ಆಗಲಿಲ್ಲವಲ್ಲ ಎಂದು ಚಿಂತೆ ಮಾಡಬೇಡಿ. ಈ ಎಲ್ಲವನ್ನೂ ಮರೆತುಬಿಡಿ. ಅವು ಸಂಭವಿಸಿದ ಸಂದರ್ಭಗಳನ್ನು ಮಾತ್ರ ನೆನಪಿಟ್ಟುಕೊಳ್ಳಿ ಮತ್ತು ಅದೇ ಸಂದರ್ಭಗಳಲ್ಲಿ ಮತ್ತೆ ಮತ್ತೆ ಪ್ರವೇಶಿಸುವ ಪ್ರಯತ್ನ ಮಾಡಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಅನುಭವ ಅಷ್ಟು ಮುಖ್ಯವಲ್ಲ. ಆದರೆ ನಿಮಗೆ ಅನಿಸುವ ಭಾವ, ಆ ಸಂದರ್ಭ ಬಹಳ ಮುಖ್ಯ. ನೀವು ಆ ಸಂದರ್ಭವನ್ನು ಮರು ಸೃಷ್ಟಿ ಮಾಡುವಿರಾದರೆ ಆ ಅನುಭವ ನಿಮಗೆ ಮತ್ತೆ ಸಾಧ್ಯವಾಗುವುದು. ಅನುಭವ ಮುಖ್ಯವಲ್ಲ, ಸಂದರ್ಭ ಮುಖ್ಯ ; ನೀವು ಹೇಗೆ ಫೀಲ್ ಮಾಡಿಕೊಳ್ಳುತ್ತಿದ್ದೀರಿ ? ಹರಿಯುವಂತೆ? , ಪ್ರೀತಿಯಂತೆ?….. ಆ ಸಂದರ್ಭ ಯಾವುದು? ಹಿನ್ನೆಲೆಯಲ್ಲಿ ಸಂಗೀತ ಇರಬಹುದು, ಸುತ್ತ ಜನ ಡಾನ್ಸ್ ಮಾಡುತ್ತಿರಬಹುದು, ಊಟ ಮಾಡುತ್ತಿರಬಹುದು. ಆ ಊಟದ ರುಚಿ ನಿಮಗೆ ನೆನಪಿರಲಿ, ನಿಮ್ಮ ಹತ್ತಿರ ಕುಳಿತಿರುವ ಅದ್ಭುತ ವ್ಯಕ್ತಿ ನಿಮಗೆ ನೆನಪಿರಲಿ, ಅಥವಾ ನಿಮ್ಮ ಜೊತೆ ಮಾತನಾಡುತ್ತಿರುವ ನಿಮ್ಮ ಗೆಳೆಯ ಮತ್ತು ಆಗ ಥಟ್ಟನೇ….. ಆ ಮಿಂಚು ಸಂಭವಿಸಿದಾಗ ಸುತ್ತ ಇದ್ದ ಪರಿಮಳ ನಿಮಗೆ ನೆನಪಿರಲಿ, ಆ ಆವರಣ ನಿಮಗೆ ನೆನಪಿರಲಿ. ಮತ್ತೆ ಆ ಆವರಣ ವನ್ನು ಸೃಷ್ಟಿಸುವ ಪ್ರಯತ್ನ ಮಾಡಿ. ಮೌನವಾಗಿ ಕುಳಿತುಕೊಂಡು ಆ ಸಂದರ್ಭವನ್ನು ಮತ್ತೆ ಸೃಷ್ಟಿಸುವ ಪ್ರಯತ್ನ ಮಾಡಿ.
ಕೆಲವೊಮ್ಮೆ ಆ ಮಿಂಚು ಸಂಭವಿಸುವುದು ಆಕಸ್ಮಿಕವಾಗಿ. ಇಡೀ ಯೋಗ ವಿಜ್ಞಾನವನ್ನು ಇಂಥ ಆಕಸ್ಮಿಕಗಳನ್ನು ಆಧರಿಸಿ ಡೆವಲೊಪ್ ಮಾಡಲಾಗಿದೆ. ಮೊದಲಬಾರಿ ಜನ ನಿರ್ವಾಣವನ್ನ ನಿರೀಕ್ಷಿಸುತ್ತಿರಲಿಲ್ಲ ; ಅವರು ಅದನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ? ಮೊದಲಬಾರಿ ಅದು ಸಂಭವಿಸಿದ್ದು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಮತ್ತು ಆಗ ಅದು ಅವರ ಅರಿವಿಗೆ ಬಂದಿದೆ. ನಂತರ ಅವರು ಅದನ್ನು ಬಯಸುತ್ತಿದ್ದಾರೆ, ಅದನ್ನು ಪಡೆದುಕೊಳ್ಳುವ ವಿಧಾನಗಳಿಗಾಗಿ ಹುಡುಕಾಡುತ್ತಿದ್ದಾರೆ. ಮತ್ತೆ ಅದೇ ಸಂದರ್ಭ ಇರುವಾಗ ಆ ಅನುಭವ ಮತ್ತೆ ಆಗಬಹುದೆಂದು ಅವರು ಸ್ವಾಭಾವಿಕವಾಗಿ ತಿಳಿದುಕೊಂಡಿರುತ್ತಾರೆ. ಹಾಗೆ trial & error ಆಧಾರದ ಮೇಲೆ, ಇಡೀ ಯೋಗ ವಿಜ್ಞಾನ, ತಂತ್ರ ಮತ್ತು ಝೆನ್ ನ ಡೆವಲಪ್ ಮಾಡಲಾಗಿದೆ. ಹೀಗೆ ಇವುಗಳನ್ನು ಡೆವಲಪ್ ಮಾಡಲು ಶತಮಾನಗಳಷ್ಟು ಸಮಯ ವ್ಯಯವಾಗಿದೆ.
ಆದರೆ ಪ್ರತಿಯೊಬ್ಬರೂ ಯಾವ ಸಂದರ್ಭದಲ್ಲಿ ತಮಗೆ ನಿರ್ವಾಣದ ಮೊದಲ ಮಿಣುಕು ನೋಟ ಸಾಧ್ಯವಾಯಿತು, ಸಮಾಧಿಯ ಅನುಭವವಾಗಲು ಶುರುವಾಯಿತು ಎನ್ನುವುದನ್ನ ಹುಡುಕಿ ನೆನಪಿಟ್ಟುಕೊಳ್ಳಬೇಕು. ಪ್ರತಿಯೊಬ್ಬರಿಗೆ ಅವರ ಅನುಭವ ವ್ಯಕ್ತಿ ವಿಶಿಷ್ಟವಾಗಿರುತ್ತದೆ. ನೀವು ಕೊಂಚ ಎಚ್ಚರವಾಗಿದ್ದಾಗ, ಹಲವು ಅನುಭವಗಳ ನಂತರ ಇಂಥ ಅನುಭವಗಳನ್ನು ಸೃಷ್ಟಿಸಿಕೊಳ್ಳುವ ಬಗೆ ನಿಮಗೆ ಗೊತ್ತಾಗುತ್ತದೆ.
ಝೆನ್ ಮಾಸ್ಟರ್ ಹಾಜನ್ ಮತ್ತು ಮಾಸ್ಟರ್ ಕೈಶಿನ್ ಝೆಂಜಿ ಜೊತೆ ಜೊತೆಯಾಗಿ ಝೆನ್ ಅಧ್ಯಯನ ಮಾಡಿದವರು. ಒಮ್ಮೆ ಕೈಶಿನ್ ಝೆಂಜಿ, ಮಾಸ್ಟರ್ ಹಾಜನ್ ನ ಪ್ರಶ್ನೆ ಮಾಡುತ್ತಾರೆ.
“ ಮಾಸ್ಟರ್, ಈಗ ಎಲ್ಲಿಗೆ ಹೋಗುತ್ತಿದ್ದೀ ? “
“ಗೊತ್ತು ಗುರಿಯಿಲ್ಲದೇ ತೀರ್ಥಯಾತ್ರೆ ಮಾಡುತ್ತಿದ್ದೇನೆ “
ಮಾಸ್ಟರ್ ಹಾಜನ್ ಉತ್ತರಿಸಿದ.
“ತೀರ್ಥಯಾತ್ರೆಯ ಉದ್ದೇಶ ಏನು ? “
ಕೈಶಿನ್ ಝೆಂಜಿ ಮರಳಿ ಪ್ರಶ್ನೆ ಮಾಡುತ್ತಾರೆ.
“ ಗೊತ್ತಿಲ್ಲ “ ಮಾಸ್ಟರ್ ಹಾಜನ್ ನ ಸ್ಪಷ್ಟ ಉತ್ತರ.
“ ಆಹಾ! “ ಗೊತ್ತಿಲ್ಲ “ ಅನ್ನೋದು ಅತ್ಯಂತ ಆಪ್ತ “
ಕೈಶಿನ್ ಝೆಂಜಿ ಖುಶಿಯಿಂದ ಚೀರಿಕೊಂಡರು.
ಕೈಶಿನ್ ಝೆಂಜಿಯ ಉದ್ಗಾರ ಕೇಳುತ್ತಿದ್ದಂತೆಯೇ ಮಾಸ್ಟರ್ ಹಾಜನ್ ಗೆ ಜ್ಞಾನೋದಯವಾಯಿತು.

